ತೆಂಗು ಬೆಳೆಯನ್ನು ಮೊದಲಿನಿಂದಲೂ ಯಾವುದೇ ರೀತಿಯ ಗೊಬ್ಬರವನ್ನು ಬಳಸದೆ ಬೆಳೆಸಿಕೊಂಡು ಬರಲಾಗುತ್ತಿದೆ. ಆದರೆ ಇತರೆ ಬೆಳೆಗಳಿಗೆ ನೀಡುವಂತೆ ತೆಂಗಿನ ಬೆಳೆಗೂ ಸಹ ಅವಶ್ಯಕ ಪೋಷಕಾಂಶಗಳನ್ನು ಒದಗಿಸಬೇಕು ಎಂದು ದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಅಭಿಪ್ರಾಯ ಪಟ್ಟರು.
ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಹಾಗೂ ತೆಂಗು ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಶಿರಾ ತಾಲೂಕಿನ ಮುದುಗೆರೆ ತೋಟಗಾರಿಕಾ ಕ್ಷೇತ್ರದಲ್ಲಿಂದು ಆಯೋಜಿಸಿದ್ದ ತೆಂಗು ಸಂಯೋಜಿತ ಬೇಸಾಯ ಯೋಜನೆಯಡಿಯಲ್ಲಿ ತೆಂಗು ಬೆಳೆಗಾರರಿಗೆ ಪರಿಕರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜಿಲ್ಲೆಯ ಕೆಲವು ಭಾಗಗಳಲ್ಲಿ ತೆಂಗು ಪ್ರಮುಖ ಬೆಳೆಯಾಗಿದ್ದು, ತೆಂಗು ಬೆಳೆಯಲ್ಲಿ ಅನೇಕ ರೀತಿಯ ರೋಗಗಳು ಕಾಣಿಸಿಕೊಂಡು ತೆಂಗು ಬೆಳೆಯು ನಾಶವಾಗುತ್ತಿದೆ.
ಈ ನಿಟ್ಟಿನಲ್ಲಿ ಸರ್ಕಾರ ತೆಂಗು ಬೆಳೆಯನ್ನು ಸಂರಕ್ಷಿಸಲು ರೈತರಿಗೆ ಪೋಷಕಾಂಶಗಳುಳ್ಳ ಗೊಬ್ಬರವನ್ನು ನೀಡುತ್ತಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ರೈತರ ಅನುಕೂಲಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಯೋಜನೆಗಳ ಕುರಿತು ರೈತರಿಗೆ ಸರಿಯಾದ ಮಾಹಿತಿ ದೊರಕದೆ ಸವಲತ್ತುಗಳನ್ನು ಪಡೆದು ಕೊಳ್ಳುವುದರಲ್ಲಿ ಹಿಂದೆ ಉಳಿಯುತ್ತಿರುವುದರಿಂದ ಯೋಜನೆಗಳ ಬಗ್ಗೆ ಹೆಚ್ಚು ಪ್ರಚಾರ ಮಾಡುವ ಮೂಲಕ ರೈತರಿಗೆ ಸರ್ಕಾರಿ ಯೋಜನೆಗಳನ್ನು ತಲುಪಿಸಬೇಕು ಎಂದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಶಿರಾ ತಾಲ್ಲೂಕಿನಲ್ಲಿ 11821 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯನ್ನು ಬೆಳೆಯಲಾಗುತ್ತಿದ್ದು, ಈ ಯೋಜನೆಯಿಂದ 2346 ರೈತರಿಗೆ ಅನುಕೂಲವಾಗಲಿದೆ, ಜಿಲ್ಲೆಯಲ್ಲಿ ಮೊದಲ ಬಾರಿಗೆ ಸಾಂಕೇತಿಕವಾಗಿ ಈ ಪೋಷಕಾಂಶ ಗೊಬ್ಬರಗಳನ್ನು ವಿತರಿಸಲಾಗುತ್ತಿದ್ದು ಜಿಲ್ಲೆಯ ಎಲ್ಲಾ ತೆಂಗು ಬೆಳೆಗಾರರಿಗೆ ಗೊಬ್ಬರಗಳನ್ನು ವಿತರಿಸಲಾಗುತ್ತದೆ ಎಂದು ತಿಳಿಸಿದರು.
ಪ್ರತಿಯೊಂದು ಹಳ್ಳಿಯ ರೈತರಿಗೂ ಈ ಯೋಜನೆಯ ಬಗ್ಗೆ ಮಾಹಿತಿ ಒದಗಿಸಬೇಕು ಮತ್ತು ಕರಪತ್ರ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚು ಹೆಚ್ಚು ಪ್ರಚಾರ ಮಾಡಿ ಜಿಲ್ಲೆಯ ರೈತರು ಇದರ ಅನುಕೂಲ ಪಡೆಯುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಶಾರದಮ್ಮ , ತಹಶೀಲ್ದಾರ್ ದತ್ತಾತ್ರೇಯ ಗಾದ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸುಧಾಕರ್, ಡಿ.ವೈ.ಎಸ್.ಪಿ. ಶೇಖರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.