ಎಲ್ಲಾ ಆಡಳಿತ ಇಲಾಖೆಗಳ ತಾಯಿ ಕಂದಾಯ ಇಲಾಖೆ ತಹಶೀಲ್ದಾರ್ ಆರತಿ ಬಿ

ಗುಬ್ಬಿ ಸುದ್ದಿ

ಕಂದಾಯ ಇಲಾಖೆಯು ರಾಜ್ಯದ ಆಡಳಿತ ವ್ಯವಸ್ಥೆಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದ್ದು, ಕಂದಾಯ ಇಲಾಖೆಯನ್ನು ಸಾಮಾನ್ಯವಾಗಿ ಎಲ್ಲಾ ಆಡಳಿತ ಇಲಾಖೆಗಳ ತಾಯಿ ಎಂದು ಕರೆಯಲಾಗುತ್ತದೆ ಎಂದು ತಹಶೀಲ್ದಾರ್ ಆರತಿ ಬಿ. ತಿಳಿಸಿದರು.

 

 

 

 

ಕಂದಾಯ ಇಲಾಖೆಯು ನಾಗರಿಕರ ಜೀವನದ ಬಹುತೇಕ ಎಲ್ಲಾ ಅಂಶಗಳನ್ನು ಸ್ಪರ್ಶಿಸುವ ಮೂಲಕ ವ್ಯಾಪಕವಾಗಿದ್ದು, ಸಾಮಾಜಿಕ ಅಭಿವೃದ್ಧಿಗೆ ಇಲಾಖೆಯ ಕೊಡುಗೆ ಅಪಾರ. ಶ್ರೀಸಾಮಾನ್ಯನ ಬದುಕಿನ ಪ್ರತಿಯೊಂದು ರಂಗದಲ್ಲೂ ಕಂದಾಯ ಇಲಾಖೆಯ ಪಾತ್ರ ಬಹುಮುಖ್ಯ ಎಂದು  ತಿಳಿಸಿದರು.

 

 

 

ತಾಲೂಕು ಕಂದಾಯ ಇಲಾಖೆ ವತಿಯಿಂದ ತಾಲೂಕಿನ ಕಸಬಾ ಹೋಬಳಿ ಸುರಿಗೇನಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಕಂದಾಯ ದಿನಾಚರಣೆಯ ಹಾಗೂ ಹೊಸ ವರ್ಷ ಆಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಹುತೇಕ ಇಲಾಖೆಗಳ ಕಾರ್ಯಗಳು ಕಂದಾಯ ಇಲಾಖೆಯ ಮೇಲೆ ಅವಲಂಬಿತವಾಗಿದ್ದು, ಅವುಗಳಲ್ಲಿ ಹೆಚ್ಚಿನವು ಈ ಇಲಾಖೆಗೆ ತಮ್ಮ ಮೂಲವನ್ನು ಮಾತ್ರವಲ್ಲದೆ ತಮ್ಮ ಜಮೀನಿನ ಅಗತ್ಯತೆ ಮತ್ತು ವಿವಿಧ ಇಲಾಖೆಗಳ ಅನುಷ್ಠಾನ ಸೇರಿದಂತೆ ಹಲವು ಸಮಸ್ಯೆಗಳಿಗೆ ಕಂದಾಯ ಇಲಾಖೆಯನ್ನು ಅವಲಂಬಿಸಿವೆ. ನಮ್ಮ ಪ್ರಯತ್ನ ಹಿತಾಸಕ್ತಿ ಇಲ್ಲದೆ ಹೋದರೆ ಸರ್ಕಾರದ ಯೋಜನೆಗಳು ಅನುಷ್ಠಾನ ಸಾಕಾರ ಆಗುವುದಿಲ್ಲ, ಹಾಗಾಗಿ ಸರ್ಕಾರವು ಏನೇ ಯೋಜನೆಗಳನ್ನು ರೂಪಿಸಿದರೂ ಸಹ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಶ್ರದ್ದೆಯಿಂದ ಬದ್ಧತೆಯಿಂದ ಕೆಲಸ ನಿರ್ವಹಿಸುವ ನಂಬಿಕೆಯಿಂದ ಕಂದಾಯ ಇಲಾಖೆಗೆ ಪ್ರಥಮ ಆದ್ಯತೆ ನೀಡುತ್ತಿದ್ದು, ಅದಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸುವ ಜವಾಬ್ದಾರಿಯನ್ನು ಪ್ರತಿಯೊಬ್ಬ ಕಂದಾಯ ನೌಕರರು ತಮ್ಮ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳುವಂತೆ ನೌಕರರಿಗೆ ಕರೆ ನೀಡಿದರು.

 

 

 

 

ಗ್ರೇಡ್ 02 ತಹಶೀಲ್ದಾರ್ ಶಶಿಕಲಾ ಮಾತನಾಡಿ ಕಂದಾಯ ಇಲಾಖೆಯ ನೌಕರರು ಬದಲಾಗುವ ಕಾರ್ಯ ವಿಧಾನಗಳು ಮತ್ತು ನೂತನವಾಗಿ ಜಾರಿಗೆ ಬರುವ ಎಲ್ಲಾ ತಾಂತ್ರಿಕ ನೈಪುಣ್ಯತೆಯನ್ನು ಗಳಿಸಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ಶೀಘ್ರದಲ್ಲಿ ಸೇವೆಗಳನ್ನು ಒದಗಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಕಂದಾಯ ಇಲಾಖೆಯಲ್ಲಿ ಸಿಬ್ಬಂದಿಗಳು ಪ್ರಸಕ್ತ ಸನ್ನಿವೇಶಗಳಿಗೆ ತಕ್ಕಂತೆ ತಮ್ಮ ಕಾರ್ಯ ವಿಧಾನದಲ್ಲಿ ತಾಂತ್ರಿಕತೆ ಅಳವಡಿಸಿಕೊಂಡು, ದಿನನಿತ್ಯದ ಕೆಲಸದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಕಾನೂನುಬದ್ದವಾಗಿ ಶೀಘ್ರದಲ್ಲಿ ಪರಿಹಾರ ಒದಗಿಸಬೇಕು. ಇಲಾಖೆಯ ಸಿಬ್ಬಂದಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿರುವುದರಿಂದ ಉತ್ತಮ ಸಾಧನೆ ಸಾಧಿಸಲು ಸಾಧ್ಯವಾಗಿದೆ. ಇದು ಇನ್ನಷ್ಟು ಸಾಧನೆ ಮಾಡಲು ಪ್ರೇರಣೆಯಾಗಬೇಕಿದೆ ಎಂದು ಕರೆ ನೀಡಿದರು.

 

 

 

ಕಂದಾಯ ಇಲಾಖೆಯು ಜುಲೈ 01 ರಂದು ಹೊಸ ವರ್ಷ ಆರಂಭವಾಗಿ ಜೂನ್ 30 ರಂದು ಮುಕ್ತಾಯವಾಗಲಿದ್ದು, ಇದರ ಜ್ಞಾಪಕಾರ್ಥವಾಗಿ ಕಂದಾಯ ಇಲಾಖೆಯಲ್ಲಿ ಉತ್ತಮ ಕೆಲಸ ನಿರ್ವಹಿಸಿದವರನ್ನು ಕಂದಾಯ ದಿನದಂದು ತಹಶೀಲ್ದಾರ್ ಆರತಿ ಬಿ. ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

 

 

 

 

ವರ್ಷ ಪೂರ್ತಿ ಸಾರ್ವಜನಿಕ ಸೇವೆಯನ್ನು ಒತ್ತಡದಿಂದ ಮಾಡುತ್ತಾ ಬಂದಿರುವ ಕಂದಾಯ ನೌಕರರಲ್ಲಿ ಹುಮ್ಮಸ್ಸು, ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಮ್ಯೂಸಿಕಲ್ ಚೇರ್, ಮನೋರಂಜನೆಯ ಗೀತೆಯ ಜೊತೆಗೆ ನೃತ್ಯ ಮುಖೇನ ವರ್ಷವಿಡಿಯ ಜಂಜಾಟದಿಂದ ಹೊರ ತರುವ ಪ್ರಯತ್ನವನ್ನು ಮಾಡಿದ್ದರಿಂದ ಕಂದಾಯ ಇಲಾಖೆಯ ಸಿಬ್ಬಂದಿಗಳು ಸಂತಸ ವ್ಯಕ್ತಪಡಿಸಿದರು.

 

 

 

 

ಈ ಕಾರ್ಯಕ್ರಮದಲ್ಲಿ ಹೆಚ್ಚುವರಿ ಶಿರಸ್ತೇದಾರ್ ಶ್ರೀರಂಗ, ಪ.ಪಂ ಮುಖ್ಯಾಧಿಕಾರಿ ಮಂಜುಳಾ ದೇವಿ, ಶಿರಸ್ತೇದಾರ್ ಗಳಾದ ಖಾನ್, ಪ್ರಶಾಂತ್, ಲೋಕೇಶ್, ಪ್ರಕಾಶ್, ಸುಷ್ಮಾ, ವರುಣ್, ಮುತ್ತುರಾಜ್, ಕಲ್ಲೇಶ್, ಕಂದಾಯ ನಿರೀಕ್ಷಕರಾದ ಎಸ್ ಕುಮಾರ್, ಸುಮತಿ, ಮೋಹನ್, ಗುರುಪ್ರಸಾದ್ ಸೇರಿದಂತೆ ಹಲವು ಗಣ್ಯರು ಹಾಗೂ ಗ್ರಾಮ ಆಡಳಿತಾಧಿಕಾರಿಗಳು, ಗ್ರಾಮ ಸೇವಕರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *