ತುಮಕೂರು: ಜಿಲ್ಲೆಯ ಪಾವಗಡ ತಾಲೂಕು ಸಿಕೆಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಆರೋಗ್ಯ ತಪಾಸಣಾ ಅಭಿಯಾನ ಯೋಜನೆ ಮತ್ತು ಗರ್ಭಿಣಿ ಮಹಿಳೆಯ ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಸಿಕೆಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅವರು ಆಸ್ಪತ್ರೆಯಲ್ಲಿ ಇರುವಂತಹ ಅವ್ಯವಸ್ಥೆಯನ್ನು ಕಂಡು ತಾಲೂಕು ವೈದ್ಯಾಧಿಕಾರಿ ಡಾ.ಕಿರಣ್‍ಗೆ ತರಾಟೆಗೆ ತೆಗೆದುಕೊಂಡರು.
ಅಸ್ಪತ್ರೆಯಲ್ಲಿ ಉತ್ತಮ ಸೌಲಭ್ಯಗಳಿದ್ದರೂ ಜನರ ಸೇವೆ ಮಾಡುವುದಕ್ಕೆ ಏನಾಗಿದೆ? ಎಂದು ಕೋಪಗೊಂಡ ಅವರು ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದೆ ಜನರು ಸಮಸ್ಯೆಯನ್ನು ಅನುಭವಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಅವರು ಶೀಘ್ರವಾಗಿ ಸಮಸ್ಯೆಗಳನ್ನು ಬಗೆಹರಿಸಿ ಮಾಹಿತಿ ನೀಡುವಂತೆ ಸೂಚಿಸಿದರು.
ಸಿಕೆಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಶೌಚಾಲಯವನ್ನು ಗಮನಿಸಿದ ಅವರು ಆಸ್ಪತ್ರೆ ಪ್ರಾರಂಭವಾದಾಗಿಂದ ಶೌಚಾಲಯ ಬಳಸಿಯೇ ಇಲ್ಲ. ಇದೇ ಹಾದಿಯಲ್ಲಿ ಮುಂದುವರೆದರೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳನ್ನು ಅಮಾನತುಗೊಳಿಸಲು ಶಿಫಾರಸ್ಸು ಮಾಡಲಾಗುವುದು ಎಂದು ಹೇಳುತ್ತಾ ಅಲ್ಲಿಯೇ ಇದ್ದ ತಹಸೀಲ್ದಾರ್ ವರದರಾಜು ಹಾಗೂ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಜಾನಕಿರಾಮ್ ಅವರನ್ನು ತಾವು ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುವುದಿಲ್ಲವೇ ಎಂದು ತರಾಟೆ ತೆಗೆದುಕೊಂಡರು.
ಇತ್ತೀಚಿಗೆ ಇಲ್ಲಿನ ಸರ್ಕಾರಿ ಶಾಲೆಯ ಮಗು ಗಾಯಗೊಂಡು ಆಸ್ಪತ್ರೆಗೆ ಬಂದಿದ್ದರೆ ಸರಿಯಾಗಿ ಚಿಕಿತ್ಸೆ ನೀಡದೆ ಇರುವುದರಿಂದ ಮಗುವಿಗೆ ಗಾಯ ತೀವ್ರವಾಗಿರುವುದನ್ನು ಕಂಡು ಅಲ್ಲಿಯೇ ಇದ್ದ ಆಸ್ಪತ್ರೆಯ ಸಿಬ್ಬಂದಿ ನಾಗರಾಜು ಅವರ ಮೇಲೆ ಸಿಡಿಮಿಡಿಗೊಂಡು ಮಗುವಿಗೆ ಉತ್ತಮ ಚಿಕಿತ್ಸೆ ಕೊಟ್ಟು ವಾಸಿಯಾದ ಬಳಿಕ ಫೋಟೋ ಕಳಿಸಿ ಎಂದು ತಿಳಿಸಿದರು
ನಂತರ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಹಿಳೆಯರನ್ನುದ್ದೇಶಿಸಿ ಮಾತನಾಡಿದ ನಾಗಲಕ್ಷ್ಮಿ ಚೌದರಿ
ನಂತರ ಪಾವಗಡ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಅವರು ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲದಿರುವುದನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಆಸ್ಪತ್ರೆಗೆ ಕನಿಷ್ಟ ಕುಡಿಯುವ ನೀರಿನ ಸೌಲಭ್ಯವನ್ನು ಮಾಡದೇ ಇದ್ದರೆ ತಾವೆಲ್ಲ ಇರುವುದು ಏತಕ್ಕೆ ಎಂದರು. ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರುವುದು ಸಾರ್ವಜನಿಕರಿಂದ ಮಾಹಿತಿ ಪಡೆದುಕೊಂಡ ಅವರು ಈ ಬಗ್ಗೆ ಸ್ಥಳದಲ್ಲಿಯೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿಯನ್ನು ಪಡೆದರು. ಪ್ರಸವ ನಂತರದ ಕೊಠಡಿಗೆ ಭೇಟಿ ನೀಡಿದ ಅವರು ಬಾಣಂತಿಯರ ಆರೋಗ್ಯವನ್ನು ವಿಚಾರಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸದ್ಯ ಪಾವಗಡ ತಾಲೂಕಿನ ಅಧಿಕಾರಿಗಳು ಬೇಜವಾಬ್ದಾರಿತನದಿಂದ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಕನಿಷ್ಟ ಕುಡಿಯುವ ನೀರಿನ ವ್ಯವಸ್ಥೆ ಇಲ್ಲವೆಂದರೆ ಆಸ್ಪತ್ರೆ ನಿರ್ವಹಣೆಯನ್ನು ಎಷ್ಟರ ಮಟ್ಟಿಗೆ ನಿಭಾಯಿಸುತ್ತಿದ್ದಾರೆ ಎನ್ನುವುದು ಕಂಡುಬರುತ್ತದೆ. ವೈದ್ಯರ ಕೊರತೆ ಇರುವುದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿ ಸಮಸ್ಯೆಗಳನ್ನ ಬಗೆಹರಿಸಲು ಮುಂದಾಗುತ್ತೇನೆ ಎಂದರು.
ಬಳಿಕ ಪಟ್ಟಣದ ಡಾ: ಬಿ ಆರ್ ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿದ ಅವರು ವಿದ್ಯಾರ್ಥಿಗಳ ಜೊತೆ ಸಮಾಲೋಚಿಸಿ ಹೆಣ್ಣು ಮಕ್ಕಳು ಹೋರಾಟದ ಮನೋಭಾವವನ್ನು ಬೆಳೆಸಿಕೊಳ್ಳಬೇಕು ತಪ್ಪನ್ನು ಪ್ರಶ್ನಿಸುವಂತಹ ಧೈರ್ಯ ತಮ್ಮಲ್ಲಿ ಬರಬೇಕು. ಸಮಾಜದಲ್ಲಿ ಎದುರಾಗುವಂತಹ ದೌರ್ಜನ್ಯ ಮತ್ತು ಶೋಷಣೆಗಳಿಗೆ ತಾವು ತಲೆಬಾಗದೆ ಧೈರ್ಯದಿಂದ ಹೋರಾಟ ಮಾಡುವಂತಹ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪವಿತ್ರ, ಸಿಪಿಐ ಸುರೇಶ್, ಸಿಡಿಪಿಓ ಸುನಿತಾ, ತಾಲೂಕು ವೈದ್ಯಾಧಿಕಾರಿ ಡಾ: ಕಿರಣ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್, ಪಶುಪಾಲನಾ ಇಲಾಖೆಯ ಹೊರಕೆರಪ್ಪ, ತೋಟಗಾರಿಕಾ ಇಲಾಖೆಯ ವಿಶ್ವನಾಥ್ ಗೌಡ, ಬೆಸ್ಕಾಂ ಎಇಇ ಕೃಷ್ಣಮೂರ್ತಿ, ಬಿಇಓ ಇಂದ್ರಾಣಮ್ಮ, ಆರೋಗ್ಯ ಅಧಿಕಾರಿ ಶಂಸುದ್ದೀನ್, ಆಡಳಿತ ವೈದ್ಯಧಿಕಾರಿ ಎಎಸ್‍ಎಲ್ ಬಾಬು, ಬಿಸಿಎಂ ಅಧಿಕಾರಿ ಗೋಪಾಲಪ್ಪ, ಯಮುನಾ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.