ಮಕ್ಕಳ ಶೈಕ್ಷಣಿಕ ತಳಹದಿ ಗುಣಾತ್ಮಕವಾಗಿರಲಿ: ಸುರೇಶ್‍ಗೌಡ ಆಶಯ

ನೆಲಹಾಳ್‍ನಲ್ಲಿ ಕೋಟಿ ರೂ. ವೆಚ್ಚದ ಸುಸಜ್ಜಿತ ಶಾಲೆ ಲೋಕಾರ್ಪಣೆ

 

 

ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ನೆಲಹಾಳ್ ಗ್ರಾಮದಲ್ಲಿ ಜಪಾನ್ ದೇಶದ ಟಿಮೆಕ್ ಕಂಪನಿಯ ಸಿಎಸ್‍ಆರ್ ನಿಧಿಯಡಿ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಸಜ್ಜಿತ ಕಟ್ಟಡ ಹಾಗೂ ಮೂಲಭೂತ ಸೌಲಭ್ಯಗಳನ್ನು ಶುಕ್ರವಾರ ಶಾಸಕ ಬಿ.ಸುರೇಶ್‍ಗೌಡರು ಹಾಗೂ ಶಿಕ್ಷಣತಜ್ಞ ಡಾ.ಗುರುರಾಜ ಕರಜಗಿ ಲೋಕಾರ್ಪಣೆ ಮಾಡಿದರು.

ಇದರ ಅಂಗವಾಗಿ ನಡೆದ ಸಮಾರಂಭದಲ್ಲಿ ಮಾತನಾಡಿದ ಶಾಸಕ ಸುರೇಶ್‍ಗೌಡರು, ಶಿಕ್ಷಣದ ತಳಹದಿ ಗುಣಮಟ್ಟದಿಂದ ಕೂಡಿದ್ದರೆ ಕಲಿತ ಮಕ್ಕಳು ಮುಂದೆ ಸರ್ವತೋಮುಖವಾಗಿ ಬೆಳೆದು ಯಶಸ್ವಿಯಾಗುತ್ತಾರೆ. ಈ ಕಾರಣಕ್ಕಾಗಿ ತಾವು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದು, ಕ್ಷೇತ್ರದ ಶಾಲೆಗಳನ್ನು ಅತ್ಯಾಧುನಿಕವಾಗಿ, ಗುಣಮಟ್ಟದ ಶೈಕ್ಷಣಿಕ ಸೌಕರ್ಯ ಒದಗಿಸಲು ಆದ್ಯತೆ ನೀಡುತ್ತಿರುವುದಾಗಿ ಹೇಳಿದ ಶಾಸಕರು, ಡಾ.ಗುರುರಾಜ ಕರಜಗಿಯವರಂತಹ ಶಿಕ್ಷಣತಜ್ಞರಿಂದ ಪ್ರೇರಣೆಯಾಗಿ ತಮ್ಮಲ್ಲಿ ಶಿಕ್ಷಣ ಪ್ರೀತಿ ಬೆಳೆಯಿತು ಎಂದು ಹೇಳಿದರು.

ಈಗಾಗಲೇ ಕ್ಷೇತ್ರದಲ್ಲಿ ಸುಮಾರು 15 ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳಾಗಿ ಸುಜ್ಜಿತವಾಗಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ಕಲಿತ ನಮ್ಮ ಮಕ್ಕಳು ಜಾಗತಿಕಮಟ್ಟದ ಸ್ಪರ್ಧೆಗೆ ಸಜ್ಜಾಗಬೇಕು ಎಂಬುದು ತಮ್ಮ ಆಶಯ. ಹೆಬ್ಬೂರು, ಹೊನ್ನುಡಿಕೆ, ಬೆಳ್ಳಾವಿ, ಸ್ವಾಂದೇನಹಳ್ಳಿ, ಸೋರೆಕುಂಟೆ ಸರ್ಕಾರಿ ಶಾಲೆಗಳನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗುವುದು. ವಿಶ್ವಕ್ಕೇ ಮಾದರಿಯಾಗುವಂತಹ ಗುಣಮಟ್ಟದ ಶಿಕ್ಷಣ ನೀಡುವ ಮಾದರಿ ಶಾಲೆಗಳನ್ನಾಗಿ ರೂಪಿಸಬೇಕು ಎಂಬುದು ತಮ್ಮ ಕನಸು ಎಂದರು.

 

ಮಕ್ಕಳ ಕನಸನ್ನು ನನಸು ಮಾಡುವಲ್ಲಿ ಶಿಕ್ಷಕರ ಜವಾಬ್ದಾರಿ ಮುಖ್ಯವಾಗಿದೆ. ಶಾಲಾ ಹಂತದಲ್ಲಿ ಮಕ್ಕಳಿಗೆ ಶಿಕ್ಷಣದ ತಳಪಾಯ ಸುಭದ್ರವಾಗಿರಬೇಕು. ಕೇವಲ ಇಲಾಖೆಯ ಪರೀಕ್ಷೆ ಪಾಸಾದರೆ ಸಾಕಾಗುವುದಿಲ್ಲ, ಮುಂದೆ ಅವರಿಗೆ ಎದುರಾಗುವ ಎಲ್ಲಾ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಿ ಗೆಲ್ಲುವ ಆತ್ಮವಿಶ್ವಾಸ, ಸಾಮಥ್ರ್ಯ ಬೆಳೆಸುವುದು ಶಿಕ್ಷಣದ ಗುರಿಯಾಗಬೇಕು. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರಿದ್ದಾರೆ. ಬೋಧನಾ ವ್ಯವಸ್ಥೆ ಉತ್ತಮವಾಗಿದೆ. ಶಿಕ್ಷಕರು ಹೊಣೆ ಅರಿತು ಮಕ್ಕಳ ಭವಿಷ್ಯ ಉಜ್ವಲಗೊಳಿಸುವ ಶಿಕ್ಷಣ ನೀಡಬೇಕು. ಮಕ್ಕಳನ್ನು ಈ ದೇಶದ ಆಸ್ತಿಯಾಗಿ ರೂಪಿಸಬೇಕು ಎಂದು ಶಾಸಕ ಸುರೇಶ್‍ಗೌಡರು ಸಲಹೆ ಮಾಡಿದರು.

ಖ್ಯಾತ ವಿಜ್ಞಾನಿ ಡಾ.ರಾಜಾರಾಮಣ್ಣ, ಶ್ರೇಷ್ಠ ಕಲಾವಿದ ಡಾ.ಗುಬ್ಬಿ ವೀರಣ್ಣ, ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ ತೀ.ನಂ.ಶ್ರೀಕಂಠಯ್ಯ, ಬಿ.ಎಂ.ಶ್ರೀಕಂಠಯ್ಯರಂತಹ ಮಹಾನುಭಾವರು ಈ ನೆಲದಲ್ಲಿ ಜನಿಸಿದ್ದಾರೆ. ನೆಲಹಾಳ್ ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಅವರ ಹಾದಿಯಲ್ಲಿ ಸಾಗಿ ಸಾಧನೆ ಮಾಡಲಿ ಎಂದು ಹಾರೈಸಿದರು.
ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ನೆಲಹಾಳ್‍ನ ಈ ಶಾಲೆ ಸರ್ವ ರೀತಿಯಲ್ಲೂ ಸುಸಜ್ಜಿತವಾಗಿದೆ. ಇನ್ನು ಮುಂದೆ ಶಾಲೆಯ ಮಕ್ಕಳ ಪ್ರವೇಶ ಸಂಖ್ಯೆಯೂ ಹೆಚ್ಚಾಗಿ ಶಾಲೆಯ ಸದಾಶಯ ಈಡೇರಲಿ ಎಂದು ಆಶಿಸಿದರು.

 

 

ಶಿಕ್ಷಣತಜ್ಞ ಡಾ.ಗುರುರಾಜ ಕರ್ಜಗಿ ಮಾತನಾಡಿ, ಮಕ್ಕಳಿಗೆ ಯಾವ ರೀತಿಯ ಶಿಕ್ಷಣ ಕೊಡುತ್ತೇವೆ ಅನ್ನುವುದು ಮುಖ್ಯ. ಸಂಸ್ಕಾರವಿಲ್ಲದ ಅಂಕಪಟ್ಟಿಗೆ ಮೀಸಲಾಗುವ ಶಿಕ್ಷಣದಿಂದ ಯಾವುದೇ ಪ್ರಯೋಜನವಿಲ್ಲ. ಜೀವನದಲ್ಲಿ ಎಂಥಾ ಪರೀಕ್ಷೆ ಬಂದರೂ ಎದುರಿಸುವ ಶಕ್ತಿ ಕೊಡುವ ಶಿಕ್ಷಣ ಬೇಕು. ಆತ್ಮವಿಶ್ವಾಸ ಬೆಳೆಸುವ, ತಂದೆತಾಯಿಯನ್ನು ಪ್ರೀತಿಸುವ, ತನ್ನ ದೇಶದ ಬಗ್ಗೆ ಅಭಿಮಾನ ಮೂಡಿಸುವ ಶಿಕ್ಷಣ ಕೊಡಬೇಕು ಎಂದು ಹೇಳಿದರು.

 

 

ಪ್ರತಿ ಮಗುವಿನಲ್ಲೂ ಜ್ಞಾನದ ಶಕ್ತಿ ಇರುತ್ತದೆ. ಅದಕ್ಕೆ ಉತ್ತೇಜನವನ್ನು ಶಿಕ್ಷಕರು, ಪೋಷಕರು ನೀಡಬೇಕು. ನಾವು ಹೇಗೆ ಮಕ್ಕಳನ್ನು ಬೆಳೆಸುತ್ತೇವೆಯೋ ಹಾಗೆ ಅವರು ಬೆಳೆಯುತ್ತಾರೆ. ಮಕ್ಕಳು ತಂದೆತಾಯಿಯನ್ನು ಅನುಸರಿಸುತ್ತಾರೆ, ಹಾಗಾಗಿ ತಂದೆತಾಯಿಯೂ ಮಕ್ಕಳಿಗೆ ಮಾದರಿಯಾಗಿ ನಡೆದುಕೊಳ್ಳಬೇಕು. ಎಷ್ಟೇ ಉನ್ನತ ಶಿಕ್ಷಣ ಕಲಿತರೂ ಸಂಸ್ಕಾರ ಕಲಿಯದಿಂದರೆ ಅವರ ಶಿಕ್ಷಣದಿಂದ ಯಾವುದೇ ಪ್ರಯೋಜನವಿಲ್ಲ. ಇಂದು ಭ್ರಷ್ಟಾಚಾರ, ಹಣಕಾಸು ವಂಚನೆ ಪ್ರಕರಣಗಳು ಹೆಚ್ಚುತ್ತಿರುವುದು ಉನ್ನತ ಶಿಕ್ಷಣಪಡೆದ ಅಯೋಗ್ಯ ಬುದ್ಧಿವಂತರಿಂದಲೇ. ಶಿಕ್ಷಣದಿಂದ ಸಾಕ್ಷರರಾಗಬೇಕೆ ಹೊರತು ರಾಕ್ಷಸರಾಗಬಾರದು ಎಂದರು.

 

 

ಟಿಮೆಕ್ ಕಂಪನಿಯ ಅಧಿಕಾರಿಗಳಾದ ಕೆ.ವಿರಾಜ್ ಶೆಟ್ಟಿ ಅವರು ಮಾತನಾಡಿ, ನಮ್ಮ ಕಂಪನಿಗೆ ನೀವು ಸಹಕಾರ ನೀಡುತ್ತಿರುವಿರಿ, ಅದಕ್ಕಾಗಿ ಶಾಲೆ ನಿರ್ಮಸಿ ನಿಮಗೆ ಕೊಡುಗೆ ಕೊಟ್ಟಿದ್ದೇವೆ, ಶಾಲೆಗೆ ಇನ್ನೂ ಹೆಚ್ಚಿನ ಅನುಕೂಲಗಳು ಬೇಕಾದರೆ ನಾವು ಒದಗಿಸಲು ಬದ್ಧ ಎಂದು ಹೇಳಿದರು. ಈ ವೇಳೆ ಶಾಸಕ ಸುರೇಶ್‍ಗೌಡರು ಟಿಮೆಕ್ ಕಂಪನಿಯ ಅಧಿಕಾರಿಗಳಾದ ವಿರಾಜ್ ಶೆಟ್ಟಿ, ಪದ್ಮಪ್ರಸಾದ್ ಜೈನ್, ಶೈಲೇಶ್ ಪುರಾಣಿಕ್, ರತನ್ ರೈ, ಆರ್.ಮಂಜುನಾಥ್ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.

 

 

 

 

ವಿಕ್ರಮ ಪತ್ರಿಕೆ ಸಂಪಾದಕ ನಾಗರಾಜು, ಬೆಂಗಳೂರು ರೋಟರಿ ಕ್ಲಬ್‍ನ ರಾಜೇಶ್ ಸೀತಕಲ್ಲು, ನೆಲಹಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆರ್.ನಾಗರತ್ನ, ಉಪಾಧ್ಯಕ್ಷೆ ಟಿ.ಡಿ.ರತ್ನಮ್ಮ, ಸದಸ್ಯರಾದ ಎಂ.ಎನ್.ವೇದಶ್ರೀ, ಸಾವಿತ್ರಮ್ಮ, ಮುದ್ದಮ್ಮ, ಜಿ.ಎಲ್.ಶಿವಣ್ಣ, ಬಾಲಕೃಷ್ಣ, ಶಿವಣ್ಣ, ರೂಪ, ಆರ್.ವಿನಯ್, ಕೆ.ಮಂಜುನಾಥ್, ಹಾಲಪ್ಪ, ವಿ.ಹೇಮಲತಾ, ಶಿವಲಿಂಗಯ್ಯ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀನಾರಾಯಣಸ್ವಾಮಿ, ಡಿಡಿಪಿಐ ಕೆ.ಜಿ.ರಘುಚಂದ್ರ, ಬಿಇಒ ಎಂ.ಹನುಮಂತಪ್ಪ, ಎಸ್‍ಡಿಎಂಸಿ ಅಧ್ಯಕ್ಷ ಬಿ.ಕೃಷ್ಣಮೂರ್ತಿ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಿ.ಶ್ರೀನಿವಾಸ್, ಮುಖ್ಯ ಶಿಕ್ಷಕ ಪಿ.ಸಿದ್ಧರಾಮಯ್ಯ ಸೇರಿದಂತೆ ವಿವಿಧ ಮುಖಂಡರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!