2 ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ವಿದ್ಯುತ್ ಉಪಸ್ಥಾವರಗಳ ಲೋಕಾರ್ಪಣೆ

ತುಮಕೂರು: ಸುಮಾರು 2 ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಜಿಲ್ಲೆಯ ಕೊರಟಗೆರೆ ತಾಲ್ಲೂಕು ಐ.ಕೆ.ಕಾಲೋನಿ ಹಾಗೂ ತುಂಬಾಡಿ ಗ್ರಾಮಗಳ ವಿದ್ಯುತ್ ಉಪಸ್ಥಾವರಗಳನ್ನು ಸೋಮವಾರ ಸಚಿವತ್ರಯರು ಲೋಕಾರ್ಪಣೆಗೊಳಿಸಿದರು.

 

 

ಕೊರಟಗೆರೆ ತಾಲ್ಲೂಕಿನ ತುಂಬಾಡಿ ಗ್ರಾಮದಲ್ಲಿಂದು ಸಂಕೇನಹಳ್ಳಿ(ಐ.ಕೆ.ಕಾಲೋನಿ) ಹಾಗೂ ಭೈರೇನಹಳ್ಳಿ(ತುಂಬಾಡಿ) ಗ್ರಾಮಗಳಲ್ಲಿ ನೂತನವಾಗಿ ನಿರ್ಮಿಸಿರುವ 2*8 ಎಂ.ವಿ.ಎ., 66/11 ಕೆ.ವಿ. ಉಪಸ್ಥಾವರಗಳನ್ನು ಲೋಕಾರ್ಪಣೆಗೊಳಿಸಲಾಯಿತು.

 

 

ನಂತರ ಮಾತನಾಡಿದ ಗೃಹ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ತಾಲ್ಲೂಕಿನ ಸಂಕೇನಹಳ್ಳಿ ಹಾಗೂ ಭೈರೇನಹಳ್ಳಿ ಭಾಗದ ರೈತರಿಗೆ ಗುಣಮಟ್ಟದ ವಿದ್ಯುಚ್ಛಕ್ತಿ ದೊರೆಯದೆ ಸಮಸ್ಯೆ ನಿರ್ಮಾಣವಾಗಿತ್ತು. ನೀರಾವರಿ ಪಂಪು ಮೋಟಾರು ಕಾರ್ಯ ನಿರ್ವಹಿಸುತ್ತಿಲ್ಲವೆಂಬ ಬಹು ದಿನಗಳ ಬೇಡಿಕೆಯಿತ್ತು. ಜಾಗದ ಕೊರತೆಯಿದ್ದುದರಿಂದ ಉಪಸ್ಥಾವರಗಳ ನಿರ್ಮಾಣ ಕನಸಾಗಿಯೇ ಉಳಿದಿತ್ತು. ಕನಸನ್ನು ನನಸಾಗಿಸಲು ಕಾರಣರಾದ ಇಂಧನ ಸಚಿವ ಕೆ.ಜೆ.ಜಾರ್ಜ್ ಹಾಗೂ ಗುತ್ತಿಗೆದಾರ ಮಹಾಲಿಂಗಪ್ಪ ಅವರಿಗೆ ಅಭಿನಂದನೆ ಸಚಿವರು ಸಲ್ಲಿಸಿದರು.

 

 

 

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ತುಂಬಾಡಿಯಲ್ಲಿ ನಿರ್ಮಿಸಿರುವ 66/11 ಕೆವಿ ಉಪಸ್ಥಾವರವು ಸುತ್ತಲಿನ ತುಂಬಾಡಿ, ಸಿದ್ದರಬೆಟ್ಟ, ದಾಸರಹಳ್ಳಿ, ಗೊಲ್ಲಹಳ್ಳಿ, ಸಿ.ಎನ್.ದುರ್ಗ, ದುಗ್ಗದಹಳ್ಳಿ ಹಾಗೂ ಐ.ಕೆ.ಕಾಲೋನಿ ಉಪಸ್ಥಾವರದಿಂದ ದೊಡ್ಡಹಳ್ಳಿ, ವೆಂಕಟಾಪುರ, ಜಿ.ನಾಗೇನಹಳ್ಳಿ, ತಣ್ಣೇನಹಳ್ಳಿ, ಎಲೆರಾಂಪುರ, ಡಿ.ನಾಗೇನಹಳ್ಳಿ, ಇರಕಸಂದ್ರ, ಚಿಕ್ಕಪಾಲನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ನಿರಂತರವಾಗಿ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ನೆರವಾಗುತ್ತದೆ. ನೂತನ ಉಪಸ್ಥಾವರಗಳಿಂದ ಓವರ್ ಲೋಡ್ ಆಗುವುದನ್ನು ತಪ್ಪಿಸಿ ವೋಲ್ಟೇಜ್ ಸಮಸ್ಯೆ ನಿವಾರಣೆಯಾಗತ್ತದೆ ಎಂದು ತಿಳಿಸಿದರು.

 

 

ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ 3000 ಮೆಗಾವ್ಯಾಟ್ ವಿದ್ಯುಚ್ಛಕ್ತಿ ಉತ್ಪಾದನೆ ಮಾಡುವ ವಿಶ್ವದ 2ನೇ ಅತಿ ದೊಡ್ಡ ಸೋಲಾರ್ ಪಾರ್ಕ್ ಅನ್ನು ಪ್ರಪಂಚದ ಭೂಪಟದಲ್ಲಿ ಕಾಣಬಹುದಾಗಿದೆ. ಸೋಲಾರ್ ಪಾರ್ಕ್ ನಿರ್ಮಾಣಕ್ಕೂ ಮುನ್ನ ರಾಜ್ಯದಲ್ಲಿ 8000 ಮೆಗಾ ವ್ಯಾಟ್ ವಿದ್ಯುಚ್ಛಕ್ತಿ ಕೊರತೆ ಇತ್ತು. ಉತ್ಪಾದನೆಗಿಂತ ಬೇಡಿಕೆಯೇ ಹೆಚ್ಚಿನ ಪ್ರಮಾಣದಲ್ಲಿದ್ದದರಿಂದ ಹೊರರಾಜ್ಯದಿಂದ ವಿದ್ಯುತ್ತನ್ನು ಖರೀದಿಸಲಾಗುತ್ತಿತ್ತು. ಪ್ರಸ್ತುತ ಪಾವಗಡ ಸೋಲಾರ್ ಪ್ಲಾಂಟ್‍ನಿಂದ ವಿದ್ಯುತ್ ಕೊರತೆ ನೀಗುವುದರೊಂದಿಗೆ ರಾಜ್ಯವು 32,000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮಥ್ರ್ಯವನ್ನು ಹೊಂದಿದೆ ಎಂದು ತಿಳಿಸಿದರು.

 

 

 

ಪ್ರಧಾನಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಉತ್ಥಾನ್ ಮಹಾಭಿಯಾನ್ ಯೋಜನೆಯನ್ನು ಕೇಂದ್ರದಿಂದ 2019ರಲ್ಲಿ ಜಾರಿಗೆ ತಂದಿದ್ದರೂ ರಾಜ್ಯದಲ್ಲಿ ಈವರೆಗೆ ಪ್ರಾರಂಭಿಸಿರಲಿಲ್ಲ. ವಿದ್ಯುತ್ ಸಮಸ್ಯೆ ನೀಗಿಸುವಲ್ಲಿ ಈ ಯೋಜನೆ ಅನುಕೂಲವಾಗಿರುವುದರಿಂದ ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಯೋಜನೆಯಡಿ ಸೌರಶಕ್ತಿ ಬಳಕೆಯನ್ನು ಉತ್ತೇಜಿಸಿ ಸೌರಶಕ್ತಿ ಚಾಲಿತ ಕೃಷಿ ಪಂಪ್‍ಸೆಟ್‍ಗಳ ಸ್ಥಾಪನೆಗೆ ಬೆಂಬಲ ನೀಡಿ ರೈತರ ಆದಾಯವನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ. ಡೀಸೆಲ್ ಪಂಪ್‍ಗಳ ಮೇಲಿನ ರೈತರ ಅವಲಂಬನೆಯನ್ನು ಕಡಿಮೆ ಮಾಡಿ ದೇಶದ ಇಂಧನ ಭದ್ರತೆಗೆ ಕೊಡುಗೆಯಾಗಿ ನೀಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ತಿಳಿಸಿದರು.

 

 

ಕುಸುಮ್ ಯೋಜನೆಯಡಿ ರೈತರ ಒಡೆತನದ ಬಂಜರು ಅಥವಾ ಪಾಳು ಭೂಮಿಯಲ್ಲಿ ಸಣ್ಣ ಪ್ರಮಾಣದ ಸೌರ ವಿದ್ಯುತ್ ಉಪ ಸ್ಥಾವರಗಳನ್ನು ಸ್ಥಾಪಿಸಿ ಸ್ಥಾವರಗಳಲ್ಲಿ ಉತ್ಪತ್ತಿಯಾಗುವ ಹೆಚ್ಚುವರಿ ವಿದ್ಯುತ್ತನ್ನು ವಿದ್ಯುತ್ ಗ್ರಿಡ್‍ಗಳಿಗೆ ಮಾರಾಟ ಮಾಡಿ ರೈತರು ಹೆಚ್ಚಿನ ಆದಾಯ ಪಡೆಯಬಹುದೆಂದು ತಿಳಿಸಿದರು.

 

 

ನಮ್ಮ ಸರ್ಕಾರವು ಸ್ತ್ರೀಯರಿಗೆ ಹೆಚ್ಚಿನ ಆದ್ಯತೆ ನೀಡಿದೆ. ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್‍ವರೆಗೆ ಉಚಿತ ವಿದ್ಯುತ್, ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ, ಗೃಹಲಕ್ಷ್ಮಿ ಯೋಜನೆಯಡಿ 2000 ಸಾವಿರ ರೂ. ನೀಡಲಾಗುತ್ತಿದೆ. ಮಹಿಳೆಯರಿಗಾಗಿ ಅನುಷ್ಟಾನಗೊಳಿಸಿರುವ ಯೋಜನೆಗಳಿಗೆ ವಿಪಕ್ಷದವರಿಂದ ಟೀಕೆಗಳು ವ್ಯಕ್ತವಾಗುತ್ತಿವೆ. ಇಂತಹ ಟೀಕೆ-ಟಿಪ್ಪಣಿಗಳಿಗೆ ನಾವು ಹೆದರುವುದಿಲ್ಲ. ಲೋಕಸಭೆ ಚುನಾವಣೆ ನಂತರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆ ಎಂದು ಅಪ ಪ್ರಚಾರ ಮಾಡಿದ್ದರು. ಬಡತನ ರೇಖೆಗಿಂತ ಕೆಳಗಿರುವ ಜನ ನೆಮ್ಮದಿಯ ಜೀವನ ಸಾಗಿಸಬೇಕು ಎಂಬ ನಿಟ್ಟಿನಲ್ಲಿ ಈ ಯೋಜನೆಗಳನ್ನು ನೀಡಲಾಗಿದೆ. ಯಾವ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲವೆಂದು ಹೇಳಿದರು.
ರಾಜ್ಯದಲ್ಲಿ ಅಭಿವೃದ್ಧಿಯ ಜೊತೆಗೆ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದ್ದೇವೆ. ಯಾವ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತವಾಗಿಲ್ಲ. ಸರ್ಕಾರದಲ್ಲಿ ಹಣವಿಲ್ಲ ಎಂದು ವಿರೋಧಿಗಳು ಆರೋಪಿಸುತ್ತಿದ್ದಾರೆ. ಹಣವಿಲ್ಲದೇ ಇದ್ದರೆ ಇಷ್ಟೇಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿತ್ತೇ? ಎಂದು ತಿಳಿಸಿದರು.

 

 

ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ರೈತರಿಗೆ ಅನುಕೂಲಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಕುಸುಮ್ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ. ಗ್ರಾಮೀಣ ಭಾಗದ ರೈತರು ಈ ಯೋಜನೆಯನ್ನು ಸದುಪಯೋಗಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ಮನವಿ ಮಾಡಿದರಲ್ಲದೆ, ನಮ್ಮ ಸರ್ಕಾರ ಮಹಿಳೆಯನ್ನು ಕೇಂದ್ರಿಕೃತವಾಗಿಟ್ಟುಕೊಂಡೇ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಗೆ 2000 ರೂ. ನೀಡುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಮನೆ ನಿರ್ವಹಣೆಗೆ ಉಪಯೋಗಿಸುತ್ತಾಳೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯಿಂದ ಯಾರು ಹಸಿವಿನಿಂದ ಬಳಲುತ್ತಿಲ್ಲ ಎಂದು ತಿಳಿಸಿದರಲ್ಲದೆ, ಕೊರಟಗೆರೆಯಲ್ಲಿ ಉದ್ಘಾಟನೆಯಾದ ನೂತನ ಉಪಸ್ಥಾವರ ನಿರ್ಮಾಣದಲ್ಲಿ ಸಚಿವ ಪರಮೇಶ್ವರ್ ಅವರ ಸತತ ಪರಿಶ್ರಮವಿದೆ ಎಂದು ಸ್ಮರಿಸಿದರು.

 

 

 

ನಂತರ ಮಾತನಾಡಿದ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ತುಮಕೂರು ಜಿಲ್ಲೆಯು ದೇಶದ ಅತೀ ದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ. ಪಾವಗಡದ ಸೋಲಾರ್ ಪಾರ್ಕ್‍ನಲ್ಲಿ ಬೇಡಿಕೆಗಿಂತ ಹೆಚ್ಚು ವಿದ್ಯುತ್ ಉತ್ಪಾದನೆ ಆಗುತ್ತಿದ್ದು ಇನ್ನು 10 ಸಾವಿರ ಎಕರೆಯಲ್ಲಿ ಸೋಲಾರ್ ಪಾರ್ಕ್ ವಿಸ್ತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

 

 

 

ಸೌರ ಶಕ್ತಿ ನವೀಕರಿಸಬಹುದಾದ ಸಂಪನ್ಮೂಲವಾಗಿರುವುದಾರಿಂದ ಹೆಚ್ಚಿನ ಮಟ್ಟದಲ್ಲಿ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಸೋಲಾರ್ ಪಾರ್ಕ್ ನಿರ್ಮಿಸಲಾಗುತ್ತದೆ ಎಂದು ತಿಳಿಸಿದ ಅವರು ಪ್ರಧಾನ ಮಂತ್ರಿ ಕುಸುಮ್ – ಸಿ ಮತ್ತು ಬಿ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಟಾನಗೊಳಿಸಿದ್ದು, ಈ ಯೋಜನೆಯಿಂದ ಸ್ಥಳೀಯವಾಗಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳನ್ನು ದೇಶ, ಸಮಾಜ ಹಾಗೂ ಮಹಿಳೆಯರಿಗಾಗಿ ಜಾರಿಗೆ ತಂದಿದ್ದು ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂದು ತಿಳಿಸಿದರು.

 

 

 

ಈ ಸಂದರ್ಭದಲ್ಲಿ 300 ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕರಿಗೆ ಸ್ಮಾರ್ಟ್ ಫೋನ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಪ್ರಭು, ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಅಶೋಕ್, ತಾಂತ್ರಿಕ ನಿರ್ದೇಶಕ ಎಸ್.ಜೆ.ರಮೇಶ್, ಮುಖ್ಯ ಇಂಜಿನಿಯರ್ ರೋಮರಾಜ್, ಅಧೀಕ್ಷಕ ಇಂಜಿನಿಯರ್ ನರಸಿಂಹಮೂರ್ತಿ, ಕೆಪಿಟಿಸಿಎಲ್‍ನ ಜಯಕುಮಾರ್, ಮುಖ್ಯ ಇಂಜಿನಿಯರ್ ಉಮೇಶ, ಅಧೀಕ್ಷಕ ಇಂಜಿನಿಯರ್ ದಿವಾಕರ್, ಕಾರ್ಯನಿರ್ವಾಹಕ ಇಂಜಿನಿಯರ್ ಹಾಗು ಸಕಾಯಕ ಕಾರ್ಯನಿರ್ವಾಹಕ ಇಂಜಿನಿಯರ್‍ಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!