*ಸಿ.ಇ.ಟಿ.ಗೊಂದಲ: ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ರಾಜ್ಯಪಾಲರಿಗೆ ರೂಪ್ಸ ಮನವಿ*
ಈ ಬಾರಿಯ ಸಿಇಟಿ ಪರೀಕ್ಷೆ ಗೊಂದಲದಿಂದ ಕೂಡಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಜರುಗಿಸುವಂತೆ ರೂಪ್ಸ ಕರ್ನಾಟಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೂಪ್ಸ ಕರ್ನಾಟಕ ರಾಜ್ಯಧ್ಯಕ್ಷ ಲೋಕೇಶ್ ತಾಳಿಕಟ್ಟೆ, ಈ ಬಾರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿರುವ ಸಿಇಟಿ ಪರೀಕ್ಷೆ ಅತ್ಯಂತ ಗೊಂದಲದ ಗೂಡಾಗಿದ್ದು, ಭವಿಷ್ಯದ ಕನಸನ್ನು ಹೊತ್ತ ವಿದ್ಯಾರ್ಥಿಗಳಿಗೆ ಆತಂಕ ಸೃಷ್ಟಿಸಿದೆ. ಸುಮಾರು 51 ಅಂಕಗಳಿಗೆ ಹೊರ ಪಠ್ಯ ವಿಷಯಗಳ ಪ್ರಶ್ನೆಗಳನ್ನು ಕೇಳಲಾಗಿದ್ದು, ಸುಮಾರು 3.5 ಲಕ್ಷ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ತಣ್ಣೀರೆರಚಿದಂತಾಗಿದೆ. 2023-24ನೇ ಸಾಲಿನಲ್ಲಿ ತೆಗೆದು ಹಾಕಿರುವ ಪಾಠಗಳಿಂದ ಪ್ರಶ್ನೆಗಳನ್ನು ಕೇಳಲಾಗಿದ್ದು ಈ ಕುರಿತಂತೆ ವಿದ್ಯಾರ್ಥಿಗಳ ಹಾಗೂ ಪೋಷಕರ ವಲಯ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಸರ್ಕಾರ ಒಂದು ಸಮಿತಿ ರಚಿಸಿ ಗಣಿತ ವಿಷಯಕ್ಕೆ ಮಾತ್ರ ಎರಡು ಗ್ರೇಸ್ ಅಂಕಗಳನ್ನು ಕೊಟ್ಟು ಕಣ್ಣೊರೆಸುವ ತಂತ್ರ ಮಾಡಿ, ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆಸುತ್ತಿದೆ ಎಂದರು.
ರಾಜ್ಯ ಪಠ್ಯಕ್ರಮ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಸಿಇಟಿ ಹಾಗೂ ನೀಟ್ ಪರೀಕ್ಷೆಗಳಲ್ಲಿ ಮೋಸ ಆಗುತ್ತಿದ್ದು, ಸಿಬಿಎಸ್ಸಿ ಮತ್ತು ರಾಜ್ಯ ಪಠ್ಯಕ್ರಮ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಯಾವುದೇ ತಾರತಮ್ಯವಿಲ್ಲದಂತೆ ಪಠ್ಯಕ್ರಮ ನಿಗದಿಗೊಳಿಸಬೇಕು, ಪದವಿ ಪೂರ್ವ ಶಿಕ್ಷಣ ಇಲಾಖೆ ಯಾವ ಕಾರಣದಿಂದ ಕೆಲ ಪಠ್ಯಗಳನ್ನು ಕೈ ಬಿಡುವ ನಿರ್ಧಾರ ಮಾಡಿದ್ದು ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಿಲ್ಲವೇ ಸಿಬಿಎಸ್ಸಿ ರಾಜ್ಯ ಪಠ್ಯಕ್ರಮ ನಡುವೆ ತಾರತಮ್ಯ ಎಸೆಗಲಾಗುತ್ತಿದ್ದು ಇದರ ಹಿಂದೆ ಟ್ಯೂಷನ್ ಮಾಫಿಯಾ ಇರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪರೀಕ್ಷಾ ವಿಭಾಗದ ಅಧಿಕಾರಿಗಳ ನಡುವೆ ಸಮನ್ವಯತೆಯ ಕೊರತೆ ಇದ್ದು ಇವರಗಳ ನಡುವಿನ ಸಂಘರ್ಷದಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಡಲಿ ಪೆಟ್ಟು ನೀಡಲಾಗುತ್ತಿದೆ. ಆದ್ದರಿಂದ ಈ ಎಲ್ಲಾ ಅಂಶಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಮಾನ್ಯ ರಾಜ್ಯಪಾಲರಲ್ಲಿ ಮನವಿ ಮಾಡಿರುವುದಾಗಿ ತಿಳಿಸಿದರು.