ಡಾ.ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿಯವರು ನಾಡಿನ ಪ್ರಖ್ಯಾತ ಶ್ರೀ ಮಾದಾರಚೆನ್ನಯ್ಯ ಗುರುಪೀಠದ ಮಠಾಧೀಶರು. ಶಿವಶರಣ ಮಾದಾರಚೆನ್ನಯ್ಯ ವಚನಕಾರರಾಗಿ , ಸಮಾಜ ಸುಧಾರಕರಾಗಿ ದಕ್ಷಿಣ ಭಾರತದ ಹಲವೆಡೆ ಸಂಚರಿಸಿ 12 ನೇ ಶತಮಾನದಲ್ಲಿ ಬಸವೇಶ್ವರ ನೇತೃತ್ವದಲ್ಲಿ ನೆಡೆದ ಸಾಮಾಜಿಕ ಪರಿವರ್ತನೆಯ ಅಂದೋಲನದಲ್ಲಿ ಹೆಗಲುಕೊಟ್ಟವರು. ಎರಡು ದಶಕಗಳ ಹಿಂದೆ ದಕ್ಷಿಣ ಭಾರತದಲ್ಲಿ ವ್ಯಾಪಕ ಪ್ರಮಾಣದಲ್ಲಿ ನೆಲೆಸಿರುವ ಮಾದಿಗ ಸಮಾಜದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಜಾಗೃತಿ ತರಲು ಶಿವಶರಣ ಮಾದಾರಚೆನ್ನಯ್ಯ ಗುರುಪೀಠ ಸ್ಥಾಪಿಸಲು ಯೋಚಿಸಲಾಯಿತು. ಈ ಯೋಚನೆಗೆ ಕಾರ್ಯರೂಪ ಕೊಟ್ಟವರು ಚಿತ್ರದುರ್ಗದ ಮುರುಘ ಮಠದ ಶರಣರು. ಆ ಸಂದರ್ಭದಲ್ಲಿ ಮಠದ ಧಾರ್ಮಿಕ ನೇತೃತ್ವವಹಿಸಲು ಮುಂದೆಬಂದ ಅತ್ಯಂತ ಹಿಂದುಳಿದ ಮಾದಿಗರ ಸಮಾಜದವರೇ ಆದ ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿ ಮುರುಘಾ ಮಠದ ಆಶ್ರಯದಲ್ಲಿ ಸಂನ್ಯಾಸ ಧೀಕ್ಷೆ ಸ್ವೀಕರಿಸಿದರು.
ಶೂನ್ಯದಿಂದ ಮಠ ಕಟ್ಟುವ ಹೊಣೆಗಾರಿಕೆ ಒಂದೆಡೆಯಾದರೆ ಧಾರ್ಮಿಕ ಶಿಕ್ಷಣ , ಸಂಸ್ಕಾರಗಳ ಕೊರತೆಯಿಂದ , ಬಡತನ , ಹಸಿವಿನಿಂದ ಬಳಲಿದ ಸಮಾಜ ಬಂಧುಗಳು ಇನ್ನೊಂದೆಡೆ . ಈ ಎಲ್ಲ ಸವಾಲುಗಳನ್ನು ಧೃಡಚಿತ್ತದಿಂದ ಸ್ವೀಕರಿಸಿದ ಮಾದಾರಚೆನ್ನಯ್ಯ ಸ್ವಾಮೀಜಿ ಅಕ್ಷರಶಃ ಗುಡಿಸಲಿನಂತಹ ಕುಟೀರದಲ್ಲಿ ಸನ್ಯಾಸ ಜೀವನ ಆರಂಭಿಸಿದವರು. ತಮ್ಮ ಸತತ ಪರಿಶ್ರಮ, ಸರಳ ವಿಚಾರ, ಎಲ್ಲರೊಂದಿಗೆ ಸಾಗುವ ವಿನಯಶೀಲತೆಯಿಂದ ಧಾರ್ಮಿಕ ರಂಗದಲ್ಲಿ ಗಟ್ಟಿ ಹೆಜ್ಜೆಯನ್ನು ರೂಪಿಸಿಕೊಂಡವರು. ಚಿತ್ರದುರ್ಗದ ಮುರುಘಾ ಮಠ ಒದಗಿಸಿದ ಜಮೀನಿನಲ್ಲಿ ಮಠದ ರೂಪು ರೇಷೆಗಳನ್ನು ಸಿದ್ಧಪಡಿಸಿದರು. ಆದಿಚುಂಚನಗಿರಿಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಮಾದಾರಚೆನ್ನಯ್ಯ ಗುರುಪೀಠದ ನೆರವಿಗೆ ಬಂದು ಮಠ, ಕಟ್ಟಡ ರೂಪ ಪಡೆಯಲು ನೆರವಾದವರು.
ಉಡುಪಿಯ ಪೇಜಾವರ ಪೀಠದ ಮಠಾಧೀಶರಾಗಿದ್ದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಜೊತೆ ಮಾದಾರ ಶ್ರೀಗಳದ್ದು ವಿಶೇಷ ನಂಟು. ಇವರಿಬ್ಬರ ಈ ಬಾಂಧವ್ಯ 2009 ರಲ್ಲಿ ಮೈಸೂರಿನ ಬ್ರಾಹ್ಮಣ ಕೇರಿ ಎನಿಸಿದ ಕೃಷ್ಣಮೂರ್ತಿಪುರದಲ್ಲಿ ದಲಿತ ಮಠಾಧೀಶರ ಐತಿಹಾಸಿಕ ಪಾದಯಾತ್ರೆಗೆ ಕಾರಣವಾಯಿತು. ಅಂದಿನ ಆ ಪಾದಯಾತ್ರೆಯನ್ನು ಹೃದಯಸ್ಪರ್ಶಿಯಾಗಿ ಸ್ವೀಕರಿಸಿದ ಅಲ್ಲಿನ ಬ್ರಾಹ್ಮಣ ಸಮಾಜ ಮನೆ, ಮನೆಗಳಲ್ಲಿ ಮಾದಾರಚೆನ್ನಯ್ಯ ಸ್ವಾಮೀಜಿಯವರನ್ನು ಬರಮಾಡಿಕೊಂಡು ಪಾದಪೂಜೆ ನೆರವೇರಿಸಿ ಸಾಮರಸ್ಯ ಸಂದೇಶವನ್ನು ಜಗತ್ತಿಗೆ ಸಾರಲು ಕಾರಣರಾದರು.
ಪೇಜಾವರ ಶ್ರೀಗಳೂ ಸೇರಿದಂತೆ ಉಡುಪಿಯ ಎಲ್ಲ ಮಠಾಧೀಶರೊಂದಿಗೆ ಹಲವು ಕಾರ್ಯಕ್ರಮಗಳಲ್ಲಿ ಮಾದಾರ ಶ್ರೀಗಳು ಜೊತೆಯಾಗಿದ್ದಾರೆ. ಮೈಸೂರಿನ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿಯ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಶ್ರೀ ರವಿಶಂಕರ್ ಗುರೂಜಿ, ತರಳಬಾಳು ಬೃಹನ್ಮಠ, ಹುಬ್ಬಳ್ಳಿಯ ಮೂರುಸಾವಿರ ಮಠ ಹೀಗೆ ಎಲ್ಲರೊಂದಿಗೆ ನಿಕಟ ಬಾಂಧವ್ಯ ರೂಪಿಸಿಕೊಂಡು ಸಕಲ ಸಮಾಜದಲ್ಲಿ ಧಾರ್ಮಿಕ ಜಾಗೃತಿಗೆ ಪ್ರಯತ್ನಶೀಲರಾಗಿದ್ದಾರೆ.
ದಲಿತ, ಹಿಂದುಳಿದ ಮಠಾಧೀಶರ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾಗಿಯೂ ಮಾದಾರಚೆನ್ನಯ್ಯ ಸ್ವಾಮೀಜಿ ಕೆಲಸ ಮಾಡುತ್ತಿದ್ದಾರೆ. ಹಿಂದು ಸಮಾಜದಲ್ಲಿ ಜಾತಿ ಭೇದದ ಅಸ್ಪ್ರಶ್ಯತೆ ಆಚರಣೆ ಕೊನೆಗೊಳಿಸಿ ಸಾಮರಸ್ಯ ರೂಪಿಸಲು, ಮತಾಂತರ ಆದವರನ್ನು ವಾಪಸ ಕರೆತರುವ ಕೆಲಸದಲ್ಲಿ ಮುಂಚೂಣಿಯಲ್ಲಿ ನಿಂತು ಸಮಾಜ ಕಟ್ಟುವ ಆಶಯಗಳಿಗೆ ಜೊತೆಯಾಗಿದ್ದಾರೆ. ಮೀಸಲಾತಿಯ ಹಂಚಿಕೆ ಕುರಿತಾದ ಒಳ ಮೀಸಲಾತಿ ಹೋರಾಟದಲ್ಲಿ ಎಲ್ಲ ಸಮಾಜಗಳ ನಡುವೆ ಸಮನ್ವಯ ರೂಪಿಸುವ ಹೊಣೆ ಹೊತ್ತವರು ಮಾದಾರ ಚೆನ್ನಯ್ಯ ಸ್ವಾಮೀಜಿಯವರು.
ಉಡುಪಿಯ ಅಮೋಘ ಸಂಸ್ಥೆ ನೀಡುವ ಪುರಸ್ಕಾರ ಪೂಜ್ಯ ಸ್ವಾಮೀಜಿಯವರಿಗೆ ಮಾತ್ರವಲ್ಲ, ಇಡೀ ಹಿಂದೂ ಸಮಾಜಕ್ಕೆ ಸಂದ ಗೌರವವೆನಿಸಿದೆ.
-ಕೋಟ