ತುಮಕೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸಾರ್ವಜನಿಕರ ಕುಂದು ಕೊರತೆ ಬಗೆಹರಿಸಲು ಸರ್ಕಾರವೇ ಜನರ ಮನೆ ಬಾಗಿಲಿಗೆ ತೆರಳುವಂತಹ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ತಿಳಿಸಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಆಡಳಿತ ಇವರ ಸಹಯೋಗದೊಂದಿಗೆ ಮಧುಗಿರಿ ಪುರಸಭೆ ಮಾಲಿಮರಿಯಪ್ಪ ರಂಗಮಂದಿರ ಆವರಣದಲ್ಲಿಂದು ಏರ್ಪಡಿಸಿದ್ದ ಜನಸ್ಪಂದನಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಜನರು ಸರ್ಕಾರಿ ಕಚೇರಿಗಳಿಗೆ ಅಲೆಯಬಾರದು. ಅವರ ಸಮಸ್ಯೆಗಳು ತ್ವರಿತವಾಗಿ ಬಗೆಹರಿಯಬೇಕು. ಈ ನಿಟ್ಟಿನಲ್ಲಿ ಜನಸ್ಪಂದನ ಕಾರ್ಯಕ್ರಮ ಹೆಚ್ಚು ಪರಿಣಾಮಕಾರಿಯಾಗಿದೆ ಎಂದರು.
ನಕಾಶೆ ರಸ್ತೆ, ವಾಡಿಕೆ ರಸ್ತೆ, ಜಮೀನು ಒತ್ತುವರಿಯಂತಹ ಪ್ರಕರಣಗಳು ಪ್ರಸ್ತುತ ಹೆಚ್ಚಾಗುತ್ತಿವೆ. ರೈತರು ತಮ್ಮ ಜಮೀನಿಗೆ ತೆರಳಲು ಸುಗಮವಾದ ರಸ್ತೆ ಅವಶ್ಯಕ. ಈ ನಿಟ್ಟಿನಲ್ಲಿ ಇರುವಂತಹ ಅಡೆ-ತಡೆಗಳನ್ನು ನಿವಾರಿಸಲು ಅಧಿಕಾರಿಗಳು ಕ್ರಮವಹಿಸಬೇಕು. ತಾಲ್ಲೂಕಿನ 25ಸಾವಿರಕ್ಕೂ ಹೆಚ್ಚು ಪವತಿ ಖಾತೆಗಳನ್ನು ಇತ್ಯರ್ಥಪಡಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಾರ್ವಜನಿಕರ ಕುಂದು ಕೊರತೆಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸಲು ಜನಸ್ಪಂದನ ಕಾರ್ಯಕ್ರಮ-ಜಿಲ್ಲಾಧಿಕಾರಿ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು, ಸರ್ಕಾರದ ಯೋಜನೆಗಳು ಹಾಗೂ ಜನಪರ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಲುಪಿಸಲು, ಸಾರ್ವಜನಿಕರಲ್ಲಿರುವ ಕುಂದು ಕೊರತೆಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸಲು ಜನಸ್ಪಂದನ ಕಾರ್ಯಕ್ರಮಗಳನ್ನು ಪ್ರತಿ ತಾಲ್ಲೂಕಿನಲ್ಲಿಯೂ ಆಯೋಜಿಸಲಾಗುತ್ತಿದೆ ಎಂದರು.
“ರೈತರ ಬೆಳೆ ಸಮೀಕ್ಷೆ 2024-25”ರ ತಂತ್ರಾಂಶ ಃ ಜಿಲ್ಲೆಯಲ್ಲಿ ಈ ಬಾರಿ 300 ಮಿ.ಮೀ. ನಷ್ಟು ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಬೆಳೆ ಸಮೀಕ್ಷೆಯು 3 ಹಂತದಲ್ಲಿ ಮಾಡಲಾಗುತ್ತದೆ. ಇದರಲ್ಲಿ ಪ್ರಮುಖ ಹಂತ ರೈತರೇ ತಮ್ಮ ಸ್ಮಾರ್ಟ್ ಫೋನ್‍ಗಳಲ್ಲಿ “ರೈತರ ಬೆಳೆ ಸಮೀಕ್ಷೆ 2024-25”ರ ತಂತ್ರಾಂಶವನ್ನು ಡೌನ್‍ಲೋಡ್ ಮಾಡಿಕೊಂಡು ಬೆಳೆ ವಿವರವನ್ನು ನಮೂದಿಸಬಹುದಾಗಿದೆ.
ಇದು ಹೆಚ್ಚು ನಿಖರತೆಯಿಂದ ಕೂಡಿದ್ದು, ಅಧಿಕಾರಿಗಳು ರೈತರಲ್ಲಿ ಈ ಕುರಿತು ಜಾಗೃತಿ ಮೂಡಿಬೇಕು ಎಂದರಲ್ಲದೆ, ಎಲ್ಲಾ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ರೈತರಿಗೆ ಮನವಿ ಮಾಡಿದರು.
ಶುದ್ಧ ಕುಡಿಯುವ ನೀರು ಒದಗಿಸುವ ಜವಾಬ್ದಾರಿ ಸ್ಥಳೀಯ ಸಂಸ್ಥೆಗಳದ್ದಾಗಿದ್ದು, ಕುಡಿಯುವ ನೀರು ಪೂರೈಕೆ ಮಾಡುವ ಮುನ್ನ ಶುದ್ಧತೆಯನ್ನು ಪರೀಕ್ಷೆ ಮಾಡಿ ನಂತರ ಪೂರೈಕೆ ಮಾಡಬೇಕು ಎಂದು ಸೂಚನೆ ನೀಡಿದರು.
2ಲಕ್ಷ ರೈತರಿಗೆ ಫಸಲ್ ಬಿಮಾ ಯೋಜನೆ ಗುರಿ(ರಾಜ್ಯದಲ್ಲಿಯೇ ತುಮಕೂರು ಪ್ರಥಮ ಸ್ಥಾನ):-
ಕಳೆದ ವರ್ಷ ಬರಪರಿಸ್ಥಿತಿಯಿಂದ ನಷ್ಟ ಹೊಂದಿದ್ದ ಜಿಲ್ಲೆಯ ರೈತರಿಗೆ ಒಟ್ಟು 127ಕೋಟಿ ರೂ.ಗಳನ್ನು ಬರಪರಿಹಾರ ಮೊತ್ತವನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ. ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ 70ಕೋಟಿ ರೂ.ಗಳ ಬೆಳೆ ವಿಮಾ ಹಣ ರೈತರ ಖಾತೆಗೆ ಸಂದಾಯವಾಗಿದೆ. ರೈತರು ಶೇ.2ರಷ್ಟು ಪ್ರೀಮಿಯಂ ಹಣ ಪಾವತಿ ಮಾಡುವ ಮೂಲಕ ಬೆಳೆ ವಿಮಾ ಸೌಲಭ್ಯ ಪಡೆಯಬಹುದು. ಉಳಿದ ಶೇ. 98ರಷ್ಟು ಹಣವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪಾವತಿ ಮಾಡಲಾಗುವುದು ಎಂದು ತಿಳಿಸಿದರು. ಪ್ರಸಕ್ತ ಸಾಲಿನಲ್ಲಿ ಪ್ರಸ್ತುತದವರೆಗೂ ಜಿಲ್ಲೆಯ 30,000 ರೈತರು ಬೆಳೆ ವಿಮೆಗೆ ನೋಂದಾಯಿಸಲ್ಪಟ್ಟಿದ್ದು, ಸುಮಾರು 2ಲಕ್ಷಕ್ಕಿಂತ ಹೆಚ್ಚು ರೈತರನ್ನು ಬೆಳೆ ವಿಮೆಗೆ ನೋಂದಾಯಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಮಧುಗಿರಿ ಶೈಕ್ಷಣಿಕ ಕ್ಷೇತ್ರವು 30ನೇ ಸ್ಥಾನ ಪಡೆದಿದೆ, ಮಕ್ಕಳ ಭವಿಷ್ಯ ಶಿಕ್ಷಕರ ಕೈಯಲ್ಲಿದೆ, ಫಲಿತಾಂಶ ಸುಧಾರಿಸಿ ಮಕ್ಕಳಿಗಾಗಿ ಉತ್ತಮ ಭವಿಷ್ಯ ರೂಪಿಸಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ: ಜಿ. ಪರಮೇಶ್ವರ ಹಾಗೂ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದಂತೆ ಪ್ರಸಕ್ತ ಸಾಲಿನಲ್ಲಿ ಎಲ್ಲಾ ಜಿಲ್ಲಾ/ತಾಲ್ಲೂಕು ಮಟ್ಟದ ಇಲಾಖೆಗಳು ಪ್ರಗತಿ ಸಾಧಿಸಲು ಮುಂದಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರತಿ ಇಲಾಖೆಯಲ್ಲಿ ಎಲ್ಲಾ ಕ್ರಿಯಾಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಯೋಜನೆಗಳನ್ನು ತ್ವರಿತವಾಗಿ ಜಾರಿಗೊಳಿಸಿದಾಗ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಶೀಘ್ರ ವಿಲೇವಾರಿ :- ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಈಗಾಗಲೇ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಾರ್ವಜನಿಕರು ಸಲ್ಲಿಸಿದಂತಹ ಅರ್ಜಿಗಳ ಸ್ಥಿತಿಯನ್ನು ನಿರಂತರವಾಗಿ ಪರಿಶೀಲನೆ ಮಾಡುತ್ತಿದ್ದು, ಬಹುತೇಕ ಸಮಸ್ಯೆಗಳನ್ನು ನಿವಾರಿಸಲಾಗಿದ್ದು, ತಕರಾರು ಇರುವಂತಹ ಪ್ರಕರಣವನ್ನೂ ಸಹ ಶೀಘ್ರ ವಿಲೇವಾರಿ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ. ಮಧುಗಿರಿಯ ಜನಸ್ಪಂದನ ಕಾರ್ಯಕ್ರಮದಲ್ಲಿ ಬಂದಿರುವ ಅಹವಾಲು ಸ್ವೀಕಾರ ಮಾಡಿ ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಎಲ್ಲಾ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸಿ :-
ಪೌತಿ ಖಾತೆ, ಸಾಗುವಳಿ ಚೀಟಿ ಪ್ರಕರಣದಂತಹ ಕಂದಾಯ ಇಲಾಖೆಗೆ ಸಂಬಂಧಿಸಿದ ಬಹಳಷ್ಟು ಅರ್ಜಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಲೆಕ್ಕಾಧಿಕಾರಿಗಳು ವಾರದಲ್ಲಿ ಕನಿಷ್ಟ 3 ದಿನ ಕಡ್ಡಾಯವಾಗಿ ಗ್ರಾಮದಲ್ಲಿ ಹಾಜರಿದ್ದು ಸಾರ್ವಜನಿಕರು ಸಲ್ಲಿಸುವಂತಹ ಅರ್ಜಿಗಳನ್ನು ಸ್ವೀಕರಿಸಬೇಕು ಎಂದು ನಿರ್ದೇಶನ ನೀಡಲಾಗಿದ್ದು, ಜುಲೈ ಅಂತ್ಯದೊಳಗೆ 4 ಸಾವಿರ ಪೌತಿ ಖಾತೆ ಮಾಡುವ ಗುರಿ ನೀಡಲಾಗಿದೆ ಎಂದರು.
ಸಾರ್ವಜನಿಕರ ಅಹವಾಲುಗಳನ್ನು ಸಚಿವರು, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಅರ್ಜಿಗಳನ್ನು ಸ್ವೀಕರಿಸಿ ಅಗತ್ಯ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿ ಅರ್ಜಿಗಳ ವಿಲೇವಾರಿಗೆ ನಿರ್ದೇಶನ ನೀಡಿದರು.
218 ಅರ್ಜಿ ಸ್ವೀಕಾರ
ಈ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ 139, ತಾಲ್ಲೂಕು ಪಂಚಾಯತಿ-32, ಅರಣ್ಯ ಇಲಾಖೆ-1, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ-6, ಸಣ್ಣ ನೀರಾವರಿ-1, ಅಬಕಾರಿ-1, ಮೀನುಗಾರಿಕೆ-2, ಆರೋಗ್ಯ-1, ಕೃಷಿ ಇಲಾಖೆ-2, ಬೆಸ್ಕಾಂ-2, ಪುರಸಭೆ-16, ಭೂ ದಾಖಲೆಗಳ ಇಲಾಖೆ-5, ಪಿಡಬ್ಲ್ಯೂಡಿ-1, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ-4, ಸಮಾಜ ಕಲ್ಯಾಣ ಇಲಾಖೆ-5 ಸೇರಿದಂತೆ ಒಟ್ಟು 218 ಅರ್ಜಿಗಳನ್ನು ಸ್ವೀಕರಿಸಲಾಗಿದೆ.