ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಯೋಜನೆ ಜಿಲ್ಲೆಯ ಪಾಲಿಗೆ ಮರಣಶಾಸನ: ಮಸಾಲಾ ಜಯರಾಮ್/ ಗೋಲಿಬಾರ್ ನಡೆಸಿದರೂ ಹೆದರುವುದಿಲ್ಲ: ಎಂ.ಟಿ.ಕೃಷ್ಣಪ್ಪ
ತುರುವೇಕೆರೆ: ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಹೋರಾಟ ಸಮಿತಿ ಕರೆ ನೀಡಿದ್ದ ತುಮಕೂರು ಜಿಲ್ಲೆ ಬಂದ್ ಗೆ ತುರುವೇಕೆರೆಯಲ್ಲೂ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ತುರುವೇಕೆರೆ ಬಂದ್ ಯಶಸ್ವಿಯಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶಾಸಕ ಹಾಗೂ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಹೋರಾಟ ಸಮಿತಿ ಸಂಚಾಲಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿಯಿಂದ ಜಿಲ್ಲೆಯ ಜನತೆಗೆ, ರೈತರಿಗೆ ನೀರಿನ ಸಮಸ್ಯೆ ತಂದೊಡ್ಡಲಿದ್ದು, ಯೋಜನೆ ರದ್ದುಗೊಳಿಸುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಸರ್ಕಾರ ನಮ್ಮ ಹೋರಾಟ ತಡೆಯಲು ಜೈಲಿಗೆ ಹಾಕಲಿ, ಗೋಲಿಬಾರ್ ನಡೆಸಲಿ. ಯಾವುದಕ್ಕೂ ನಾವು ಹೆದರುವುದಿಲ್ಲ ಎಂದರು.
ಈಗಾಗಲೇ ಎಕ್ಸ್ಪ್ರೆಸ್ ಕೆನಾಲ್ ಯೋಜನೆ ರದ್ದುಗೊಳಿಸುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಮನೆ ಮುಂದೆ ಪ್ರತಿಭಟನಾ ಹೋರಾಟವನ್ನೂ ಸಹ ಸಮಿತಿ ನಡೆಸಿದ ಸಂದರ್ಭದಲ್ಲಿ ಹೋರಾಟಗಾರರನ್ನು ಬಂಧಿಸಿ ಹೋರಾಟ ಹತ್ತಿಕ್ಕುವ ಪ್ರಯತ್ನವನ್ನೂ ಮಾಡಲಾಯಿತು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯೋಜನೆ ಕುರಿತಂತೆ ಸಭೆ ಕರೆದಿದ್ದು, ಜಿಲ್ಲೆಯ ಎಲ್ಲಾ ಶಾಸಕರುಗಳು ಪಾಲ್ಗೊಂಡಿದ್ದೆವು. ಈ ಸಭೆಯಲ್ಲಿ ನಾಲೆಯ ಮೂಲಕ ಹೋಗುತ್ತಿರುವ ನೀರಿಗೆ ನಮ್ಮ ವಿರೋಧವಿಲ್ಲ, ಆದರೆ ಚಾನಲ್ ಕೆಳಗೆ ಪೈಪ್ ಲೈನ್ ಮೂಲಕ ನೀರು ಕೊಂಡೊಯ್ಯುವುದಕ್ಕೆ ನಮ್ಮ ವಿರೋಧವಿದೆ ಹಾಗೂ ಯೋಜನೆಯಿಂದ ಜಿಲ್ಲೆಗೆ ಆಗುವ ನೀರಿನ ಸಮಸ್ಯೆಯ ಕುರಿತಂತೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಆದರೆ ಉಪಮುಖ್ಯಮಂತ್ರಿಗಳು ಕಾಮಗಾರಿ ಪ್ರಾರಂಭವಾಗಿದೆ, ಇದು ಸರ್ಕಾರದ ತೀರ್ಮಾನ ಎಂದಿದ್ದಾರೆ. ಡಿಸಿಎಂ ಮಾತನ್ನು ಕೇಳಿ ಸಭೆಯನ್ನು ಬಹಿಷ್ಕರಿಸಿ ಹೊರಬಂದಿದ್ದೇವೆ ಎಂದರು.
ಮಾಜಿ ಶಾಸಕ ಮಸಾಲಾ ಜಯರಾಮ್ ಮಾತನಾಡಿ, ಸಾವಿರಾರು ಕೋಟಿ ರೂ ವೆಚ್ಚದಲ್ಲಿ ಹೇಮಾವತಿ ನಾಲಾ ಅಗಲೀಕರಣ ಮಾಡಿದೆ. ಈ ನಾಲೆಯ ಮೂಲಕ ಈಗಾಗಲೇ ಅವರಿಗೆ ನಿಗದಿಯಾಗಿರುವ 3.25 ಟಿಎಂಸಿ ನೀರು ಹೋಗುತ್ತಿದೆ. ಆದರೂ ಸಹ ರಾಜ್ಯ ಕಾಂಗ್ರೆಸ್ ಸರ್ಕಾರ ಅವೈಜ್ಞಾನಿಕವಾಗಿ ತುಮಕೂರು ಜಿಲ್ಲೆಯ ಜನರಿಗೆ ರಾಮನಗರ ಜಿಲ್ಲೆ ಮಾಗಡಿಗೆ ಪೈಪ್ ಲೈನ್ ಮೂಲಕ ಹೇಮಾವತಿ ನೀರನ್ನು ಕೊಂಡೊಯ್ಯಲು ಎಕ್ಸ್ ಪ್ರೆಸ್ ಕಾಮಗಾರಿ ನಡೆಸಲು ಮುಂದಾಗಿರುವುದು ಖಂಡನೀಯ. ಜಿಲ್ಲೆಯ ಪಾಲಿಗೆ ಮರಣಶಾಸನವಾಗಲಿರುವ ಈ ಯೋಜನೆ ರದ್ದುಪಡಿಸುವವರೆಗೂ ನಾವೆಲ್ಲರೂ ಹೋರಾಟ ಮಾಡಬೇಕಿದೆ. ಜಿಲ್ಲೆಯ ಜನರು ಗಂಡೆದೆಯ ಹೋರಾಟಗಾರರು. ಪೈಪ್ ಲೈನ್ ಮೂಲಕ ಹನಿ ನೀರನ್ನು ಹರಿಸಲು ನಾವು ಬಿಡುವುದಿಲ್ಲ. ಎಕ್ಸ್ ಪ್ರೆಸ್ ಕೆನಾಲ್ ಯೋಜನೆ ನಿಲ್ಲಿಸಲು ನಮ್ಮ ಪ್ರಾಣ ಕೊಡಲು ನಾವು ಸಿದ್ದರಿದ್ದೇವೆ. ಜಿಲ್ಲೆಯ ಜನರು, ರೈತರ ಹಿತ ನಮಗೆ ಮುಖ್ಯ ಎಂದರು.
ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಯೋಜನೆ ರದ್ದುಪಡಿಸಲು ಒತ್ತಾಯಿಸಿ ಹೋರಾಟ ಸಮಿತಿ ಕರೆ ನೀಡಿದ್ದ ಬಂದ್ನಿಂದಾಗಿ ವರ್ತಕರಿಗೆ, ಬೀದಿಬದಿ ವ್ಯಾಪಾರಸ್ಥರಿಗೆ, ಆಟೋಚಾಲಕರಿಗೆ ಎಲ್ಲಾ ದುಡಿಯುವ ವರ್ಗಕ್ಕೆ ತೊಂದರೆಯಾಗಿದ್ದು, ನಿಮ್ಮಲ್ಲಿ ಕ್ಷಮೆಯಾಚಿಸುವುದಾಗಿ ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಮಸಾಲಾ ಜಯರಾಮ್ ಕೇಳಿದರು.
ಬೆಳಿಗ್ಗೆಯಿಂದಲೇ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳ ವರ್ತಕರು, ಹೋಟೆಲ್ ಮಾಲೀಕರು, ಬೀದಿಬದಿ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಮುಚ್ಚಿ ಬಂದ್ ಗೆ ಬೆಂಬಲ ಸೂಚಿಸಿದರು. ಸರ್ಕಾರಿ ಕಛೇರಿಗಳು, ಬ್ಯಾಂಕ್ ಗಳು ಎಂದಿನಂತೆ ಕಾರ್ಯನಿರ್ವಹಿಸಿದರೂ ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ಸಾರಿಗೆ ಬಸ್ ಗಳು ಸಂಚಾರ ನಡೆಸಿದರೂ ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಗ್ರಾಮಸ್ಥರು ಬಾರದ ಕಾರಣ ಬಸ್ಸುಗಳು ಖಾಲಿ ಹೊಡೆಯುತ್ತಿತ್ತು.
ಪ್ರತಿಭಟನೆಯಲ್ಲಿ ಒಕ್ಕಲಿಗರ ಸಂಘದ ಅಧ್ಯಕ್ಷ ಧನಪಾಲ್, ಉಪಾಧ್ಯಕ್ಷ ಎಂ.ಎನ್.ಚಂದ್ರೇಗೌಡ, ಪಪಂ ಮಾಜಿ ಅಧ್ಯಕ್ಷ ಹೆಚ್.ಆರ್.ರಾಮೇಗೌಡ, ಪಪಂ ಸದಸ್ಯ ಎನ್.ಆರ್.ಸುರೇಶ್, ವಿಶ್ವಕರ್ಮ ಸಮಾಜದ ಅಧ್ಯಕ್ಷ ಅರುಣ್, ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಾರುತಿ, ಆಟೋ ಚಾಲಕರ ಸಂಘದ ಅಧ್ಯಕ್ಷ ಗಂಗಾಧರ್, ಮುಖಂಡರಾದ ಗೌರೀಶ್, ಚೂಡಾರತ್ನ, ಮಾರಪ್ಪನಹಳ್ಳಿ ದಿಲೀಪ್, ತಂಡಗ ಧನಪಾಲ್, ಕಾಳಂಜೀಹಳ್ಳಿ ಸೋಮಶೇಖರ್, ಮಾದಿಹಳ್ಳಿ ಕಾಂತರಾಜು, ಮಾಯಣ್ಣಗೌಡ, ಹರಿದಾಸನಹಳ್ಳಿ ಶಶಿಧರ್, ಸಿಐಟಿಯು ಸತೀಶ್ ಸೇರಿದಂತೆ ಹೇಮಾವತಿ ನೀರಿನ ಹೋರಾಟದ ಬಂದ್ ಗೆ ಜಾತ್ಯಾತೀತ ಜನತಾದಳ, ಭಾರತೀಯ ಜನತಾಪಕ್ಷ, ರೈತ ಸಂಘ, ಆಟೋಚಾಲಕರ ಸಂಘ, ಕನ್ನಡಪರ ಸಂಘಟನೆಗಳು, ವಕೀಲರ ಸಂಘ, ಒಕ್ಕಲಿಗರ ಸಂಘ, ಬ್ರಾಹ್ಮಣ ಸಭಾ, ಬೀದಿಬದಿ ವ್ಯಾಪಾರಸ್ಥರ ಸಂಘ, ವರ್ತಕರ ಸಂಘ ಸೇರಿದಂತೆ ಸಮಾಜದ ಎಲ್ಲಾ ಸಂಘಟನೆಗಳು ಬೆಂಬಲಿಸಿದ್ದವು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ