ತುಮಕೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಹೇಮಾವತಿ ಎಕ್ಸ್ಪ್ರೆಸ್ ಕೆನಲ್ ವಿರುದ್ಧದ ಹೋರಾಟಕ್ಕೆ ಜಿಲ್ಲೆಯ ವಿವಿಧ ಮಠಾಧೀಶರು ಬೆಂಬಲ ವ್ಯಕ್ತಪಡಿಸುವುದರ ಮೂಲಕ ಯಾವುದೇ ಕಾರಣಕ್ಕೂ ಜಿಲ್ಲೆಯ ರೈತರ ಹಿತವನ್ನು ಕಡೆಗಣಿಸಿ ಎಕ್ಸ್ಪ್ರೆಸ್ ಕೆನಲ್ ಕಾಮಗಾರಿ ಮುಂದುವರಿಸಬಾರದೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ತುಮಕೂರು ನಗರದ ಖಾಸಗಿ ಕಲ್ಯಾಣ ಮಂಟಪವೊಂದರಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲೆಯ ವಿವಿಧ ಮಠಗಳ ಮಠಾಧೀಶರು
ಹೇಮಾವತಿ ಯೋಜನೆ ಅಡಿ ತುಮಕೂರು ಜಿಲ್ಲೆಗೆ 25 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿರುವುದು ಸರಿಯಷ್ಟೆ, ಆದರೆ ಇದುವರೆಗೂ ಕೂಡ ಯಾವ ವರ್ಷದಲ್ಲೂ ತುಮಕೂರು ಜಿಲ್ಲೆಗೆ ಲಭ್ಯವಾಗಿರುವ ನೀರಿನ ಪ್ರಮಾಣಕ್ಕೆ ಅನುಸಾರವಾಗಿ ಒಂದು ವರ್ಷವೂ ಕೂಡ 25 ಟಿಎಂಸಿ ನೀರು ತುಮಕೂರು ಜಿಲ್ಲೆಗೆ ಬಂದಿರುವುದಿಲ್ಲ. 25 ಟಿಎಂಸಿ ನೀರಿನಲ್ಲಿ ನೀರಾವರಿ ಯೋಜನೆಗಳು ಹಾಗೂ ಕುಡಿಯುವ ನೀರಿನ ಯೋಜನೆಗಳು ಒಳಗೊಂಡಿರುತ್ತವೆ. ನೀರಿನ ಅಭಾವದಿಂದ ಈ ಎಲ್ಲ ಯೋಜನೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಮಳೆಯ ಪ್ರಮಾಣ ಕಡಿಮೆಯಾದಂತಹ ವರ್ಷಗಳಲ್ಲಿ ತೀವ್ರ ಸಂಕಷ್ಟಕ್ಕೆ ತುಮಕೂರು ಜಿಲ್ಲೆ ಸಿಲುಕಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯ ರೈತರ ಹಾಗೂ ಸಾರ್ವಜನಿಕರ ಪರಿಸ್ಥಿತಿ ಹೀಗಿರುವಾಗ ಹೇಮಾವತಿ ಯೋಜನೆಯ 70ನೇ ಕಿಲೋಮೀಟರ್ ನಿಂದ ಸುಮಾರು 35.4 ಕಿಲೋಮೀಟರ್ ಉದ್ದದ ಪೈಪ್ ಲೈನ್ ಲಿಂಕ್ ಎಕ್ಸ್ಪ್ರೆಸ್ ಕಾಮಗಾರಿ ಯೋಜನೆಯನ್ನು ಕ ಸರ್ಕಾರ ಮಂಜೂರು ಮಾಡಿದೆ. ಈ ಮೂಲಕ ರಾಮನಗರ ಜಿಲ್ಲೆಗೆ ಹೇಮಾವತಿ ನೀರನ್ನು ಕೊಂಡಯುವ ಕಾರ್ಯವನ್ನು ಸರ್ಕಾರ ಈಗಾಗಲೇ ಕೈಗೆತ್ತಿಕೊಂಡಿದ್ದು, ಕೆಲಸವೂ ಕೂಡ ಪ್ರಾರಂಭವಾಗಿರುತ್ತದೆ. ಈ ಯೋಜನೆಯಿಂದಾಗಿ ತುಮಕೂರು ಜಿಲ್ಲೆಗೆ ಬರುತ್ತಿರುವ ನೀರಿನ ಪ್ರಮಾಣದಲ್ಲಿ ಬಹಳಷ್ಟು ಪ್ರಮಾಣ ನೀರು ರಾಮನಗರ ಜಿಲ್ಲೆಗೆ ನೇರವಾಗಿ ಹರಿಯುವುದರಿಂದ ತುಮಕೂರು ಜಿಲ್ಲೆಯ ಜೀವನಾಡಿಯಾಗಿರುವ ಹೇಮಾವತಿ ನಮ್ಮಿಂದ ಕೈತಪ್ಪುವ ಸಾಧ್ಯತೆ ದಟ್ಟವಾಗಿದೆ.
ಈಗಾಗಲೇ ತೀವ್ರ ಬರಗಾಲವನ್ನು ಎದುರಿಸುತ್ತಿರುವ ತುಮಕೂರು ಜಿಲ್ಲೆಯಲ್ಲಿ ಯಾವುದೇ ಕರೆಕಟ್ಟೆಗಳಲ್ಲಿ ನೀರಿಲ್ಲದೆ ಜನ ಜಾನುವಾರು ಪ್ರಾಣಿ ಪಕ್ಷಿ ಜಲಚರಗಳು ಕುಡಿಯುವ ನೀರು ಕೂಡ ತೀವ್ರ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿವೆ. ಈ ಸಂದರ್ಭದಲ್ಲಿ ಹೇಮಾವತಿ ನೀರನ್ನು ರಾಮನಗರ ಜಿಲ್ಲೆಗೆ ನೀಡುವುದಕ್ಕೆ ನಮ್ಮ ಬಲವಾದ ವಿರೋಧವಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ಹಾಗೂ ವಿವಿಧ ಪಕ್ಷದ ಜನಪ್ರತಿನಿಧಿಗಳು ಸಂಘಟನೆಗಳು, ರೈತ ಸಂಘಟನೆಗಳು ಪ್ರಾಣಿ-ಪಕ್ಷಿಗಳ ಹಿತ ಕಾಯುವ ಹೋರಾಟಗಾರರು, ಸೇರಿದಂತೆ ಎಲ್ಲರೂ ಕೂಡ ಒಕ್ಕೋರಲಿನಿಂದ ಇದಕ್ಕೆ ವಿರೋಧ ವ್ಯಕ್ತ ಮಾಡಿದ್ದು ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕು. ಒಂದು ವೇಳೆ ಸರ್ಕಾರ ಇದನ್ನು ನಿರ್ಲಕ್ಷಿಸಿದರೆ ನಾವು ಕಾಮಗಾರಿ ನಡೆಯುವ ಸ್ಥಳದಲ್ಲಿ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಛರಿಸಿದರು.
ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ತೆಗೆದುಕೊಂಡು ಹೋಗಲು ಮಠಾಧೀಶರುಗಳ ಬಲವಾದ ವಿರೋಧವಿದ್ದು, ಕೂಡಲೇ ಕಾಮಗಾರಿಯನ್ನು ನಿಲ್ಲಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಟವಿ ಶ್ರೀಗಳು, ಹಿರೇಮಠದ ಡಾ.ಶ್ರೀಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಶ್ರೀ ಬಸವಮಹಾಲಿಂಗ ಸ್ವಾಮೀಜಿ, ಡಾ.ನಾಗೇಂದ್ರ ಸ್ವಾಮೀಜಿ, ಶ್ರೀ ಕರಿಬಸವ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಶ್ರೀಗಳು ಉಪಸ್ಥಿತರಿದ್ದರು.