ಜಾನುವಾರುಗಳಿಗೆ ಮೇವನ್ನು ವಿತರಿಸಿದ ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ.

ಗುಬ್ಬಿ ತಾಲೂಕನ್ನು ಬರ ಪೀಡಿತ ತಾಲೂಕು ಎಂದು ರಾಜ್ಯ ಸರ್ಕಾರ ಘೋಷಿಸಿದ ಹಿನ್ನೆಲೆ ಗುಬ್ಬಿ ತಾಲೂಕಿನ ಹಾಗಲವಾಡಿ ಹಾಗೂ ಚೇಳೂರು ಹೋಬಳಿಯ ರೈತರಿಗೆ ಚೇಳೂರು ಎಪಿಎಂಸಿ ಗೋಡನ್ ನಲ್ಲಿ ಜಾನುವಾರುಗಳಿಗೆ ಮೇವನ್ನು ವಿತರಿಸಿದ ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ.

ಈಗಾಗಲೇ ಗುಬ್ಬಿ ತಾಲೂಕಿನಲ್ಲಿ ಬರ ನಿರ್ವಹಣೆ ಹಿನ್ನೆಲೆ ಕುಡಿಯುವ ನೀರಿಗೆ ತಾಲೂಕು ಆಡಳಿತ ಮೊದಲ ಆದ್ಯತೆಯನ್ನು ನೀಡಿದ್ದು ಅದನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಿದ್ದು, ಇದೀಗ ಜಾನುವಾರುಗಳಿಗೆ ಮೇವಿನ ಸಮಸ್ಯೆ ಉದ್ಭವಿಸದ ರೀತಿಯಲ್ಲಿ ಮೇವಿನ ಬ್ಯಾಂಕ್ ತೆರೆದು ರೈತರ ಸಂಕಷ್ಟಕ್ಕೆ ನೆರವಾಗಲು ಮುಂದಾಗಿದೆ.

ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಮಾತನಾಡಿ ರಾಜ್ಯ ಸರ್ಕಾರವು ಗುಬ್ಬಿ ತಾಲೂಕು ಅನ್ನು ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡಿದ್ದು, ತಾಲೂಕಿನಲ್ಲಿ ಜಾನುವಾರುಗಳಿಗೆ ಮೇವಿನ ಲಭ್ಯತೆಯು ಕೇವಲ ಮೂರು ವಾರಕ್ಕೆ ಅಷ್ಟೇ ಇರುವ ಕಾರಣ ಬರ ನಿರ್ವಹಣೆ ಗೈಡ್ ಲೈನ್ ಅನುಸಾರ ಮೂರು ವಾರದೊಳಗೆ ಅಗತ್ಯತೆ ಇರುವ ಕಡೆ ಮೇವಿನ ಬ್ಯಾಂಕ್ ತೆರೆಯುವಂತೆ ನಿರ್ದೇಶನವಿದ್ದು, ಅದರ  ಅನುಸಾರ ಗುಬ್ಬಿ ತಾಲೂಕಿನಲ್ಲಿಯೂ ಸಹ ಮೇವಿನ ಲಭ್ಯತೆ ಮೂರು ವಾರಕ್ಕೆ ಇರುವ ಬಗ್ಗೆ ಪಶು ಇಲಾಖೆಯ ಸಹಾಯಕ ನಿರ್ದೇಶಕರು ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾಹಿತಿ ನೀಡಿದ ಹಿನ್ನೆಲೆ ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿ ತಾಲೂಕಿನ ಚೇಳೂರು ಹಾಗೂ ಹಾಗಲವಾಡಿ ಹೋಬಳಿಗಳಲ್ಲಿ ರಾಸುಗಳ ಸಂಖ್ಯೆಯೂ ಹೆಚ್ಚಾಗಿ ಕಂಡು ಬಂದಿದೆ. ಹಾಗಾಗಿ ಇಂದು ಚೇಳೂರು ಗ್ರಾಮದಲ್ಲಿರುವ ಎಪಿಎಂಸಿ ಯ ಗೋಡನ್ ನಲ್ಲಿ ಮೇವಿನ ಬ್ಯಾಂಕ್ ತೆರೆಯಲಾಗಿದ್ದು 7ಟ್ರಕ್ 38 ಟನ್ ನಷ್ಟೂ ಮೇವು ಬಂದಿದ್ದು, 400 ಮಂದಿ ರೈತರಿಗೆ ಕಾರ್ಡ್ ಅನ್ನು ಪಶು ಇಲಾಖೆ ವತಿಯಿಂದ ವಿತರಣೆ ಮಾಡಲಾಗಿದೆ. ಪ್ರತಿ ರಾಸು ಗೆ ದಿನಕ್ಕೆ 6ಕೆ ಜಿ ಅಂತೇ ವಾರಕ್ಕೆ ಆಗುವಷ್ಟು ಮೇವನ್ನು ವಿತರಣೆ ಮಾಡಲಾಗುತ್ತಿದ್ದು, ಪ್ರತಿ ಕೆ ಜಿ ಗೆ ಎರಡು ರೂ ಅನ್ನು ಪಡೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಮೇವನ್ನು ವಿತರಣೆ ಮಾಡಲಾಗುವುದು ಇದರ ಜೊತೆಗೆ ಬೇರೆ ಬೇರೆ ಹೋಬಳಿಯಲ್ಲಿಯೂ ಮೇವಿನ ಅವಶ್ಯಕತೆ ಇದ್ದರೆ, ಟಾಸ್ಕ್ ಫೋರ್ಸ್ ಸಮಿತಿಯ ಗಮನಕ್ಕೆ ಬಂದರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಚರ್ಚಿಸುವುದಾಗಿ ತಿಳಿಸಿದರು.

ತಹಶೀಲ್ದಾರ್ ಆರತಿ ಬಿ. ಮಾತನಾಡಿ ಈಗಾಗಲೇ ರಾಜ್ಯ ಸರ್ಕಾರವು ಗುಬ್ಬಿ ತಾಲೂಕು  ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡಿದ್ದು ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಣೆ ಮಾಡುತ್ತಾ ಬಂದಿದ್ದು, ಇದೀಗ ಜಾನುವಾರುಗಳಿಗೆ ಮೇವಿನ ಸಮಸ್ಯೆಯ ಬಗ್ಗೆ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರು ಗಮನಕ್ಕೆ ತಂದ ಹಿನ್ನೆಲೆ ಎಸ್ ಡಿ ಆರ್ ಎಫ್ ಅಡಿ ಮೂರು ವಾರಕ್ಕಿಂತ ಕಡಿಮೆ ಮೇವಿನ ಕೊರತೆ ಕಂಡುಬಂದಲ್ಲಿ ಮೇವಿನ ಬ್ಯಾಂಕ್ ತೆರೆಯಲು ಸೂಚನೆ ಇದ್ದು, ಅದರಂತೆ ಚೇಳೂರು ಎಪಿಎಂಸಿ ಆವರಣದ ಗೋಡನ್ ನಲ್ಲಿ ಮೇವನ್ನು ಸ್ಟಾಕ್ ಮಾಡಲಾಗಿದ್ದು ಇಂದಿನಿಂದ ಹಾಗಲವಾಡಿ ಹಾಗೂ ಚೇಳೂರು ಹೋಬಳಿಗೆ ಮೇವಿನ ಕೊರತೆಯ ಜೊತೆಗೆ ರಾಸುಗಳ ಸಂಖ್ಯೆಯೂ ಹೆಚ್ಚಾಗಿ ಇರುವ ಕಾರಣ ಮೇವಿನ ಬ್ಯಾಂಕ್ ತೆರೆಯುತ್ತಿದ್ದು, ಪಶು ಇಲಾಖೆ ವತಿಯಿಂದ 500 ಕಾರ್ಡ್ ಗಳನ್ನು ರೈತರಿಗೆ ವಿತರಣೆ ಮಾಡಲಾಗಿದೆ. ನಾಳೆಯಿಂದ ಬೆಳಗ್ಗೆ 7.30 ರಿಂದ ಬೆಳಗ್ಗೆ 11.30 ರವರೆಗೆ ಮೇವನ್ನು ರೈತರಿಗೆ ವಿತರಣೆ ಮಾಡಲು ಸಮಯವನ್ನು ನಿಗದಿ ಮಾಡಲಾಗಿದೆ. ಹಾಗಾಗಿ ರೈತರು ಆ ಸಮಯಕ್ಕೆ ಆಗಮಿಸಿ ಮೇವನ್ನು ಪಡೆಯಲು ವ್ಯವಸ್ಥೆ ಮಾಡಲಾಗಿದ್ದು, ಬಿಸಿಲಿನ ತಾಪಮಾನ ಹೆಚ್ಚಾಗಿರುವ ಕಾರಣ ಸಮಯವನ್ನು ಬದಲಾವಣೆ ಮಾಡಿದ್ದು ಬೆಳಗ್ಗೆ 7.30 ರಿಂದ ಬೆಳಗ್ಗೆ 11.30 ರೊಳಗೆ ಆಗಮಿಸಿ ಮೇವನ್ನು ಪಡೆಯುವಂತೆ ಮಾಧ್ಯಮ ಮೂಲಕ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಇಓ ಪರಮೇಶ್ ಕುಮಾರ್, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್, ಉಪ ತಹಶೀಲ್ದಾರ್ ಪ್ರಕಾಶ್, ಸುಷ್ಮಾ, ಕಂದಾಯ ನಿರೀಕ್ಷಕಿ ಸುಮತಿ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ, ಗ್ರಾಮ ಪಂಚಾಯತ್ ಸಿಬ್ಬಂದಿ, ಹಾಗೂ ಪಶು ಸಂಗೋಪನಾ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *