ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಯಶಸ್ವಿಗೆ ಪೂರ್ವಭಾವಿ ಸಭೆ

ಗುಬ್ಬಿ ಸುದ್ದಿ

ಸೆ.15 ರ ಭಾನುವಾರದಂದು ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿರುವ ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ಕಾರ್ಯಕ್ರಮದ ಹಿನ್ನೆಲೆ ಇಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಹಶೀಲ್ದಾರ್ ಆರತಿ ಬಿ. ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

 

 

ತಹಶೀಲ್ದಾರ್ ಆರತಿ ಬಿ. ಮಾತನಾಡಿ ಪ್ರಜಾ ಪ್ರಭುತ್ವವು ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಭದ್ರ ಬುನಾದಿ ಮೇಲೆ ನಿಂತಿದೆ. ಈ ಭದ್ರ ಬುನಾದಿ ಬಲಿಷ್ಠವಾಗದಿದ್ದರೆ ಪ್ರಜಾಪ್ರಭುತ್ವ ಬಲಿಷ್ಠವಾಗಲಾರದು. ಆದ್ದರಿಂದ ಸಮಾನತೆ, ಸ್ವಾಂತ್ರಂತ್ರ್ಯ ಭ್ರಾತೃತ್ವದ ಆದರ್ಶಗಳು ಭಾರತ ಸಂವಿಧಾನ ಪೀಠಿಕೆಯ ಭಾಗವಾಗಿದೆ. ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ಈ ಬಗ್ಗೆ ಅರಿವು ಮೂಡಿಸುವದೊಡ್ಡ ಕೆಲಸವನ್ನು ಸರ್ಕಾರ ಹಮ್ಮಿಕೊಂಡಿರುವ ಹಿನ್ನೆಲೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

 

 

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ಕಾರ್ಯಕ್ರಮವನ್ನು ಶಿರಾ ತಾಲೂಕು ಉಜ್ಜನಕುಂಟೆ ಯಿಂದ ತುಮಕೂರು ತಾಲೂಕು ನಂದಿಹಳ್ಳಿ ಗ್ರಾಮದ ಗಡಿ ವರೆಗೆ 90 ಕಿ.ಮೀ ಬೃಹತ್ ಮಾನವ ಸರಪಳಿ ನಿರ್ಮಿಸಿ ಪ್ರಜಾ ಪ್ರಭುತ್ವದ ಮೌಲ್ಯಗಳನ್ನು ಪರಿಚಯಿಸಲು ಉದ್ದೇಶಿಸಿದ್ದು,   ನಮ್ಮ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಈ ಸಂಬಂಧ ಪೂರ್ವಭಾವಿ ಸಭೆಯನ್ನು ಕರೆದಿದ್ದು, ಸಂಬಂಧ ಗ್ರಾಮ ಪಂಚಾಯತ್ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಹಲವು ಸಭೆಗಳನ್ನು ನಡೆಸಿದ್ದು, ಪಂಚಾಯಿತಿಗೆ ಎರಡು ಬಸ್ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಶಿಕ್ಷಣ ಇಲಾಖೆ, ಸಿಡಿಪಿಓ, ಕೃಷಿ, ಆರೋಗ್ಯ, ಪಟ್ಟಣ ಪಂಚಾಯಿತಿ ಸೇರಿದಂತೆ ಹಲವು ಇಲಾಖೆಗಳಿಂದ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳ ಸೂಚನೆ ಹಿನ್ನೆಲೆ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ಸಂಘ ಸಂಸ್ಥೆಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮನವಿ ಮಾಡಿದರು.

 

 

 

ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಶಿವಪ್ರಕಾಶ್ ಮಾತನಾಡಿ ಈಗಾಗಲೇ ಪ್ರತಿ ಗ್ರಾಮ ಪಂಚಾಯಿತಿ ವತಿಯಿಂದ ಎರಡು ಬಸ್ ಗಳ ವ್ಯವಸ್ಥೆಯನ್ನು ಮಾಡಿಕೊಳ್ಳಲು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಂದ ನಿರ್ದೇಶನ ಬಂದಿದ್ದು ಅದರಂತೆ ವ್ಯವಸ್ಥೆ ಮಾಡಿಕೊಂಡಿದ್ದು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಹಕಾರ ನೀಡುವ ಮೂಲಕ ಮಾನವ ಸರಪಳಿ ಕಾರ್ಯಕ್ರಮವನ್ನು ಯಶಸ್ವಿಗೆ ಕೈ ಜೋಡಿಸುವಂತೆ ಮನವಿ ಮಾಡುತ್ತಾ ಇದ್ದು, ತಹಶೀಲ್ದಾರ್ ಅವರು ತಿಳಿಸಿದಂತೆ ಈಗಾಗಲೇ  ಸಕಲ ಮಾಡಿಕೊಂಡಿದ್ದು, ಅಂದು ಬೆಳಗ್ಗೆ 06 ಗಂಟೆಗೆ ಬಸ್ ಹೊರಡುವ ಮೂಲಕ ಆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವ್ಯವಸ್ಥೆ ಆಗಿದ್ದು, 08 ಗಂಟೆಯೊಳಗೆ ಜಿಲ್ಲಾಧಿಕಾರಿಗಳು ಸೂಚಿಸಿದ ಸ್ಥಳಕ್ಕೆ ತೆರಳಬೇಕಾಗುತ್ತದೆ ಇದಕ್ಕೆ ಸಂಪೂರ್ಣ ಮಾಹಿತಿಯನ್ನು ಇಂದು ಸಂಜೆಯ ವೇಳೆಗೆ ನಿಗದಿತ ಸ್ಥಳಕ್ಕೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ಹಾಗಾಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಅರಿವು ಮೂಡಿಸುವ ಕಾರ್ಯ ಮಾಡುವಂತೆ ತಿಳಿಸಿದರು.

 

 

 

 

ಕಸಾಪ ಅಧ್ಯಕ್ಷ ಯತೀಶ್ ಕುಮಾರ್ ಮಾತನಾಡಿ ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ್ತು ಅದರ ಮೌಲ್ಯಗಳು ಮತ್ತು ತತ್ವಗಳನ್ನು ಎತ್ತಿ ಹಿಡಿಯಲು ಸೆ 15 ರ ದಿನವನ್ನು ವಾರ್ಷಿಕವಾಗಿ ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಪ್ರಜಾಪ್ರಭುತ್ವವು ಒಂದು ದೇಶದ ಎಲ್ಲಾ ನಾಗರಿಕರ ಸಮಾನ ಭಾಗವಹಿಸುವಿಕೆಯೊಂದಿಗೆ ಕಾರ್ಯನಿರ್ವಹಿಸುವ ಸರ್ಕಾರದ ಒಂದು ರೂಪವಾಗಿದೆ. ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸುವ ಕಲ್ಪನೆಯು ಪ್ರಜಾಪ್ರಭುತ್ವದ ಸಾರ್ವತ್ರಿಕ ಘೋಷಣೆಯಿಂದ ಹುಟ್ಟಿಕೊಂಡಿದೆ. ಇದನ್ನು ಇಂಟರ್-ಪಾರ್ಲಿಮೆಂಟರಿ ಕೌನ್ಸಿಲ್ ತನ್ನ 161 ನೇ ಅಧಿವೇಶನದಲ್ಲಿ ಸೆಪ್ಟೆಂಬರ್ 16, 1997 ರಂದು ಅಂಗೀಕರಿಸಿತು. ಅದರಿಂದ ಸೆ.15 ರಂದು ಆಚರಿಸಲಾಗುತ್ತಿದ್ದು, ಪ್ರಜಾ ಪ್ರಭುತ್ವ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮಾನವ ಸರಪಳಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಸ್ವಾಗತಾರ್ಹ ಸಂಗತಿ ಎಂದು ತಿಳಿಸಿದರು.

 

 

 

 

 

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ ಮಾತನಾಡಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಸೆಪ್ಟೆಂಬರ್ 15ರಂದು ತುಮಕೂರು ಜಿಲ್ಲೆಯ ಶಿರಾ ತಾಲೂಕು ತಾವರೆಕೆರೆ ಗ್ರಾಮ ಪಂಚಾಯಿತಿ ಉಜ್ಜನಕುಂಟೆ ಗ್ರಾಮದಿಂದ ತುಮಕೂರು ತಾಲೂಕು ಹಿರೇಹಳ್ಳಿ ಗ್ರಾಮ ಪಂಚಾಯಿತಿ ನಂದಿಹಳ್ಳಿ ಗ್ರಾಮದವರೆಗೆ 90 ಕಿ.ಮೀ. ಉದ್ದದ ಮಾನವ ಸರಪಳಿ ನಿರ್ಮಿಸುವ ಮೂಲಕ ಭಾರತ ದೇಶದಲ್ಲಿ ಪ್ರಜಾಪ್ರಭತ್ವವನ್ನು ಗಟ್ಟಿಗೊಳಿಸಿ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಹಾಗಾಗಿ ಸೆ.15 ರ ಭಾನುವಾರ ದಂದು ಯುವ ಜನತೆ, ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘ-ಸಂಸ್ಥೆಗಳು, ಕ್ರೀಡಾಪಟುಗಳು, ಮಹಿಳಾ ಸಂಘಟನೆಗಳು, ರೈತ ಬಾಂಧವರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

 

 

ಪುರ್ವಭಾವಿ ಸಭೆಯಲ್ಲಿ ಪ, ಪಂ ಮುಖ್ಯಾಧಿಕಾರಿ ಮಂಜುಳಾ ದೇವಿ, ತಾಲೂಕು ವೈದ್ಯಾಧಿಕಾರಿ ಡಾ. ಬಿಂದು ಮಾಧವ, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *