ಗುಬ್ಬಿ, ಸುದ್ದಿ : ಸಾರ್ವಜನಿಕರು, ರೈತರಿಂದ ಬರುವ ಕುಂದುಕೊರೆತೆಯ ಅರ್ಜಿಗಳನ್ನು ಅಧಿಕಾರಿಗಳು ಶೀಘ್ರವಾಗಿ ವಿಲೇವಾರಿ ಮಾಡದೆ ಹೋದರೆ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಎಚ್ಚರಿಸಿದರು.
ಪಟ್ಟಣದ ಬಾಬು ಜಗಜೀವನ್ ರಾಮ್ ಸಮುದಾಯ ಭವನದಲ್ಲಿ ತಾಲ್ಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು
ಗ್ರಾಮ ಮಟ್ಟದಲ್ಲಿ ವಿಎ ಮತ್ತು ಆರ್ ಐ ಗಳು ರೈತರ ಸಮಸ್ಯೆಗಳನ್ನು ಕಾಲಮಿತಿ ಒಳಗೆ ಪರಿಹರಿಸಬೇಕು. ಜನಸ್ನೇಹಿಯಾಗಿ ಅಧಿಕಾರಿಗಳು ಕೆಲಸ ಮಾಡಬೇಕು. ಕಂದಾಯ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು ಕೂಡಲೇ ಅದನ್ನು ಬಗೆಹರಿಸಬೇಕು ಜಿಲ್ಲಾ ಮಟ್ಟಕ್ಕೆ ಸಮಸ್ಯೆ ಬಂದರೆ ಖಂಡಿತವಾಗಿಯೂ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಸುಮಾರು 300 ಮೀಲಿ ಮೀಟರ್ ಮಳೆಯಾಗಿದೆ. ರಾಗಿ ಮತ್ತು ಶೇಂಗಾವನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ಬೇಕಾದ ಬಿತ್ತನೆ ಬೀಜ, ರಸ ಗೊಬ್ಬರವನ್ನು ಸರಿಯಾದ ಸಮಯಕ್ಕೆ ರೈತರಿಗೆ ತಲುಪಿಸಬೇಕು. ಜಿಲ್ಲೆಯ ರೈತರಿಗೆ 178 ಕೋಟಿ ಬರ ಪರಿಹಾರ ಒದಗಿಸಲಾಗಿದೆ. ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಅಧಿಕಾರಿಗಳು ಹೆಚ್ಚಿನ ಆದ್ಯತೆ ನೀಡಬೇಕು. ತಾಲೂಕಿನ ಜನರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಜಿ ಪ್ರಭು ಮಾತನಾಡಿ ಕುಡಿಯುವ ನೀರು, ಸರಕಾರಿ ಶಾಲೆಗಳು ಅಂಗನವಾಡಿಗಳು ಸೇರಿದಂತೆ ಎಲ್ಲಿಯೂ ಕೂಡ ಸಮಸ್ಯೆ ಆಗದಂತೆ ಅಧಿಕಾರಿಗಳು ಕುದ್ದು ಕ್ರಮ ವಹಿಸಬೇಕು ಇಲ್ಲದೆ ಹೋದರೆ ಖಂಡಿತವಾಗಿ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ ಆರತಿ, ತಾಪಂ ಕಾರ್ಯನಿರ್ವಣಾಧಿಕಾರಿ ಪರಮೇಶ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಲೇಪಾಕ್ಷಪ್ಪ, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ.
ಪಟ್ಟಣ ಪಂಚಾಯಿತಿಯ ಸದಸ್ಯರು,
ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.