ಗುಬ್ಬಿ: ತಾಲ್ಲೂಕಿನ ನಿಟ್ಟೂರು ಬಳಿ ಪೊಲೀಸರ ಸರ್ಪಗಾವಲಿನಲ್ಲಿ ಪ್ರತಿಭಟನಾ ನಿರತ ರೈತರನ್ನು ತಡೆಯುವ ಎಲ್ಲಾ ತಯಾರಿ ನಡೆಸಿದ್ದರು. ಅದರೆ ಅಲ್ಲಲ್ಲೇ ಗುಂಪಾಗಿ ಕಾಣಿಸಿಕೊಂಡ ರೈತರ ಗುಂಪು ನಿಟ್ಟೂರು ಸಮೀಪದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸಾಗರೋಪಾದಿಯಲ್ಲಿ ಜಮಾಯಿಸ ತೊಡಗಿದರು. ನೂರರ ಸಂಖ್ಯೆ ಸಾವಿರ ಆಗುತ್ತಿದ್ದಂತೆ ರೈತರು ರಸ್ತೆಗಿಳಿಯ ತೊಡಗಿದರು. ರೈತ ಸಂಘದ ಮುಖಂಡರು, ಬಿಜೆಪಿ ಜೆಡಿಎಸ್ ಮುಖಂಡರು ಸ್ಥಳಕ್ಕೆ ಧಾವಿಸಿದ ತಕ್ಷಣ ಪ್ರತಿಭಟನೆ ತೀವ್ರ ಸ್ವರೂಪ ಕಂಡಿತು.
ಪ್ರತಿಭಟನಾ ಸಭೆಯ ನಂತರ ಪಾದಯಾತ್ರೆಯಲ್ಲಿ ಕೆನಾಲ್ ಕಾಮಗಾರಿ ನಡೆಯುತ್ತಿರುವ ಸ್ಥಳ ಸುಂಕಾಪುರದತ್ತ ಹೊರಟಾಗ ಪೊಲೀಸರು ಎಲ್ಲಾ ಮುಖಂಡರನ್ನು ಹಾಗೂ ಮಠಾಧೀಶರನ್ನು ಬಂಧಿಸುವ ಪ್ರಯತ್ನ ಮಾಡಿದರು. ತಕ್ಷಣ ರೊಚ್ಚಿಗೆದ್ದ ರೈತರು ಪೊಲೀಸರ ಬಸ್ಸುಗಳನ್ನು ತಡೆಯೊಡ್ಡಿ ಚಕ್ರದ ಟೈರ್ ಗಾಳಿ ಬಿಟ್ಟು ಬಸ್ಸುಗಳನ್ನು ಅಲ್ಲಾಡಿಸಿ ಕೆಲ ಕಾಲ ಪ್ರಕ್ಷುಬ್ಧ ವಾತಾವರಣ ಸೃಷ್ಟಿಸಿದ್ದರು. ಬಂಧಿತ ಮುಖಂಡರನ್ನು ಬಿಟ್ಟ ನಂತರ ಬಿಗುವಿನ ವಾತಾವರಣ ಸಡಿಲ ಗೊಂಡಿತು. ಅಲ್ಲಿಂದ ನೇರ ಸುಂಕಾಪುರ ಸುಮಾರು 7 ಕಿಮೀ ಪಾದಯಾತ್ರೆ ನಡೆಸಿದರು.
ಪ್ರತಿಭಟನೆಯಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಕುಣಿಗಲ್ ತಾಲ್ಲೂಕಿಗೆ 3.3 ಟಿಎಂಸಿ ತೆಗೆದುಕೊಂಡು ಹೋಗಲಿ. ಅದಕ್ಕೆ ಎಂದೂ ಅಡ್ಡಿ ಮಾಡೋಲ್ಲ. ಕುಣಿಗಲ್ ಹೆಸರಿನಲ್ಲಿ ಮುಂದಕ್ಕೆ ರಾಮನಗರ ಜಿಲ್ಲೆಗೆ ನೀರು ಹರಿಸುವ ಅಕ್ರಮಕ್ಕೆ ನಮ್ಮ ರೈತರು ಬಿಡುವುದಿಲ್ಲ. ಶಾಸಕ ರಂಗನಾಥ್ ಅವರ ಮಾವ ಆಗಿರುವ ಡಿ, ಕೆ,ಶಿವಕುಮಾರ್ ಅವರಿಗೆ ಬದ್ಧರಾಗಿ ಕೆಲಸ ಮಾಡಲೇ ಬೇಕು ಎಂದು ಹೊರಟಿರುವ ಈ ಸರ್ಕಾರಕ್ಕೆ ನಾಚಿಕೆಯಾಗಬೇಕು ನಾವುಗಳು ಜಿಲ್ಲೆಯ ರೈತರನ್ನು ಬಲಿ ಪಡೆಯುವ ಕೆಲಸ ಮಾಡಲು ಬಿಡುವುದಿಲ್ಲ. ಮುಖ್ಯ ನಾಲೆಯ ಮೂಲಕ ಆಲೋಕೇಶನ್ ಮಾಡಿದಷ್ಟು ನೀರು ತೆಗೆದುಕೊಂಡು ಹೋಗಿ ಎಂದು ಗುಡುಗಿದರು.
ಶಾಸಕ ಬಿ.ಸುರೇಶ್ ಗೌಡ ಮಾತನಾಡಿ ರೈತರಿಗೆ ಅನ್ಯಾಯ ಮಾಡಿದರೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಸಜ್ಜಾಗಿದ್ದೆವೆ.ಇಲ್ಲಿನ ಪ್ರತಿಭಟನೆಯಿಂದ ಆಗುವ ಅನಾಹುತಕ್ಕೆ ಸರ್ಕಾರ ನೇರ ಹೊಣೆ. ಜೈಲಿಗೆ ಸಾವಿರಾರು ರೈತರು ಒಟ್ಟಿಗೆ ಹೋಗೋಣ. ನಮ್ಮ ಹಕ್ಕು ಪ್ರತಿಪಾದಿಸಲು ಸ್ಥಳಕ್ಕೆ ಹೋಗೋಣ. ಶಾಂತಿಯುತ ಪ್ರತಿಭಟನೆ ನಡೆಸೋಣ. ಗುಬ್ಬಿ ಶಾಸಕರು ಕಾಂಗ್ರೆಸ್ ಸೇರಿ ಮಾತು ಕಟ್ಟಿಕೊಂಡಿದ್ದಾರೆ. ಈಗ ಜನಶಕ್ತಿ ಪ್ರದರ್ಶನ ಮಾಡಿಯೇ ನಮ್ಮ ನೀರು ಉಳಿಸಿಕೊಳ್ಳೋಣ ಎಂದರು.
ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮಾತನಾಡಿ ಹೇಮಾವತಿ ಜಿಲ್ಲೆಯ ಜೀವನಾಡಿ. ಕೃಷಿಕರಿಗೆ, ನಾಗರಿಕರಿಗೆ ಕುಡಿಯುವ ನೀರು ಇದಾಗಿದೆ. ಹೇಮಾವತಿ ಹತ್ತು ವಿಧಾನಸಭಾ ಕ್ಷೇತ್ರದ ಜೀವನಾಡಿಯಾಗಿದೆ . ಇಂತಹ ನೀರನ್ನು ಕುಣಿಗಲ್ ತಾಲ್ಲೂಕಿನ ಹೆಸರು ನೆಪಕ್ಕೆ ಹೇಳಿ ರಾಮನಗರ ಜಿಲ್ಲೆ ಕಡೆ ತೆಗೆದುಕೊಂಡು ಹೋಗುತ್ತಾರೆ. ಇಲ್ಲಿನ ರೈತರಿಗೆ ವಿಷ ಕೊಡುವ ಕೆಲಸ. ಮುಂದಿನ ದಿನದಲ್ಲಿ ತುರುವೇಕೆರೆ, ಗುಬ್ಬಿ, ತುಮಕೂರು ತಾಲ್ಲೂಕಿಗೆ ದೊಡ್ಡ ಪೆಟ್ಟು ಬೀಳಲಿದೆ ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ ಲಿಂಕ್ ಕೆನಾಲ್ ಕಾಮಗಾರಿ ಆರಂಭಿಸಿ ಉಪ ಮುಖ್ಯಮಂತ್ರಿ ಡಿ, ಕೆ ಶಿವಕುಮಾರ್ ಅವರು ಅಕ್ರಮ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರ ರದ್ದು ಮಾಡಿದ್ದ ಈ ಕಾಮಗಾರಿಗೆ ಮರು ಚಾಲನೆ ನೀಡಿ ಸಾವಿರ ಕೋಟಿ ಕಾಮಗಾರಿ ಆರಂಭಿಸಿದ್ದಾರೆ. ಜಿಲ್ಲೆಯ ಉಳಿದ ತಾಲ್ಲೂಕಿಗೆ ಹೇಮಾವತಿ ನೀರು ವಂಚಿತವಾಗುತ್ತದೆ. ಈ ಪೈಪ್ ಲೈನ್ ಕಾಮಗಾರಿ ನಿಲ್ಲಿಸಿದರೆ ಯಾವ ತಾಲ್ಲೂಕಿಗೂ ಅನ್ಯಾಯ ಆಗುವುದಿಲ್ಲ. ಮತ ನೀಡಿ ಬೀದಿಗೆ ಬಂದ ರೈತರು ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಾರೆ. ಕಾಂಗ್ರೆಸ್ ಶಾಸಕರು, ಸಚಿವರು ಸರ್ಕಾರಕ್ಕೆ ಮನದಟ್ಟು ಮಾಡಬೇಕಿತ್ತು. ಪ್ರಭಾವಿ ಡಿಸಿಎಂ ಅವರಿಗೆ ಹೆದರುವ ಅವಶ್ಯವಿಲ್ಲ. ನಿಷೇಧಾಜ್ಞೆ ಹೇರುವ ಅಗತ್ಯವಿಲ್ಲ. ಶಾಂತಿಯುತ ಹೋರಾಟ ನಮ್ಮದು. ಪೊಲೀಸರನ್ನು ಕರೆ ತಂದು ಬೆದರಿಸುವ ಅಗತ್ಯವಿರಲಿಲ್ಲ. ಸಾವಿರಾರು ರೈತರನ್ನು ಬರದಂತೆ ಕೂಡಾ ಮಾಡಿದ್ದಾರೆ. ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಖಂಡನೀಯ ಎಂದರು.
ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ 650 ಕೋಟಿ ಕಾಮಗಾರಿಯನ್ನು ಸಾವಿರ ಕೋಟಿ ಎಂದು ಹೇಳಿ 350 ಕೋಟಿಯ ಕಿಕ್ ಬ್ಯಾಕ್ ಗುತ್ತಿಗೆ ಇದಾಗಿದೆ. ಲೋಕಾಯುಕ್ತರು ಸುಮೋಟೋ ಕೇಸ್ ದಾಖಲಿಸಿ ತನಿಖೆ ಮಾಡಬೇಕಿದೆ. ನಮ್ಮ ಶಾಸಕರ ಪರಿಸ್ಥಿತಿ ಅತ್ತ ಕೆರೆ ಇತ್ತ ಹಳ್ಳ ಎನ್ನುವಂತಿದೆ. ಶಾಸಕ ರಂಗನಾಥ್ ಅವರ ಧೈರ್ಯ ಮೆಚ್ಚುವಂತದ್ದು. ನಿಮ್ಮ ಕೆಚ್ಚು ನಮ್ಮ ಶಾಸಕರಿಗೆ ಬರಬೇಕಿದೆ. ನಿಮ್ಮ ಕಾಲು ಕೆಳಗೆ ಮೂರು ಸಾರಿ ನುಸುಳಿಸಿ ಎಂದು ವ್ಯಂಗ್ಯವಾಡಿದರು. ಸಿದ್ದರಾಮಯ್ಯ ಅವರು ದಯವಿಟ್ಟು ಈ ಕಾಮಗಾರಿ ಬಗ್ಗೆ ಕೂಲಂಕುಷ ಪರಿಶೀಲನೆ ಮಾಡಿ. ಜಿಲ್ಲಾ ಸಚಿವರು ಸರ್ವ ಪಕ್ಷಗಳ ಸಭೆ ಕರೆದು ಅಂತಿಮ ತೀರ್ಮಾನ ಮಾಡಬೇಕು ಎಂದ ಅವರು ಶಾಸಕ ರಂಗನಾಥ್ ಅವರು ಡಾಕ್ಟರ್ ಎಂದು ಹೇಳುತ್ತಾರೆ. ಹೇಗೆ ಆದರೂ ಗೊತ್ತಿಲ್ಲ. ಕುಣಿಗಲ್ ಕೆರೆಗೆ ನೀರು ಸರಾಗವಾಗಿ ಹರಿಸಿಕೊಳ್ಳದೆ ರಾಮನಗರದ ಚಿಂತೆ ಮಾಡುತ್ತಿದ್ದಾರೆ. ಇದು ಅವರ ಸಂಬಂಧ ಪ್ರೀತಿ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ತೇವಡೆಹಳ್ಳಿ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮೀಜಿ, ದೊಡ್ಡಗುಣಿ ಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ, ಗೊಲ್ಲಹಳ್ಳಿ ಮಠದ ಶ್ರೀ ವಿಭವಶಂಕರ ಸ್ವಾಮೀಜಿ, ಕಾರದ ಮಠದ ಶ್ರೀ ಕಾರದ ಬಸವ ಸ್ವಾಮೀಜಿ, ಮುಖಂಡರಾದ ರವಿ ಹೆಬ್ಬಾಕ, ಭೈರಪ್ಪ, ಪಂಚಾಕ್ಷರಿ, ಕೆ.ಟಿ.ಶಾಂತಕುಮಾರ್, ಬಿ.ಎಸ್.ನಾಗರಾಜು, ಕಳ್ಳಿಪಾಳ್ಯ ಲೋಕೇಶ್, ಬೆಟ್ಟಸ್ವಾಮಿ, ಚಂದ್ರಶೇಖರ ಬಾಬು, ನಿಟ್ಟೂರು ಪ್ರಕಾಶ್, ಬಲರಾಮಯ್ಯ, ರೈತ ಸಂಘದ ವೆಂಕಟೇಗೌಡ, ಸಿ.ಜಿ.ಲೋಕೇಶ್ ಇತರರು ಇದ್ದರು.