ಗುಬ್ಬಿ ಸುದ್ದಿ
ಗುಬ್ಬಿ ತಾಲೂಕಿನ ಎಚ್ ಎ ಎಲ್ ಘಟಕಕ್ಕೆ ತೆಗೆದುಕೊಂಡ ರೈತರ ಜಮೀನಿಗೆ ಪರ್ಯಾಯವಾಗಿ ರೈತರಿಗೆ ಸರ್ಕಾರದ ವತಿಯಿಂದ ಮರು ಮಂಜೂರು ಮಾಡಿ ಹದ್ದು ಬಸ್ತ್ ಮಾಡಿ ಜಮೀನನ್ನು ಗುರ್ತಿಸಿ ಕೊಡಲು ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆ ತಾಲೂಕು ಆಡಳಿತ ಇಂದು ಪೊಲೀಸ್ ಬಂದಬಸ್ತ್ ಮೂಲಕ ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಹಾಗೂ ತಹಶೀಲ್ದಾರ್ ಆರತಿ ಬಿ. ನೇತೃತ್ವದಲ್ಲಿ ಡಿ ವೈ ಎಸ್ಪಿ ಶೇಖರ್ ಸಮ್ಮುಖದಲ್ಲಿ ಜಾಗವನ್ನು ಗುರ್ತಿಸಿಕೊಡುವ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು.
ಬಿದರೆಹಳ್ಳ ಕಾವಲ್ ಗ್ರಾಮಸ್ಥರು ತಮ್ಮ ಜಮೀನು ಎಚ್ ಎ ಎಲ್ ಘಟಕಕ್ಕೆ ಸ್ವಾಧೀನ ಆದ ಹಿನ್ನೆಲೆ ಸರ್ಕಾರವು ಆ ರೈತರಿಗೆ ಪರ್ಯಾಯ ಜಮೀನು ಕೊಡಬೇಕಾಗಿದ್ದು ಆದ್ಯ ಕರ್ತವ್ಯವಾಗಿದ್ದು, ಅದರಂತೆ ಬಿದರೆಹಳ್ಳ ಕಾವಲ್ ಗ್ರಾಮದ ಸರ್ವೆ ನಂಬರ್ ನಂತೆ ಜಮೀನನ್ನು ಸ್ಥಳಾಂತರಿಸಿ ಪ್ರತ್ಯೇಕ ಗಡಿ ಗುರ್ತಿಸಿ ಕೊಟ್ಟಿರದ ಕಾರಣ ಹಲವು ವರ್ಷಗಳಿಂದ ಸರ್ಕಾರದ ಮೇಲೆ ಒತ್ತಡ ತಂದ ಪರಿಣಾಮವಾಗಿ ಇಂದು ಆ ಕಾರ್ಯವು ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ತಹಶೀಲ್ದಾರ್ ಆರತಿ ಬಿ. ಡಿ ವೈ ಎಸ್ಪಿ ಶೇಖರ್ ಎಡಿಎಲ್ ಆರ್ ತಿಮ್ಮಯ್ಯ ಅವರ ನೇತೃತ್ವದಲ್ಲಿ ಗಡಿಯನ್ನು ಗುರ್ತಿಸಿ ಕೊಡುವಲ್ಲಿ ಯಶಸ್ವಿಯಾಯಿತು.
ಗಡಿ ಗುರ್ತಿಸಿ ಕೊಡಲು ತಾಲೂಕು ಆಡಳಿತ ಮುಂದಾದ ಸಂದರ್ಭದಲ್ಲಿ ಜಮೀನನ್ನು ಕಳೆದುಕೊಂಡ ರೈತರು ನಮ್ಮ ಜಮೀನನ್ನು ಬಿಟ್ಟು ಕೊಡುವುದಿಲ್ಲ, ಹಲವು ವರ್ಷಗಳಿಂದ ಉಳುಮೆ ಮಾಡುತ್ತಿದ್ದ ನಮ್ಮ ಜಮೀನನ್ನು ಅದು ಹೇಗೆ ಬೇರೆಯವರಿಗೆ ಕೊಡಲು ಸಾಧ್ಯ ಎಂದು ಪ್ರಶ್ನಿಸಿದ ವೇಳೆ ಹಲವು ವರ್ಷಗಳಿಂದ ಈ ಸಮಸ್ಯೆ ಇದ್ದು ಇಲ್ಲಿಯವರೆಗೂ ಸುಮ್ಮನೆ ಇದ್ದದ್ದು ಏಕೆ? ನಿಮ್ಮ ಬಳಿ ಇದಕ್ಕೆ ಸಂಬಂಧಿಸಿದ ದಾಖಲೆಗಳು ಇಲ್ಲ ಎಂದು ಉತ್ತರಿಸಿದ ಸಂದರ್ಭದಲ್ಲಿ 10 ದಿನದ ಕಾಲಾವಕಾಶಕ್ಕೆ ಮನವಿ ಮಾಡಿದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಒಂದು ಗಂಟೆಯೂ ಕಾಲಾವಕಾಶ ಕೊಡುವುದಿಲ್ಲ ಎಂದು ಹೇಳಿ ತಹಶೀಲ್ದಾರ್ ಅವರು ತಮ್ಮ ಕಾರ್ಯವನ್ನು ಆರಂಭಿಸಿ ರೈತರಿಗೆ ಜಮೀನಿನ ಗಡಿಯನ್ನು ಗುರ್ತಿಸಿ ಕೊಡುವಲ್ಲಿ ಯಶಸ್ವಿಯಾದರು.
ತಹಶೀಲ್ದಾರ್ ಆರತಿ ಬಿ ಮಾತನಾಡಿ ನಿಟ್ಟೂರು ಹೋಬಳಿ ಬಿದರೆಹಳ್ಳ ಕಾವಲ್ ಗ್ರಾಮಸ್ಥರ ಜಮೀನು ಎಚ್ ಎ ಎಲ್ ಘಟಕಕ್ಕೆ ಭೂಸ್ವಾಧೀನ ಆದ ಹಿನ್ನೆಲೆ ಅದಕ್ಕೆ ಪರ್ಯಾಯವಾಗಿ ಸರ್ವೆ ನಂಬರ್ 200,ರಿಂದ 207, 196, 112, 114, 124,126,198 ಇಲ್ಲಿಯವರೆಗೆ ಜಮಿನು ಮಂಜೂರು ಮಾಡಿ ದುರಸ್ಥಿ ಮಾಡಿದ್ದು, ಈ ಪೈಕಿ 36 ಮಂದಿಗೆ ಜಮೀನನ್ನು ಒಟ್ಟಾಗಿ ಸ್ಥಳಾಂತರಿಸಿದ್ದು, ಈ ಜಾಗವನ್ನು ಪ್ರತ್ಯೇಕವಾಗಿ ಗುರ್ತಿಸಿ ಕೊಡದೆ ಇದ್ದ ಕಾರಣ ಆಜುಬಾಜಿನ ಗ್ರಾಮಸ್ಥ ರೈತರೊಂದಿಗೆ ಜಗಳ ನಡೆಯುತ್ತಿದ್ದ ಹಿನ್ನೆಲೆ ಜಮೀನನ್ನು ಗುರ್ತಿಸಿ ಕೊಡುವಂತೆ ಮನವಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆ ಸರ್ಕಾರವು ಸೂಚಿಸಿದ ತರುವಾಯ ಜಿಲ್ಲಾಧಿಕಾರಿಗಳು ಕಾನೂನಿನ ಅಡಿಯಲ್ಲಿ ಗಡಿಯನ್ನು ಗುರ್ತಿಸಿ ಕೊಡಲು ತಾಲೂಕು ಆಡಳಿತಕ್ಕೆ ಸೂಚಿಸಿದ್ದರು. ಈ ತರುವಾಯ ಇಂದು ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಅವರ ಸಮ್ಮುಖದಲ್ಲಿ ಪೊಲೀಸ್ ಬಂದ ಬಸ್ತ್ ನಲ್ಲಿ 36 ರೈತರ ಜಮೀನನ್ನು ಹದ್ದು ಬಸ್ತ್ ಮಾಡಿ ಗಡಿಯನ್ನು ಗುರುತಿಸಿ ಕೋಡಲಾಗಿದೆ ಎಂದು ತಿಳಿಸಿದರು.
ನೊಂದ ರೈತ ನಟರಾಜ್ ಮಾತನಾಡಿ ಎಚ್ ಎ ಎಲ್ ಘಟಕಕ್ಕೆ ತೆಗೆದುಕೊಂಡ ಜಮೀನಿಗೆ ಪರ್ಯಾಯವಾಗಿ ಸರ್ಕಾರದ ವತಿಯಿಂದ ಮರು ಮಂಜೂರು ಮಾಡಿ ಬೇರೆಡೆಗೆ ಸ್ಥಳಾಂತರಿಸುವ ಜಮೀನಿನ ಹದ್ದು ಬಸ್ತು ಮಾಡಿ ಜಮೀನು ಗುರ್ತಿಸಿಕೊಡಲು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಜಮೀನನ್ನು ಗುರ್ತಿಸಿ ಕೊಡಲು ತಾಲೂಕು ಆಡಳಿತ ಮುಂದಾದ ವೇಳೆ ಹಲವು ವರ್ಷಗಳಿಂದ ಉಳುಮೆ ಮಾಡುತ್ತಿದ್ದ ರೈತರು ಟಿ ಟಿ ಕಟ್ಟುತ್ತಾ ಬಂದಿದ್ದು, ಅದರ ದಾಖಲೆಗಳಷ್ಟೇ ನಮ್ಮ ಬಳಿ ಇದ್ದು ಬೇರೆ ಯಾವುದೇ ರೀತಿಯ ದಾಖಲೆ ಇಲ್ಲದಿದ್ದು ನಮ್ಮ ಪೂರ್ವಜರ ಕಾಲದಿಂದಲೂ ಉಳುಮೆ ಮಾಡಿರುವ ನಾವು ಇಂದು ಬೇರೆ ಕಡೆಯಿಂದ ಬಂದವರಿಗೆ ಜಮೀನನ್ನು ಬಿಟ್ಟು ಕೊಡುವುದಾದರೂ ಹೇಗೆ ? ಹಲವು ಬಾರಿ ಈ ಬಗ್ಗೆ ತಹಶೀಲ್ದಾರ್ ಎ ಸಿ ಜಿಲ್ಲಾಧಿಕಾರಿಗಳ ಬಳಿ ತೆರಳಿ ನಮ್ಮ ಕಷ್ಟ ಹೇಳಿಕೊಂಡರೂ ಪ್ರಯೋಜನವಿಲ್ಲದಂತಾಗಿದೆ. ಈ ಬಗ್ಗೆ ಶಾಸಕರು ಗಮನಹರಿಸಿ ನ್ಯಾಯ ಕೊಡಿಸಬೇಕಿತ್ತು, ಆದರೆ ಯಾವ ಅಧಿಕಾರಿಯು ಇತ್ತ ತಲೆ ಹಾಕದಿರುವುದು ನೋವಿನ ಸಂಗತಿ. ಇದನ್ನು ಇಲ್ಲಿಗೆ ಬಿಡುವುದಿಲ್ಲ ಕಂದಾಯ ಸಚಿವರ ವರೆಗೂ ತೆಗೆದುಕೊಂಡು ಹೋಗಿ ನಮ್ಮ ಹಕ್ಕನ್ನು ಪಡೆದೇ ಪಡೆಯುತ್ತೇವೆ ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ಈ ಕಾರ್ಯಾಚರಣೆಯಲ್ಲಿ ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ಡಿ ವೈ ಎಸ್ಪಿ ಶೇಖರ್, ಎಡಿಯಲ್ ಆರ್ ತಿಮ್ಮಯ್ಯ, ಸರ್ಕಲ್ ಇನ್ಸ್ಪೆಕ್ಟರ್ ಗೋಪಿನಾಥ್,ಕಂದಾಯ ನಿರೀಕ್ಷಕ ಮೋಹನ್, ಸರ್ವೇಯರ್ ನಿಜಗುಣಪ್ಪ ಸೇರಿದಂತೆ ಗುಬ್ಬಿ ಸಬ್ ಇನ್ಸ್ಪೆಕ್ಟರ್ ಸುನಿಲ್, ಸಿ ಎಸ್ ಪುರ ಸಬ್ ಇನ್ಸ್ಪೆಕ್ಟರ್ ಶಿವಕುಮಾರ್, ಸರ್ವೆ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಅಕ್ಕಪಕ್ಕದ ಗ್ರಾಮದ ರೈತರು ಉಪಸ್ಥಿತರಿದ್ದರು.