ಗುಬ್ಬಿ ಸರ್ಕಾರಿ ಶಾಲೆ ಅಭಿವೃದ್ಧಿಗೆ ಕೋಟ್ಯಂತರ ರೂ. ವೆಚ್ವಮಾಡಿದ ಸಿನಾಪ್ಸಿಸ್ ಸಂಸ್ಥೆಗೆ ಶ್ಲಾಘನೆ

ಸ್ಮಾರ್ಟ್ ಸೌಲಭ್ಯದ ಸದ್ಬಳಕೆಗೆ ತಹಸೀಲ್ದಾರ್ ಆರತಿ ವಿದ್ಯಾರ್ಥಿಗಳಿಗೆ ಕರೆ

ತುಮಕೂರು, ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ಸ್ಮಾರ್ಟ್ ಆಗುವಂತೆ ಗುಬ್ಬಿ ತಹಸೀಲ್ದಾರ್ ಆರತಿ ಬಿ. ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.

ಪಟ್ಟಣದ ಬಾಲಕಿಯರ ಪ್ರೌಢ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅಮೆರಿಕಾ ಮೂಲದ ಬೆಂಗಳೂರಿನ ಸಿನಾಪ್ಸಿಸ್ ಸಂಸ್ಥೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಆಧುನಿಕ ಸೌಲಭ್ಯಗಳೊಂದಿಗೆ ನವೀಕರಿಸಿ ಕೊಟ್ಟಿರುವ ಕ್ರಮವನ್ನು ಶ್ಲಾಘಿಸಿದ ಅವರು, ಈ ಸೌಲಭ್ಯಗಳ ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.

ಸಿನಾಪ್ಸಿಸ್ ಸಂಸ್ಥೆಯು ಶಾಲಾ ಅಭಿವೃದ್ಧಿ ದೃಷ್ಟಿಯಿಂದ ಗ್ರಾಮೀಣ ಪ್ರಿತಿಭೆಗಳೇ ಹೆಚ್ಚು ಓದುತ್ತಿರುವ ಬಾಲಕಿಯರ ಪ್ರೌಢಶಾಲೆಗೆ ಸ್ಮಾರ್ಟ್ ಕ್ಲಾಸ್ ರೂಮು, 20ಕ್ಕೂ ಹೆಚ್ವು ಕಂಪ್ಯೂಟರ್ ಗಳ ಲ್ಯಾಬ್, ಶಾಲೆಯ ಎಲ್ಲ ಕೊಠಡಿಗಳ ನವೀಕರಣ, ಅಡುಗೆ ಮನೆ ನಿರ್ಮಾಣ ಹಾಗೂ ಶೌಚಾಲಯಗಳ ಅಭಿವೃದ್ಧಿ ಇತ್ಯಾದಿ ಕೆಲಸಗಳನ್ನು ಹೆಚ್ಚಿನ ಆಸಕ್ತಿ ವಹಿಸಿ ನಿರ್ಮಿಸಿಕೊಟ್ಟಿರುವುದು ಅಭಿನಂದನಾರ್ಹ ಸಂಗತಿ ಎಂದು ಹೇಳಿದರು.

ಸರ್ಕಾರೇತರ ಸಂಸ್ಥೆಗಳು ಇಂತಹ ಸಾರ್ಥಕ ಸೇವೆ ಮಾಡುವುದರಿಂದ ರಾಜ್ಯದ ಶಿಕ್ಷಣ ವ್ಯವಸ್ಥೆ ಇನ್ನಷ್ಟು ಸುಧಾರಿಸಲಿದೆ ಎಂದರು.

ಸಿನಾಪ್ಸಿಸ್ ಸಂಸ್ಥೆಯ ಮುಖ್ಯಸ್ಥರಾದ ಬಿ.ಯು.ಚಂದ್ರಶೇಖರ್ ಮಾತನಾಡಿ, ತಮ್ಮ ಸಂಸ್ಥೆಯು ತಮ್ಮ ಸಾಮಾಜಿಕ ಜವಾಬ್ದಾರಿಯ ಅನುದಾನವನ್ನು ಶಿಕ್ಷಣಕ್ಕೆ ಒತ್ತು ನೀಡಿ ಕೆಲಸ ಮಾಡಲಿದೆ. ಈಗಾಗಲೆ ಹಲವಾರು ವರ್ಷಗಳಿಂದ  ವಿದ್ಯಾರ್ಥಿಗಳಿಗೆ ವಿಜ್ಞಾನ ಕ್ಷೇತ್ರದ ಬೆಳವಣಿಗೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ತುಮಕೂರು ಜಿಲಗಲೆಯ ಗುಬ್ಬಿ ಪಟ್ಟಣದ ಸರ್ಕಾರಿ ಬಾಲಕಿಯರ ಶಾಲೆಯನ್ನು ಆಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಿರುವುದು ಸಮಾಧಾನ ತಂದಿದೆ. ಮುಂದಿನ ದಿನಗಳಲ್ಲಿ ಇಲ್ಲಿ ತಾರಾಲಯ ಮಾಡುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.

 

ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು ಜಿ ಅವರು ಮಾತನಾಡಿ, ಖಾಸಗಿ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆಯ ತಮ್ಮ ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ಬಳಸುವುದರಿಂದ ಗ್ರಾಮೀಣ ಪ್ರತಿಭೆಗಳು ವಿಶ್ವಮಟ್ಟಕ್ಕೇರಲು ಅನುಕೂಲವಾಗುತ್ತದೆ. ತುಮಕೂರು ಜಿಲ್ಲೆಯ ಕೈಗಾರಿಕಾ ವಲಯ ಏಷ್ಯಾದಲ್ಲಿಯೇ ಅತಿದೊಡ್ಡ ಕ್ಷೇತ್ರವಾಗಿದ್ದು ಸಿನಾಪ್ಸಿಸ್ ಮಾದರಿಯಲ್ಲಿ ಬೇರೆ ಸಂಸ್ಥೆಗಳೂ ತಮ್ಮ ಇಚ್ಚಾಶಕ್ತಿಯನ್ನು ಶಿಕ್ಷಣ ಕ್ಷೇತ್ರಕ್ಕೆ ತೋರಬೇಕು ಎಂದರು.

ಇದೇ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ತುಮಕೂರು ಜಿಲ್ಲೆಯಲ್ಲೇ ವಿಶೇಷ ಮತ್ತು ಅಳಿವಿನಂಚಿನಲ್ಲಿರುವ ಜಾಲಾರಿ ಹೂವಿನ ಸಸಿಯನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಅವರು,  ಮುಂದಿನ ಪೀಳಿಗೆಗೆ ಅಳಿವಿನಂಚಿನಲ್ಲಿರುವ ಈ ಜಾಲಾರಿ ಸಸ್ಯ ಪ್ರಭೇದವನ್ನು ಉಳಿಸಲು ಹಾಗೂ ಇದನ್ನು ಭೌಗೋಳಿಕವಾಗಿ ವಿಶೇಷ ಸಸ್ಯವೆಂದು ಗುರುತಿಸುವ ಜಿಯೋ ಟ್ಯಾಗ್ ಪಡೆಯಲು ಜಿಲ್ಲಾಡಳಿತ ಚಿಂತನೆ ನಡೆಸಿದೆ ಎಂದು ಅವರು ತಿಳಿಸಿದರು.

ಶಾಲೆಯ ನವೀಕರಣಕ್ಕೆ ಶ್ರಮಿಸಿದ ಎಲ್ಲರನ್ನೂ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಮಂಜುಳಾದೇವಿ, ಕಾಮಗಾರಿ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದ
ಭಾರತ್ ಕೇರ್ಸ್ ಮುಖ್ಯಸ್ಥ ರತಿಕಾಂತ್, ಮುಖ್ಯ ಶಿಕ್ಷಕಿ ದೇವಿಕಾ, ಶಿಕ್ಷಕರಾದ ಜಯಣ್ಣ, ಎಸ್ ಡಿ ಎಂ ಸಿ ಅಧ್ಯಕ್ಷ ರೇಣುಕಾ, ಎನ್ ಜಿ ಓ ಸಂಸ್ಥೆ ಪದಾಧಿಕಾರಿಗಳು ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!