ತುಮಕೂರು: ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಜೂನ್ 4ರಂದು ನಡೆಯಲಿರುವ ಮತ ಎಣಿಕಾ ಕಾರ್ಯಕ್ಕೆ ಎಣಿಕಾ ಏಜೆಂಟರನ್ನು ನೇಮಿಸಿ, ಜೂನ್ 1ರೊಳಗಾಗಿ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸೋಮವಾರ ಸಭೆ ನಡೆಸಿ ಮಾತನಾಡಿದ ಅವರು ಜೂನ್ 4ರಂದು ನಗರದ ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಮತ ಎಣಿಕೆಗಾಗಿ 11 ಕೊಠಡಿಗಳಲ್ಲಿ 117 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಎಣಿಕಾ ಟೇಬಲ್‍ಗೆ ಒಬ್ಬ ಮತ ಎಣಿಕಾ ಏಜೆಂಟರನ್ನು ನೇಮಿಸಲು ಅವಕಾಶವಿದ್ದು, ಅಭ್ಯರ್ಥಿಗಳು ತಮ್ಮ ಮತ ಎಣಿಕಾ ಏಜೆಂಟರನ್ನು ನೇಮಿಸಿ ಜೂನ್ 1ರೊಳಗಾಗಿ ನಮೂನೆ 18ರಲ್ಲಿ ಮಾಹಿತಿ ಸಲ್ಲಿಸಬೇಕೆಂದರು.
ಭಾರತದ ನಾಗರಿಕನಾಗಿರುವ ಹಾಗೂ 18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿಯನ್ನು ಮತ ಎಣಿಕಾ ಏಜೆಂಟರನ್ನಾಗಿ ನೇಮಿಸಬಹುದಾಗಿದೆ. ಆದರೆ ಕೇಂದ್ರ/ ರಾಜ್ಯ ಸರ್ಕಾರದ ಯಾವುದೇ ಹಾಲಿ ಮಂತ್ರಿ/ಸಂಸತ್ ಸದಸ್ಯ ಅಥವಾ ವಿಧಾನಸಭೆ/ ವಿಧಾನ ಪರಿಷತ್ ಹಾಲಿ ಸದಸ್ಯ, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥ/ ನೇತಾರ/ ಅಧ್ಯಕ್ಷ ಅಥವಾ ಪಾಲಿಕೆ ಮೇಯರ್ ಅಥವಾ ನಗರಸಭೆ/ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಅಥವಾ ಯಾವುದೇ ಸರ್ಕಾರಿ ನೌಕರ ಅಥವಾ ಸರ್ಕಾರಿ ಸಂಸ್ಥೆಗಳ ಅಧ್ಯಕ್ಷರಾಗಿ ನೇಮಕಗೊಂಡ ರಾಜಕೀಯ ಪದಾಧಿಕಾರಿ/ಸರ್ಕಾರಿ ನ್ಯಾಯವಾದಿ/ಹೆಚ್ಚುವರಿ ಸರ್ಕಾರಿ ನ್ಯಾಯವಾದಿ ಅಥವಾ ರಾಷ್ಟ್ರೀಯ/ರಾಜ್ಯ/ಜಿಲ್ಲಾ ಸಹಕಾರ ಸಂಸ್ಥೆಗಳ ಚುನಾಯಿತ ಅಧ್ಯಕ್ಷರು ಅಥವಾ ಜಿಲ್ಲಾ ಪಂಚಾಯತಿ/ ಬ್ಲಾಕ್ ಮಟ್ಟದ ಪಂಚಾಯತಿ ಸಮಿತಿ ಅಧ್ಯಕ್ಷರಾಗಿಬಾರದು ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.
ಎಣಿಕಾ ಏಜೆಂಟರಾಗಿ ನೇಮಕ ಹೊಂದಿದವರು ಯಾವ ಏಣಿಕಾ ಟೇಬಲ್‍ಗೆ ನೇಮಕ ಮಾಡಲಾಗಿದೆಯೋ ಅದೇ ಟೇಬಲ್‍ನಲ್ಲಿ ಎಣಿಕಾ ಕಾರ್ಯವನ್ನು ವೀಕ್ಷಿಸಬೇಕು. ಬೇರೆ ಟೇಬಲ್ ಅಥವಾ ಎಣಿಕಾ ಕೊಠಡಿಯಲ್ಲಿ ಕುಳಿತುಕೊಳ್ಳಲು ಅವಕಾಶವಿರುವುದಿಲ್ಲ. ಎಣಿಕಾ ಸಮಯದಲ್ಲಿ ಹೊರಗಡೆ/ಕೊಠಡಿಯ ಒಳಗೆ ಓಡಾಡಲು ಅವಕಾಶವಿರುವುದಿಲ್ಲ. ಎಣಿಕಾ ಕೇಂದ್ರಕ್ಕೆ ಆಗಮಿಸುವ ಅಭ್ಯರ್ಥಿಗಳು, ಚುನಾವಣಾ ಏಜೆಂಟರು, ಎಣಿಕಾ ಏಜೆಂಟರು ಜೂನ್ 4ರ ಬೆಳಿಗ್ಗೆ 6.30ರೊಳಗಾಗಿ ಏಣಿಕಾ ಕೇಂದ್ರಗಳಲ್ಲಿ ಹಾಜರಿರಬೇಕೆಂದು ನಿರ್ದೇಶನ ನೀಡಿದರು.
ಮೊಬೈಲ್, ಇಂಕ್ ಪೆನ್, ಚಾಕು, ಬ್ಲೇಡ್, ಮತ್ತಿತರ ಆಯುಧಗಳು, ಸ್ಮಾರ್ಟ್ ವಾಚ್, ಸ್ಮಾರ್ಟ್ ಪೆನ್, ನೀರಿನ ಬಾಟಲಿ, ಕಬ್ಬಿಣದ ವಸ್ತುಗಳು, ಬೆಂಕಿ, ಸಿಗರೇಟ್, ತಂಬಾಕು, ತಿಂಡಿ ಪದಾರ್ಥಗಳನ್ನು ಎಣಿಕಾ ಕೇಂದ್ರದೊಳಗೆ ತರಲು ಅವಕಾಶವಿರುವುದಿಲ್ಲ. ಮತ ಎಣಿಕೆ ಕಾರ್ಯದ ವೀಕ್ಷಣೆಗಾಗಿ ಬರುವ ಅಭ್ಯರ್ಥಿಗಳು, ಚುನಾವಣಾ ಏಜೆಂಟರು, ಎಣಿಕಾ ಎಜೆಂಟರುಗಳಿಗಾಗಿ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿದ್ದು, ಈ ಕೌಂಟರ್ ನಲ್ಲಿ ಹಣ ಪಾವತಿಸುವ ಮೂಲಕ ನಿಗದಿತ ಸಮಯದಲ್ಲಿ ಉಪಹಾರ/ ಕಾಫಿ/ ಟೀ/ ಊಟವನ್ನು ತೆಗೆದುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.
ಪೊಲೀಸ್ ಹಾಗೂ ಸಿಎಪಿಎಫ್ ಭದ್ರತೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳಿರುವ ಭದ್ರತಾ ಕೊಠಡಿಯನ್ನು ಜೂನ್ 4ರ ಬೆಳಿಗ್ಗೆ 7:30ಕ್ಕೆ ತೆರೆಯಲಾಗುವುದು. ನಂತರ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆಯನ್ನು ಪ್ರಾರಂಭಿಸಲಾಗುವುದು. ಮತ ಎಣಿಕೆಯನ್ನು ಗೊಂದಲವಿಲ್ಲದೆ ವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ಭದ್ರತಾ ಕೊಠಡಿಯಿಂದ ಮತ ಎಣಿಕಾ ಕೊಠಡಿಗೆ ವಿದ್ಯುನ್ಮಾನ ಮತ ಯಂತ್ರಗಳನ್ನು ತಂದು ಕೊಡಲು ನಿಯೋಜಿಸಿರುವ ಸಿಬ್ಬಂದಿಗಳಿಗೆ 8 ವಿಧಾನಸಭಾ ಕ್ಷೇತ್ರಗಳಿಗೂ ಪ್ರತ್ಯೇಕ ಕಲರ್ ಕೋಡೆಡ್ ಟಿ-ಶರ್ಟ್‍ಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳು, ಚುನಾವಣಾ ತಹಶಿಲ್ದಾರ್ ರೇಷ್ಮಾ ಚುನಾವಣಾ ಶಿರಸ್ತೆದಾರ್ ಮಂಜುನಾಥ್, ರವಿಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.