ತುಮಕೂರು: ಜಿಲ್ಲೆಯಲ್ಲಿ ಕಳೆದ ಏಪ್ರಿಲ್ 26ರಂದು ಜರುಗಿದ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಜೂನ್ 4ರಂದು ಸುಗಮವಾಗಿ ಮತ ಎಣಿಕಾ ಕಾರ್ಯ ನಡೆಸಲು ಎಣಿಕಾ ಕೊಠಡಿ, ಎಣಿಕಾ ಟೇಬಲ್, ಅಗತ್ಯ ಅಧಿಕಾರಿ/ಸಿಬ್ಬಂದಿಗಳ ನಿಯೋಜನೆ ಸೇರಿದಂತೆ ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಲೋಕಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಗೆ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾಹಿತಿ ಹಂಚಿಕೊಂಡ ಅವರು ಜಿಲ್ಲೆಯ ಲೋಕಸಭಾ ಕ್ಷೇತ್ರಕ್ಕೊಳಪಡುವ ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ಮಧುಗಿರಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯನ್ನು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜು ಹಾಗೂ ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ, ಗುಬ್ಬಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕಾ ಕಾರ್ಯವನ್ನು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜೂನ್ 4ರಂದು ಬೆಳಿಗ್ಗೆ 8 ಗಂಟೆಯಿಂದ ನಡೆಸಲಾಗುವುದು ಎಂದು ಹೇಳಿದರು.
448 ಅಧಿಕಾರಿ/ಸಿಬ್ಬಂದಿಗಳ ನಿಯೋಜನೆ :-
ಜಿಲ್ಲೆಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ 8 ವಿಧಾನಸಭಾ ಕ್ಷೇತ್ರಗಳು ಒಳಪಡಲಿದ್ದು, ಈ ವ್ಯಾಪ್ತಿಯ ಒಟ್ಟು 1846 ಮತಗಟ್ಟೆಗಳಲ್ಲಿ ನಡೆದ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಮೂಲಕ 12,96,720 ಮತದಾರರು ಮತದಾನ ಮಾಡಿದ್ದಾರೆ. ಅಲ್ಲದೆ ಮನೆಯಿಂದ ಮತದಾನ ಮಾಡಿದ 80 ವರ್ಷ ಮೇಲ್ಪಟ್ಟ 2933 ಮತದಾರರು, ಶೇ.40ಕ್ಕಿಂತ ಹೆಚ್ಚಿನ ಪ್ರಮಾಣದ ಅಂಗವೈಕಲ್ಯ ಹೊಂದಿರುವ 878 ವಿಕಲಚೇತನರು, 545 ಅಗತ್ಯ ಸೇವೆಯಲ್ಲಿರುವ, 3023 ಚುನಾವಣಾ ಕರ್ತವ್ಯ ನಿಯೋಜಿತ ಹಾಗೂ 274 ಸೇವಾ ಮತದಾರರು ಸೇರಿ 7653 ಮತದಾರರು ಅಂಚೆ ಮತದಾನದ ಮೂಲಕ ಮತದಾನ ಮಾಡಿದ್ದಾರೆ. ಸೇವಾ ಮತದಾರರಿಂದ ಮತಪತ್ರವನ್ನು ಸ್ವೀಕರಿಸಲು ಜೂನ್ 4ರ ಬೆಳಿಗ್ಗೆ 7.59 ನಿಮಿಷದವರೆಗೂ ಅವಕಾಶವಿರುತ್ತದೆ ಎಂದು ಮಾಹಿತಿ ನೀಡಿದರು.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್ನಂತೆ ಒಟ್ಟು 112 ಟೇಬಲ್, ಅಂಚೆ ಮತಪತ್ರ ಹಾಗೂ ಇಟಿಪಿಬಿಎಸ್ ಎಣಿಕೆಗಾಗಿ 19(18+1) ಟೇಬಲ್ ಸೇರಿದಂತೆ ಒಟ್ಟು 131 ಟೇಬಲ್ಗಳಲ್ಲಿ ಮತ ಎಣಿಕೆಯನ್ನು ನಡೆಸಲಾಗುವುದು. ಅಂಚೆ ಮತಪತ್ರಗಳ ಎಣಿಕೆಗಾಗಿ 2 ಕೊಠಡಿಯಲ್ಲಿ 18 ಎಣಿಕಾ ಟೇಬಲ್ಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಟೇಬಲ್ಗೂ ತಲಾ ಒಬ್ಬರು ಸಹಾಯಕ ಚುನಾವಣಾ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಇದಕ್ಕಾಗಿ ಒಟ್ಟು 448 ಎಣಿಕಾ ಮೇಲ್ವಿಚಾರಕರು, ಎಣಿಕಾ ಸಹಾಯಕರು ಹಾಗೂ ಸೂಕ್ಷ್ಮ ವೀಕ್ಷಕರನ್ನು ನಿಯೋಜಿಸಲಾಗಿದ್ದು, ಎಣಿಕಾ ಕಾರ್ಯಕ್ಕೆ ನಿಯೋಜಿಸಿದವರಿಗೆ ಈಗಾಗಲೇ 2 ಹಂತದ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ಮಧುಗಿರಿ, ತುಮಕೂರು ಗ್ರಾಮಾಂತರ ಹಾಗೂ ಕೊರಟಗೆರೆ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯನ್ನು ತಲಾ 2 ಕೊಠಡಿಗಳಲ್ಲಿ ಉಳಿದ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯನ್ನು ತಲಾ 1 ಕೊಠಡಿಯಲ್ಲಿ ಮಾಡಲಾಗುವುದು. ಪ್ರತಿ ಎಣಿಕಾ ಕೊಠಡಿಗೂ ಗೆಟೆಡ್ ಅಧಿಕಾರಿಯನ್ನು ಸಹಾಯಕ ಚುನಾವಣಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
ಪ್ರತಿ ಎಣಿಕಾ ಸುತ್ತಿನ ಅಂಕಿ ಅಂಶಗಳನ್ನು Encore ಸಾಫ್ಟ್ವೇರ್ನಲ್ಲಿ ಎಂಟ್ರಿ ಮಾಡಿ ಅಪ್ಲೋಡ್ ಮಾಡಲಾಗುವುದು. ಪ್ರತಿ ವಿಧಾನಸಭಾ
ಕ್ಷೇತ್ರದ ಮಾಹಿತಿಯನ್ನು Encore ಸಾಫ್ಟ್ವೇರ್ನಲ್ಲಿ ಅಪ್ಲೋಡ್ ಮಾಡಿದ ನಂತರ ಸಾರ್ವಜನಿಕರು ವೀಕ್ಷಿಸಬಹುದಾಗಿದೆ ಎಂದು ತಿಳಿಸಿದರು.
ಅಧಿಕೃತ ಗುರುತಿನ ಚೀಟಿ ಹೊಂದಿದವರಿಗೆ ಮಾತ್ರ ಪ್ರವೇಶ :-
ಮತ ಎಣಿಕಾ ಕಾರ್ಯಕ್ಕೆ ಅಭ್ಯರ್ಥಿಗಳು ನೇಮಕ ಮಾಡಿಕೊಂಡಿರುವ ಎಣಿಕಾ ಏಜೆಂಟರು ಕಡ್ಡಾಯವಾಗಿ ಚುನಾವಣಾಧಿಕಾರಿಗಳಿಂದ ಗುರುತಿನ ಚೀಟಿ ಪಡೆದುಕೊಳ್ಳತಕ್ಕದ್ದು. ಈಗಾಗಲೇ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು 340 ಎಣಿಕಾ ಏಜೆಂಟರುಗಳನ್ನು ನೇಮಕ ಮಾಡಿರುವ ಬಗ್ಗೆ ನಿಗಧಿತ ನಮೂನೆಯಲ್ಲಿ ಮಾಹಿತಿ ಸಲ್ಲಿಸಿದ್ದಾರೆ ಎಂದು ತಿಳಿಸಿದರಲ್ಲದೆ, ಮತ ಎಣಿಕಾ ಕೇಂದ್ರಗಳಿಗೆ ಅಧಿಕೃತ ಗುರುತಿನ ಚೀಟಿ ಹೊಂದಿರುವ ಮತ ಎಣಿಕೆ ಸಿಬ್ಬಂದಿ, ಅಭ್ಯರ್ಥಿಗಳ ಚುನಾವಣಾ ಏಜೆಂಟ್ ಹಾಗೂ ಮತ ಎಣಿಕಾ ಏಜೆಂಟರುಗಳನ್ನು ಹೊರತುಪಡಿಸಿ ಅನ್ಯರಿಗೆ ಪ್ರವೇಶವಿರುವುದಿಲ್ಲ ಎಂದು ತಿಳಿಸಿದರು.
ಮೊಬೈಲ್, ಕ್ಯಾಮರಾ, ಕ್ಯಾಲ್ಕ್ಯುಲೇಟರ್, ಸ್ಮಾರ್ಟ್ ವಾಚ್, ಸ್ಮಾರ್ಟ್ ಪೆನ್, ಸಿಗರೇಟು, ಬೆಂಕಿಪೊಟ್ಟಣ, ಬೀಡಿ, ಮದ್ಯ, ನೀರು, ನೀರಿನ ಬಾಟಲ್, ಇಂಕ್ಪೆನ್, ತಂಬಾಕು ವಸ್ತುಗಳು, ಯಾವುದೇ ರೀತಿಯ ಆಯುಧ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳನ್ನು ಮತ ಎಣಿಕೆ ಕೇಂದ್ರದೊಳಗೆ ತರುವುದನ್ನು ನಿಷೇಧಿಸಿದೆ ಎಂದು ಮಾಹಿತಿ ನೀಡಿದರು.
ಮತ ಎಣಿಕೆ ಕಾರ್ಯವನ್ನು ವೀಕ್ಷಿಸಲು ವೀಕ್ಷಕರ ನೇಮಕ :-
ಜಿಲ್ಲೆಯ ಲೋಕಸಭಾ ಕ್ಷೇತ್ರದ ಮತ ಎಣಿಕೆಯು ಎರಡು ಕೇಂದ್ರಗಳಲ್ಲಿ ನಡೆಯಲಿದ್ದು, ಎಣಿಕಾ ಕಾರ್ಯವನ್ನು ವೀಕ್ಷಿಸಲು ಚುನಾವಣಾ ಆಯೋಗವು ಇಬ್ಬರು ವೀಕ್ಷಕರನ್ನು ನೇಮಿಸಿದೆ. ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಎಣಿಕಾ ಕೇಂದ್ರಕ್ಕೆ ಶಮ್ಮಿ ನಾಹಿದ್ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಎಣಿಕಾ ಕೇಂದ್ರಕ್ಕೆ ಕೆ.ಎಸ್.ವಾಸವ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
1 ಗಂಟೆ ಮೊದಲು ಹಾಜರಿರತಕ್ಕದ್ದು :-
ಮತ ಎಣಿಕಾ ಕಾರ್ಯವು ಜೂನ್ 4ರಂದು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದ್ದು, ಉಮೇದುವಾರರು ಮತ್ತು ಮತ ಎಣಿಕಾ ಏಜೆಂಟರುಗಳು ಮತ ಎಣಿಕಾ ಕಾರ್ಯ ಪ್ರಾರಂಭವಾಗುವ ಕನಿಷ್ಟ 1 ಗಂಟೆ ಮೊದಲು ಎಣಿಕಾ ಕೇಂದ್ರದಲ್ಲಿ ಹಾಜರಿರಬೇಕು ಎಂದು ತಿಳಿಸಿದರು.
ಮೊದಲು ಅಂಚೆ ಮತ ಪತ್ರಗಳ ಎಣಿಕೆ :-
ಭಾರತ ಚುನಾವಣಾ ಆಯೋಗದ ನಿಯಮದಂತೆ ಅಂಚೆ ಮತಪತ್ರಗಳ ಎಣಿಕೆಯನ್ನು ಮೊದಲು ಪ್ರಾರಂಭಿಸಿ ನಂತರ ವಿದ್ಯುನ್ಮಾನ ಮತ ಯಂತ್ರಗಳ ಮತ ಎಣಿಕೆಯನ್ನು ನಡೆಸಲಾಗುವುದು. ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ಮತ ಎಣಿಕೆ ನಡೆಸುವ ದೃಷ್ಟಿಯಿಂದ ಎಣಿಕಾ ಕೇಂದ್ರದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ಬಿಗಿ ಭದ್ರತೆಯಲ್ಲಿ ಮತ ಎಣಿಕೆ :-
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಮಾತನಾಡಿ, ಚುನಾವಣಾ ಆಯೋಗದ ನಿರ್ದೇಶನದಂತೆ ಮತ ಎಣಿಕಾ ಕೇಂದ್ರದ ಸುತ್ತಮುತ್ತ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಎಣಿಕಾ ಕೇಂದ್ರಕ್ಕೆ ರಾಜ್ಯ ಪೊಲೀಸ್, ಕೆಎಸ್ಆರ್ಪಿ, ಸಿಎಪಿಎಫ್ ಸೇರಿದಂತೆ 3 ಸುತ್ತಿನ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ವ್ಯವಸ್ಥಿತವಾಗಿ ಮತ ಎಣಿಕೆ ನಡೆಸುವ ನಿಟ್ಟಿನಲ್ಲಿ ಮತ ಎಣಿಕಾ ಕೇಂದ್ರಕ್ಕೆ ಬಿಗಿ ಭದ್ರತೆಯನ್ನು ಒದಗಿಸಲು 300 ಮಂದಿ ಹೆಚ್ಸಿ/ಪಿಸಿ, 48 ಎಎಸ್ಐ, 29 ಪಿಎಸ್ಐ, 15 ಸಿಪಿಐ, 4 ಡಿವೈ.ಎಸ್ಪಿ, 1 ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಚುನಾವಣಾ ಫಲಿತಾಂಶ ಪ್ರಕಟವಾದ ನಂತರ 5 ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿರ್ಬಂಧಿಸಲಾಗಿದೆ. ವಿಜೇತರು ಯಾವುದೇ ಮೆರವಣಿಗೆ, ವಿಜಯೋತ್ಸವ ನಡೆಸಲು ಅವಕಾಶವಿರುವುದಿಲ್ಲ. ಈ ನಿಯಮವನ್ನು ಉಲ್ಲಂಘಿಸಿದವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಚುನಾವಣೆ ಬಹಿರಂಗ ಪ್ರಚಾರದ ಸಂದರ್ಭದಲ್ಲಿ ಕುಣಿಗಲ್ ತಾಲ್ಲೂಕಿನಲ್ಲಿ ಕೆಲವು ಅಹಿತಕರ ಘಟನೆ ವರದಿಯಾಗಿರುವ ಹಿನ್ನೆಲೆಯಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಜೂನ್ 4ರಂದು ಹೆಚ್ಚಿನ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಎಣಿಕಾ ಕೇಂದ್ರಕ್ಕೆ ಬಿಗಿ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಜೂನ್ 4ರಂದು ಡಾ: ಶಿವಕುಮಾರ ಸ್ವಾಮೀಜಿ ವೃತ್ತದಿಂದ ಬಟವಾಡಿ ಕಡೆಗೆ ಪಾದಚಾರಿ ಹಾಗೂ ಯಾವುದೇ ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಹಾಗೂ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ನಡುವಿನ ಕುವೆಂಪು ನಗರ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಮತ ಎಣಿಕಾ ಕೇಂದ್ರ ಪ್ರವೇಶಿಸುವವರು ಕುವೆಂಪು ನಗರದ ಕಡೆಯಿಂದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಹಿಂಭಾಗದ ಆವರಣದಲ್ಲಿ ಹಾಗೂ ಕೋತಿತೋಪು ರಸ್ತೆಯಲ್ಲಿ ವಾಹನಗಳ ನಿಲುಗಡೆ ಮಾಡಬಹುದಾಗಿದೆ. ಸರ್ಕಾರಿ ಪಾಲಿಟೆಕ್ನಿಕ್ ಹಿಂಭಾಗದ ಗೇಟ್ ಮೂಲಕ ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳಿಗೆ ಎಣಿಕಾ ಕೇಂದ್ರದೊಳಗೆ ಪ್ರವೇಶ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.