ಡೆಂಗ್ಯೂ ಉತ್ಪತ್ತಿ ಕೇಂದ್ರವಾದ ಜಿಲ್ಲಾಸ್ಪತ್ರೆ ಆರೋಗ್ಯ ಅಧಿಕಾರಿಗೆ  ಜಿಲ್ಲಾಧಿಕಾರಿಗಳಿಂದ ತೀವ್ರ ತರಾಟೆ

ತುಮಕೂರು ಜಿಲ್ಲಾಸ್ಪತ್ರೆಯ ಐಸಿಯು ವಾರ್ಡ್ ಬಳಿಯಿರುವ ಶೌಚಾಲಯದಲ್ಲಿ ರಾಶಿ ರಾಶಿ ಕಸದ ಮೂಟೆಯನ್ನು ಕಂಡ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಈಗಿಂದೀಗಲೇ ಕಸದ ಮೂಟೆಯನ್ನು ತೆರವುಗೊಳಿಸದಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|| ಅಸ್ಗರ್ ಬೇಗ್ ಅವರಿಗೆ ಎಚ್ಚರಿಕೆ ನೀಡಿದರು.

 

 

ಅವರು ಜಿಲ್ಲಾಸ್ಪತ್ರೆಯ ಮಕ್ಕಳ ವಿಭಾಗ, ಡೆಂಗ್ಯು ಚಿಕಿತ್ಸಾ ವಿಭಾಗ, ನವಜಾತ ಶಿಶು ವಿಭಾಗ, ಹೆರಿಗೆ ಕೊಠಡಿ, ಮಹಿಳಾ ವಿಭಾಗ, ಪ್ರಸವಪೂರ್ವ ಆರೈಕೆ ಕೊಠಡಿ, ಆರ್‍ಒಪಿ ಕೊಠಡಿ, ಡಾಟಾ ಎಂಟ್ರಿ ಆಪರೇಟರ್ ಕೊಠಡಿ, ಮತ್ತಿತರ ವಿಭಾಗಗಳಿಗೆ ಇಂದು ಸಂಜೆ ಭೇಟಿ ನೀಡಿ ಪರಿಶೀಲನೆ ಸಂದರ್ಭದಲ್ಲಿ ಅನೈರ್ಮಲ್ಯವನ್ನು ಕಂಡು ಆಸ್ಪತ್ರೆ ಸಿಬ್ಬಂದಿ, ವೈದ್ಯಾಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಡಾಟಾ ಎಂಟ್ರಿ ಆಪರೇಟರ್ ಕೊಠಡಿಯಂತೂ ಕೆಟ್ಟ ವಾಸನೆ ಮತ್ತು ಕತ್ತಲೆಯಿಂದ ಕೂಡಿದೆ. ಸಿಬ್ಬಂದಿಗಳ ಕೊಠಡಿಗಳಲ್ಲೇ ಶುಚಿಯಾಗಿಲ್ಲ. ರೋಗಿಗಳ ವಾರ್ಡುಗಳನ್ನು ಇನ್ನೆಷ್ಟರ ಮಟ್ಟಿಗೆ ಸ್ವಚ್ಛವಾಗಿಡುತ್ತೀರಾ? ಭಾನುವಾರ ಜಿಲ್ಲಾಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದಾಗ ರೋಗಿಯೊಬ್ಬರು ಮಾಡಿದ್ದ ವಾಂತಿ ಹಾಗೆ ಇದೆ. ಪ್ರತೀ ದಿನ ಸ್ವಚ್ಛಗೊಳಿಸುವುದಿಲ್ಲವೇ? ಇಂದು ಸಂಜೆ 6 ಗಂಟೆಯೊಳಗೆ ಜಿಲ್ಲಾಸ್ಪತ್ರೆ ಎಲ್ಲ ವಾರ್ಡು, ಶೌಚಾಲಯ, ಆಸ್ಪತ್ರೆ ಸುತ್ತ-ಮುತ್ತ ಸ್ವಚ್ಛತೆ ಮಾಡದಿದ್ದಲ್ಲಿ ಸೇವೆಯಿಂದ ವಜಾ ಮಾಡಲಾಗುವುದೆಂದು ಗ್ರೂಪ್ ಡಿ ನೌಕರರ ಮೇಲೆ ಸಿಡಿಮಿಡಿಗೊಂಡರು.

 

 

 

 

ಮಕ್ಕಳ ವಿಭಾಗದಲ್ಲಿದ್ದ ತ್ಯಾಜ್ಯ ವಸ್ತುಗಳನ್ನು ತಮ್ಮ ಸಮ್ಮುಖದಲ್ಲೇ ತೆರವು ಮಾಡಲು ಸೂಚಿಸಿದ ಅವರು ತ್ಯಾಜ್ಯ ತೆರವು ಸಂದರ್ಭದಲ್ಲಿ ಗುಂಪು-ಗುಂಪಾಗಿ ಸೊಳ್ಳೆಗಳು, ಇಲಿಗಳು ಹೊರಬಂದಿದ್ದನ್ನು ಕಂಡ ಜಿಲ್ಲಾಧಿಕಾರಿಗಳು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವುದು ಬಿಟ್ಟು ಇಲಿ, ಸೊಳ್ಳೆಯನ್ನು ಸಾಕಿದ್ದೀರಾ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ತಕ್ಷಣ ಧೂಮೀಕರಣಕ್ಕೆ ಕ್ರಮ ಕೈಗೊಂಡು ಸ್ವಚ್ಛಗೊಳಿಸಬೇಕೆಂದು ತಾಕೀತು ಮಾಡಿದರು.
ಆಸ್ಪತ್ರೆ ಸಿಬ್ಬಂದಿಗಳು ಆಸ್ಪತ್ರೆಯನ್ನು ತಮ್ಮ ಮನೆಯಂತೆ ಸ್ವಚ್ಛವಾಗಿಡಬೇಕು ಹಾಗೂ ರೋಗಿಗಳನ್ನು ತಮ್ಮ ಮನೆಯವರಂತೆ ಕಾಣಬೇಕು. ಪ್ರತೀದಿನ ನೆಲ ಒರೆಸಬೇಕು. ಸಿಬ್ಬಂದಿಗಳು ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು. ಸರ್ಕಾರದಿಂದ ಅನುದಾನ ಲಭ್ಯವಿದ್ದರೂ ನಿರ್ವಹಣೆ ಸಮರ್ಪಕವಾಗಿ ಮಾಡುತ್ತಿಲ್ಲ. ಖಾಸಗಿ ಆಸ್ಪತ್ರೆಯನ್ನು ಒಮ್ಮೆ ನೋಡಿ ಬನ್ನಿ. ರೋಗಿಗಳಿಗೆ ಖಾಸಗಿಗಿಂತ ಉತ್ತಮ ವಾತಾವರಣ, ನೈರ್ಮಲ್ಯ, ಚಿಕಿತ್ಸೆ ಸರ್ಕಾರಿ ಆಸ್ಪತ್ರೆಯಲ್ಲಿ ದೊರೆಯುವಂತಾಗಬೇಕೆಂದು ಖಡಕ್ ಸೂಚನೆ ನೀಡಿದರು.

 

 

 

ಅನುಪಯುಕ್ತ ವೈದ್ಯಕೀಯ ಸಲಕರಣೆಗಳನ್ನು ವೈಜ್ಞಾನಿಕವಾಗಿ ಕೂಡಲೇ ವಿಲೇವಾರಿ ಮಾಡಬೇಕು. ಆಸ್ಪತ್ರೆ ಹೊರಾಂಗಣದಲ್ಲಿ ಬೆಳೆದಿರುವ ಹುಲ್ಲು, ಕಳೆಗಿಡಗಳನ್ನು ತೆರವುಗೊಳಿಸಬೇಕು. ಜಿಲ್ಲಾಸ್ಪತ್ರೆಯು ಸೊಳ್ಳೆ, ಇಲಿಗಳ ತಾಣವಾಗದೆ ಗಾಯಾಳು ಹಾಗೂ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ತಾಣವಾಗಿ ಮಾರ್ಪಾಡಾಗಬೇಕೆಂದು ಆಸ್ಪತ್ರೆ ಅಧಿಕಾರಿ-ಸಿಬ್ಬಂದಿಗಳಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಡಾ|| ಸಂತೋಷ್, ಡಿಎಂಓ ಡಾ|| ಚೇತನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *