ನೂತನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ನಿರ್ಮಾಣ : ತಿಂಗಳಾಂತ್ಯಕ್ಕೆ
ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸೂಚನೆ :
ತುಮಕೂರು: ನಗರದಲ್ಲಿ ನಿರ್ಮಾಣವಾಗಿರುವ
ನೂತನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಕಾಮಗಾರಿಯನ್ನು ಮೇ ಮಾಹೆ
ಅಂತ್ಯಕ್ಕೆ ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್
ಕೆ ಎಸ್ ಆರ್ ಟಿ ಸಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಶುಕ್ರವಾರ ಸಂಜೆ ದೇವರಾಜ ಅರಸು ಬಸ್ ನಿಲ್ದಾಣಕ್ಕೆ ಭೇಟಿ ನೀಡಿ
ಪರಿಶೀಲಿಸಿದ ಅವರು, ಕೆ ಎಸ್ ಆರ್ ಟಿ ಸಿ ಸಹಾಯಕ ಕಾರ್ಯನಿರ್ವಾಹಕ
ಇಂಜಿನಿಯರ್ ತ್ರಿವೇಣಿ ಅವರಿಂದ ಕಾಮಗಾರಿ ಪ್ರಗತಿ ಮಾಹಿತಿ ಪಡೆದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು ಹಗಲಿರುಳು
ಕೆಲಸಗಾರರನ್ನು ಪಾಳಿ ಆಧಾರದ ಮೇಲೆ ನಿಯೋಜಿಸಿ ಬಾಕಿ ಇರುವ
ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ನಿರ್ದೇಶನ
ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ ತ್ರಿವೇಣಿ ಲಿಫ್ಟ್
ಕಾರ್ಯಾಚರಣೆ, ಪ್ಲಂಬಿಂಗ್ ಕೆಲಸ, ಮುಂಭಾಗದ ಆವರಣ ಗೋಡೆ,
ಶೌಚಾಲಯ, ವಿದ್ಯುತ್ ಸಂಪರ್ಕ, ಫಾಲ್ ಸೀಲಿಂಗ್, ಸೈನ್ ಬೋರ್ಡ್, ಸಿಸಿಟಿವಿ
ಕ್ಯಾಮೆರಾ, ಅಗ್ನಿಶಾಮಕ ಯಾಂತ್ರಿಕ ಕೆಲಸ, ಹೊರ ಹೋಗುವ
ಹಾಗೂ ಒಳ ಬರುವ ಮಾರ್ಗ ನಿರ್ಮಾಣ, ಲ್ಯಾಂಡ್ ಸ್ಕೇಪಿಂಗ್ ಕೆಲಸ, ಅಂತಿಮ ಪೇಂಟ್,
ಕೋಟ್ , ರ್ಯ್ಯಂಪ್ ಕೆಲಸ, ಸ್ಟ್ರಕ್ಚರಲ್ ಮೆರುಗು ಕೆಲಸ, ಟಿಸಿ
ಪಾಯಿಂಟ್ ಮತ್ತು ಪೋಲೀಸ್ ಚೌಕಿ ನಿರ್ಮಾಣ ಕಾಮಗಾರಿಗಳು ಬಾಕಿ ಇದ್ದು,
ಮೇ 30ರೊಳಗಾಗಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆ ಎಸ್ ಆರ್ ಟಿ ಸಿ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿ
ಸಿಬ್ಬಂದಿಗಳು ಹಾಜರಿದ್ದರು.