ತುಮಕೂರು: ಆರೋಗ್ಯ ಇಲಾಖೆ ವರದಿಯನುಸಾರ ಜಿಲ್ಲೆಯಲ್ಲಿ 2024ರ ಜನವರಿ ಮಾಹೆಯಿಂದ ಈವರೆಗೂ 136 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ನಿಯಮಿತವಾಗಿ ಹೊರಾಂಗಣ ಧೂಮೀಕರಣ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ರವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ
ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ವಿವಿಧ
ಸಭೆಗಳನ್ನು ನಡೆಸಿ ಮಾತನಾಡಿದ ಅವರು,ಮಲೇರಿಯಾ, ಡೆಂಗ್ಯೂ, ಚಿಕುಂಗುನ್ಯಾ,
ಮೆದುಳುಜ್ವರ ಹಾಗೂ ಆನೆಕಾಲು ರೋಗಗಳನ್ನು
ನಿಯಂತ್ರಿಸಲು ಚರಂಡಿ ಸ್ವಚ್ಛತೆ, ನೀರು
ನಿಲ್ಲದಂತೆ ರಸ್ತೆಯಲ್ಲಿರುವ ಗುಂಡಿ ಮತ್ತು
ತಗ್ಗುಗಳನ್ನು ಮುಚ್ಚಿಸುವುದು, ಶಾಲಾ-ಕಾಲೇಜು
ಹಾಗೂ ವಸತಿ ನಿಲಯಗಳಲ್ಲಿ ಮೇಲ್ಛಾವಣಿ
ತೊಟ್ಟಿ/ ನೀರು ಸರಬರಾಜು ಮಾಡುವ
ತೊಟ್ಟಿಗಳನ್ನು ಭದ್ರವಾದ ಮುಚ್ಚಳದಿಂದ
ಮುಚ್ಚಲು ಕ್ರಮಕೈಗೊಳ್ಳಬೇಕೆಂದು ನಗರ
ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಸಂಬಂಧಿಸಿದ
ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೆ,
ಹಂದಿಗಳಿಂದ ಮೆದುಳು ಜ್ವರ ಹರಡುವ
ಸಾಧ್ಯತೆಯಿರುವುದರಿಂದ ಹಂದಿಗಳನ್ನು ಜನರ
ವಾಸಸ್ಥಳದಿಂದ ಕನಿಷ್ಟ 3 ಕಿ.ಮೀ.
ದೂರದಲ್ಲಿರುವಂತೆ ಸೂಕ್ತ ಕ್ರಮವಹಿಸಬೇಕೆಂದು
ನಿರ್ದೇಶಿಸಿದರು.
ಜಿಲ್ಲೆಯಲ್ಲಿ ಜನವರಿಯಿಂದ ಏಪ್ರಿಲ್ವರೆಗೆ 173
ಹಾವು ಕಡಿತ ಪ್ರಕರಣಗಳು ವರದಿಯಾಗಿದ್ದು, ಈ
ಪೈಕಿ ಏಪ್ರಿಲ್ ಮಾಹೆಯಲ್ಲಿ ಶಿರಾ ತಾಲ್ಲೂಕಿನಲ್ಲಿ
ಹಾವು ಕಡಿತದಿಂದ 1 ಸಾವು ಸಂಭವಿಸಿದೆ
ಎಂದು ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ:
ರಾಮೇಗೌಡ ಸಭೆಗೆ ಮಾಹಿತಿ ನೀಡಿದಾಗ ಹಾವು
ಕಡಿತ ಪ್ರಕಣಗಳ ವರದಿಯನ್ನು ಪರಿಶೀಲಿಸಿ
ಮಾತನಾಡಿದ ಜಿಲ್ಲಾಧಿಕಾರಿಗಳು, ಹಾವು
ಕಡಿತಕ್ಕೊಳಗಾದವರು ನಾಟಿ ವೈದ್ಯರಿಂದ ಚಿಕಿತ್ಸೆ
ಪಡೆಯದೆ ಆಸ್ಪತ್ರೆ ವೈದ್ಯರಿಂದ ಕೂಡಲೇ ಚಿಕಿತ್ಸೆ
ಪಡೆಯಬೇಕು. ಹಾವು ಕಡಿತಕ್ಕೆ ಸರ್ಕಾರಿ
ಆಸ್ಪತ್ರೆಗಳಲ್ಲಿ ಲಭ್ಯವಿರುವ ಚಿಕಿತ್ಸೆ,
ಔಷಧೋಪಚಾರದ ಬಗ್ಗೆ ಸಾರ್ವಜನಿಕರಲ್ಲಿ
ಅರಿವು ಮೂಡಿಸಬೇಕೆಂದು ಆರೋಗ್ಯ ಇಲಾಖೆಗೆ
ಸೂಚಿಸಿದರು.
ನಂತರ ಮಾತನಾಡಿದ ಡಾ: ರಾಮೇಗೌಡ
ಅವರು ಜಿಲ್ಲೆಯ ತುಮಕೂರು, ತಿಪಟೂರು ಹಾಗೂ ತುರುವೇಕೆರೆಯನ್ನು ಹೊರತುಪಡಿಸಿ ಉಳಿದ ತಾಲ್ಲೂಕುಗಳಲ್ಲಿ ಒಟ್ಟು 1244 ಕರುಳುಬೇನೆ; ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಮಧುಗಿರಿ ಹೊರತುಪಡಿಸಿ ಉಳಿದ ತಾಲ್ಲೂಕುಗಳಲ್ಲಿ 20 ಕುಷ್ಟರೋಗ; 872 ಕ್ಷಯ; 9589 ನಾಯಿಕಡಿತ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳ 31099 ನೀರಿನ ಮೂಲಗಳ ಮಾದರಿಯನ್ನು ವಿಶ್ಲೇಷಿಸಿದ್ದು, 766 ನೀರಿನ ಮೂಲ ಕುಡಿಯಲು ಯೋಗ್ಯವಿಲ್ಲವೆಂದು ವರದಿಯಿಂದ ತಿಳಿದು ಬಂದಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 2024ರ ಜನವರಿ ಮಾಹೆಯಿಂದ ಈವರೆಗೂ 2392 ಜನರಲ್ಲಿ ಡೆಂಗ್ಯೂ ಇರುವ ಬಗ್ಗೆ ಸಂಶಯಿಸಲಾಗಿದ್ದು, 1200 ಜನರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದೆ. ಈ ಪೈಕಿ 136 ಜನರಲ್ಲಿ ಡೆಂಗ್ಯೂ ಇರುವುದರ ಬಗ್ಗೆ ದೃಢಪಟ್ಟಿದೆ ಎಂದು ತಿಳಿಸಿದರು.
ನಂತರ ಜಿಲ್ಲಾ ತಂಬಾಕು ಕೋಶದ ಪ್ರಗತಿಯನ್ನು ಪರಿಶೀಲಿಸಲಾಯಿತು. ಮೇ 31ರ ವಿಶ್ವ ತಂಬಾಕು ರಹಿತ ದಿನಾಚರಣೆ ಪ್ರಯುಕ್ತ ಕೋಟ್ಪಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿದ ಸಿಬ್ಬಂದಿಗಳನ್ನು ಜಿಲ್ಲಾಧಿಕಾರಿಗಳು ಗೌರವಿಸಿ ಸನ್ಮಾನಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಮಂಜುನಾಥ್, ಮಲೇರಿಯಾ ನಿರ್ಮೂಲನಾಧಿಕಾರಿ ಡಾ: ಚಂದ್ರಶೇಖರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ: ಅಸ್ಗರ್ ಬೇಗ್, ಕ್ಷಯರೋಗ ನಿಯಂತ್ರಣಾಧಿಕಾರಿ ಡಾ: ಸನತ್ ಕುಮಾರ್ ಸೇರಿದಂತೆ ಆರೋಗ್ಯ ಇಲಾಖೆಯ ವಿವಿಧ ಅಧಿಕಾರಿ/ಸಿಬ್ಬಂದಿಗಳು, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.