ತುಮಕೂರು: ನಮ್ಮದು ಪುರುಷ ಪ್ರಧಾನ ಸಮಾಜ ಎಂದು ಮೇಲ್ನೋಟಕ್ಕೆ ಹೇಳಲಾದರೂ ಒಳನೋಟದಲ್ಲಿ ಸ್ತ್ರೀ ಪ್ರಧಾನವೇ. ಕುಟುಂಬವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಸ್ತ್ರೀ ಪಾತ್ರವೇ ಹೆಚ್ಚು. ದಸರಾ ಉತ್ಸವವೂ ಸ್ತ್ರೀ ಶಕ್ತಿ ಮೆರೆಯುವ ಹಬ್ಬ. ಹೀಗಾಗಿ ಶಕ್ತಿ ದೇವತೆಗಳ ಆರಾಧನೆಯೊಂದಿಗೆ ದಸರಾವನ್ನು ದೇಶದಲ್ಲಿ ವಿಶೇಷವಾಗಿ ಆಚರಿಸುತ್ತೇವೆ ಎಂದು ಕೈಗಾರಿಕೋದ್ಯಮಿ, ಟೂಡಾ ಮಾಜಿ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್ ಹೇಳಿದರು.
ನಗರದ ಶ್ರೀರಾಮ ಮಂದಿರದಲ್ಲಿ ನಡೆದಿರುವ ತುಮಕೂರು ದಸರಾ ಸಮಿತಿಯ ಶುಕ್ರವಾರದ ದಸರಾ ಉತ್ಸವದಲ್ಲಿ ಮಲ್ಲಕಂಬಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಮಲ್ಲಕಂಬ ಪ್ರದರ್ಶ ಕೂಡಾ ಶಕ್ತಿಯ ಪ್ರದರ್ಶನವೇ ಆಗಿದೆ. ಸ್ತ್ರೀಯನ್ನು ಶಕ್ತಿಯ ಮೂಲವಾಗಿ ನಾವು ಆರಾಧಿಸುತ್ತೇವೆ. ಲೋಕಲ್ಯಾಣಕ್ಕಾಗಿ ಕೆಟ್ಟದ್ದನ್ನು ದಮನ ಮಾಡಿ ಒಳ್ಳೆಯದನ್ನು ಉಳಿಸಿದ ಶಕ್ತಿ ದೇವತೆಗಳ ಪೂಜೆಯಾಗಿ ದಸರಾ ಉತ್ಸವ ದೇಶದೆಲ್ಲೆಡೆ ವೈಭವದಿಂದ ನಡೆಯುತ್ತಿದೆ ಎಂದರು.
ತುಮಕೂರು ದಸರಾ ಸಮಿತಿ 35 ವರ್ಷಗಳಿಂದ ನಮ್ಮ ಧಾರ್ಮಿಕ, ಸಾಂಸ್ಕøತಿ ಪರಂಪರೆ, ನಾಡಿನ ಹಿರಿಮೆಯ ಹಬ್ಬವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಆಚರಣೆ ನಿರಂತರವಾಗಿ ಮುಂದುವರೆಯಲಿ ಹೊಸತಲೆಮಾರಿನವರು ದಸರಾ ಮಹತ್ವ ತಿಳಿದು ಮುಂದುವರೆಸಲಿ ಎಂದು ಹೆಚ್.ಜಿ.ಚಂದ್ರಶೇಖರ್ ಆಶಿಸಿದರು.
ಉದ್ಯಮಿ ಮಹೇಂದ್ರಕುಮಾರ್, ಮೆರವಣಿಗೆ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಸಮಿತಿ ಉಪಾಧ್ಯಕ್ಷ ಎಂ.ಕೆ.ನಾಗರಾಜ ರಾವ್, ಜಿ.ಕೆ.ಶ್ರೀನಿವಾಸ್, ಖಜಾಂಚಿ ಜಿ.ಎಸ್.ಬಸವರಾಜು, ಸಂಯೋಜಕರಾದ ಕೆ.ಎನ್.ಗೋವಿಂದರಾವ್, ಸಮಿತಿ ಪದಾಧಿಕಾರಿಗಳಾದ ಕೇಶವಮೂರ್ತಿ, ಮಲ್ಲೇಶಪ್ಪ, ಪುಟ್ಟರುದ್ರಯ್ಯ, ಯೋಗಾ ರಾಜನ್, ರಾಧಾ ನಾರಾಯಣ್, ಫರ್ಜಾನಾ ಖಾನಂ, ತೋಂಟದಾರ್ಯ, ಶೋಭಾ ಮೊದಲದವರು ಭಾಗವಹಿಸಿದ್ದರು.
ಗುರುವಾರ ನಡೆದ ಜನಪದ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಪಡೆದ ದಾಬಸ್‍ಪೇಟೆಯ ರವಿಕುಮಾರ್ 10 ಸಾವಿರ ರೂ. ನಗದು, ದ್ವಿತೀಯ ಸ್ಥಾನ ಪಡೆದ ಕೋಮಲಾ 8 ಸಾವಿರ ರೂ ಹಾಗೂ 6 ಸಾವಿರ ರೂ. ಬಹುಮಾನದ ತೃತೀಯ ಸ್ಥಾನವನ್ನು ಕೆ.ಆರ್.ಧನುಷ್, ಎಲ್.ಶಿವಕುಮಾರ್, ಸಿದ್ಧರಾಜು ಹಂಚಿಕೊಂಡಿದ್ದಾರೆ. ವಿಜೇತರಿಗೆ ನಗದು ಬಹುಮಾನದ ಜೊತೆಗೆ ಪಾರಿತೋಷಕ ವಿತರಿಸಲಾಯಿತು.