ದುಂದು ವೆಚ್ಚದ ಮದುವೆಗೆ ಕಡಿವಾಣ ಹಾಕಬೇಕಿದೆ : ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಸಲಹೆ

ಚಾಮರಾಜನಗರ, : ಸರಳ ವಿವಾಹಗಳಿಗೆ ಒತ್ತು ನೀಡುವ ಮೂಲಕ ದುಂದು ವೆಚ್ಚದ ಮದುವೆಗೆ ಕಡಿವಾಣ ಹಾಕಬೇಕಿದೆ ಎಂದು ಮುಜರಾಯಿ, ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಸಲಹೆ ಮಾಡಿದರು.

 

ಮಹದೇಶ್ವರಬೆಟ್ಟದ ಶ್ರೀ ಮಲೈ ಮಹದೇಶ್ವರಸ್ವಾಮಿ ದೇವಸ್ಥಾನದ ರಂಗಮಂದಿರ ಆವರಣದಲ್ಲಿಂದು ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನೂತನ ವಧುವರರಿಗೆ ಮಾಂಗಲ್ಯ, ವಸ್ತ್ರ ವಿತರಣೆ ಮಾಡಿ ಬಳಿಕ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

 

ಸರಳ ವಿವಾಹಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ಮೂಲಕ ಆಡಂಬರ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬಹುದು. ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಬರುತ್ತಾರೆ. ಪ್ರಾಧಿಕಾರ ರಚನೆಯಾದ ಬಳಿಕ ಬೆಟ್ಟದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳಾಗಿವೆ. ಇನ್ನೂ ಸಾಕಷ್ಟು ಅಭಿವೃದ್ದಿಯಾಗಬೇಕಿರುವ ಕಾರ್ಯಗಳಿಗೆ ಹೆಚ್ಚಿನ ಗಮನ ನೀಡಿ ಅಗತ್ಯ ನೆರವು ಸಹಕಾರ ನೀಡಲಾಗುವುದು ಎಂದರು.

 

ರಾಜ್ಯದ ಕೆಲವು ದೇವಾಲಯಗಳಿಗೆ 50 ಲಕ್ಷದಿಂದ 1 ಕೋಟಿವರೆಗೆ ಭಕ್ತರು ಭೇಟಿ ನೀಡುತ್ತಾರೆ. ಇಂತಹ ದೇವಸ್ಥಾನಗಳಲ್ಲಿ ಪ್ರಾಧಿಕಾರ ರಚನೆ ಮಾಡಲಾಗಿದೆ. ಮುಂದಿನ ನಾಲ್ಕೈದು ವರ್ಷಗಳಲ್ಲಿ ಅಭಿವೃದ್ದಿಯಾಗಲಿದ್ದು, ಭಕ್ತರಿಗೆ ಅನುಕೂಲವಾಗಲಿದೆ ಎಂದು ಸಚಿವರಾದ ರಾಮಲಿಂಗಾರೆಡ್ಡಿ ಅವರು ತಿಳಿಸಿದರು.

 

 

ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾ ಸ್ವಾಮೀಜೀ ಅವರು ಮಾತನಾಡಿ ಬೇರೆ ಕಡೆಯಾಗುವ ವಿವಾಹಕ್ಕಿಂತ ಧಾರ್ಮಿಕ ಕ್ಷೇತ್ರಗಳಲ್ಲಾಗುವ ವಿವಾಹಗಳು ವಿಭಿನ್ನವಾಗಿರುತ್ತದೆ. ಧಾರ್ಮಿಕ ಕ್ಷೇತ್ರಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವುದರಿಂದ ಭಕ್ತಿ ಭಾವನೆ ಬರಲಿದೆ ಎಂದರು.

 

 

ದಂಪತಿಗಳು ದ್ವೇಷ, ಅಸೂಯೆ ಬಿಟ್ಟು ಬದುಕಬೇಕು. ಇದರಿಂದ ಸಮಾಜಕ್ಕೂ ಒಳಿತಾಗುತ್ತದೆ. ಪರಸ್ಪರ ಅರ್ಥಮಾಡಿಕೊಂಡು ಜೀವನ ನಡೆಸಿದರೆ ಕುಟುಂಬದಲ್ಲಿ ಬಾಂಧವ್ಯ ಇರಲಿದೆ ಎಂದು ಸುತ್ತೂರು ಶ್ರೀಗಳು ತಿಳಿಸಿದರು.

ದಿವ್ಯ ಸಮ್ಮುಖ ವಹಿಸಿ ಮಾತನಾಡಿದ ಸಾಲೂರು ಬೃಹನ್ಮಠಾಧ್ಯಕ್ಷರಾದ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ದೇವಸ್ಥಾನಗಳು ಸನಾತನ ಸಂಸ್ಕøತಿಯ ಪ್ರತೀಕವಾಗಿದೆ. ಮಲೆಮಹದೇಶ್ವರಸ್ವಾಮಿ ಕ್ಷೇತ್ರಕ್ಕೆ ರಾಜ್ಯವÀಲ್ಲದೆ ನೆರೆಯ ತಮಿಳುನಾಡಿನಿಂದಲೂ ಸಾಕಷ್ಟು ಭಕ್ತರು ಬರುತ್ತಿದ್ದು, ತನ್ನದೇ ಆದ ಮಹತ್ವ ಪಡೆದುಕೊಂಡಿದೆ. ಕ್ಷೇತ್ರದಲ್ಲಿ ಸಾಮೂಹಿಕ ವಿವಾಹವನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.

 

 

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಎಂ.ಆರ್. ಮಂಜುನಾಥ್ ಅವರು ಸರಳವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಮದುವೆಯಾಗುವುದರಿಂದ ಕುಟುಂಬಗಳಿಗೆ ಆರ್ಥಿಕ ಹೊರೆ ತಪ್ಪಲಿದೆ. ಹನೂರು ಕ್ಷೇತ್ರವು ಭೌಗೋಳಿಕವಾಗಿ ವಿಸ್ತಾರವಾಗಿದೆ. ಮುಜರಾಯಿ ಇಲಾಖೆಯಿಂದ ಶ್ರೀ ಕ್ಷೇತ್ರಕ್ಕೆ ಹೆಚ್ಚಿನ ಅನುದಾನದ ನೆರವು ಅಗತ್ಯವಿದೆ ಎಂದರು.

 

 

 

ಮಲೆಮಹದೇಶ್ವರಬೆಟ್ಟಕ್ಕೆ ಕೆ.ಎಸ್.ಆರ್.ಟಿ.ಸಿ ವತಿಯಿಂದ ಸಾಕಷ್ಟು ಬಸ್ಸುಗಳನ್ನು ಬಿಡಲಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆ ಬಸ್ಸುಗಳನ್ನು ನಿಯೋಜಿಸಬೇಕು. ಹನೂರು ಕ್ಷೇತ್ರದಲ್ಲಿ ಕೂಲಿ ಕಾರ್ಮಿಕರು, ಕೃಷಿಕರು, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಇನ್ನೂ ಹೆಚ್ಚು ಬಸ್ಸುಗಳು ಕಾರ್ಯಾಚರಣೆ ಮಾಡಬೇಕಿದೆ ಎಂದು ಶಾಸಕರಾದ ಮಂಜುನಾಥ್ ಅವರು ತಿಳಿಸಿದರು.

 

 

 

ಪ್ರಾಸ್ತವಿಕ ನುಡಿಗಳನ್ನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮಲೆಮಹದೇಶ್ವರಬೆಟ್ಟದಲ್ಲಿ 1989 ರಿಂದ ಸಾಮೂಹಿಕ ಸರಳ ವಿವಾಹ ಮಹೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ. ಇದುವರೆಗೆ 1867 ಜೋಡಿಗಳು ಶ್ರೀ ಕ್ಷೇತ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿವೆ. ಇಂದು 64 ಜೋಡಿಗಳು ನವ ಜೀವನಕ್ಕೆ ಪಾದಾರ್ಪಣೆ ಮಾಡಿವೆ. ಈ ಪುಣ್ಯ ಕ್ಷೇತ್ರದಲ್ಲಿ ವಿವಾಹವಾದವರಿಗೆ ಮಲೆಮಹದೇಶ್ವರನ ಆಶೀರ್ವಾದ ಲಭಿಸಲಿ. ಶಾಂತಿ ಸಮೃದ್ದಿ, ಸುಖ ಜೀವನ ನಡೆಸುವಂತಾಗಲಿ ಎಂದು ಹಾರೈಸಿದರು.

 

 

ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಚಾಮರಾಜನಗರ ಜಿಲ್ಲಾ ಹಾಲು ಉತ್ಪಾದಕರ ಸಹಾಕಾರ ಸಂಘದ ಅಧ್ಯಕ್ಷರಾದ ವೈ.ಸಿ. ನಾಗೇಂದ್ರ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ಮಹದೇಶ್ವರಬೆಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅರ್ಚನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಶ್ರೀ ಮಲೈಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು, ಉಪಕಾರ್ಯದರ್ಶಿ ಚಂದ್ರಶೇಖರ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *