ಅರ್ಹರಿಗೆ ಸಾಲ ನೀಡದ ಬ್ಯಾಂಕುಗಳ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಿಸಲು ಕ್ರಮ- ಸಿಇಓ ಎಚ್ಚರಿಕೆ

ತುಮಕೂರು : ಡಾ|| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಾಗೂ ಆದಿ ಜಾಂಬವ ಅಭಿವೃದ್ಧಿ ನಿಗಮಗಳಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅರ್ಹ ಫಲಾನುಭವಿಗಳಿಗೆ ಸಾಲ ನೀಡದೆ ಅರ್ಜಿಯನ್ನು ವಿಲೇವಾರಿ ಮಾಡದೆ 3 ತಿಂಗಳಿಗಿಂತ ಹೆಚ್ಚಿನ ಸಮಯ ಬಾಕಿ ಉಳಿಸಿಕೊಂಡಿರುವ ಬ್ಯಾಂಕುಗಳ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿ (ಅಟ್ರಾಸಿಟಿ) ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಅವರು ವಿವಿಧ ಬ್ಯಾಂಕಿನ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

 

 

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ವಾರ್ಷಿಕ ಸಾಲ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಪರಿಶೀಲನಾ ಸಭೆ ಹಾಗೂ ಜಿಲ್ಲಾ ಸಮಾಲೋಚನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸರ್ಕಾರದ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಜಿಲ್ಲೆಯ ರೈತರು, ಬಡವರು, ನಿರ್ಗತಿಕರು, ಮಹಿಳೆಯರು ಸಲ್ಲಿಸುವ ಅರ್ಜಿಯನ್ನು ಸಕಾರಣವಿಲ್ಲದೆ ಬಾಕಿ ಉಳಿಸಿಕೊಂಡು ಸಾಲ ನೀಡದೆ ವಿಫಲವಾದ ಬ್ಯಾಂಕುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದಲ್ಲದೆ ಸದರಿ ಬ್ಯಾಂಕಿನ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಸಂಬಂಧಿಸಿದ ಶಿಸ್ತು ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ನಿರ್ದೇಶನ ನೀಡಿದರು.

 

ಕಳೆದ ಜನವರಿಯಲ್ಲಿ ಜರುಗಿದ ಸಭೆಯಲ್ಲಿ ಕಡ್ಡಾಯವಾಗಿ ಬ್ಯಾಂಕಿನ ಮುಖ್ಯಸ್ಥರೇ ಸಭೆಗೆ ಹಾಜರಾಗಬೇಕು. ಅವರ ಪ್ರತಿನಿಧಿ ಅಥವಾ ಅಧೀನ ಸಿಬ್ಬಂದಿಯನ್ನು ನಿಯೋಜಿಸಬಾರದೆಂದು ಸೂಚನೆ ನೀಡಿದ್ದರೂ ಸಹ ಈ ಸಭೆಗೆ ಕೆಲ ಬ್ಯಾಂಕುಗಳಿಂದ ಅಧೀನ ಸಿಬ್ಬಂದಿಗಳನ್ನೇ ಕಳುಹಿಸಲಾಗಿದೆ.

ಜಿಲ್ಲೆಯಲ್ಲಿರುವ 39 ಬ್ಯಾಂಕುಗಳ ಪೈಕಿ ಕೇವಲ 10 ಬ್ಯಾಂಕಿನ ಮುಖ್ಯಸ್ಥರು ಮಾತ್ರ ಸಭೆಗೆ ಹಾಜರಾಗಿದ್ದಾರೆ. ಕೆಲ ಬ್ಯಾಂಕುಗಳ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿದ್ದಾರೆ. ಸಾರ್ವಜನಿಕರಿಗೆ ಸೇವೆ ಒದಗಿಸುವಲ್ಲಿ ಇಚ್ಛಾಶಕ್ತಿಯಿಲ್ಲದ ಬ್ಯಾಂಕಿನ ಅಧಿಕಾರಿಗಳಿಂದ ಸರ್ಕಾರಿ ಯೋಜನೆಗಳ ಅನುಷ್ಟಾನದಲ್ಲಿ ಹಿನ್ನಡೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

 

ಬ್ಯಾಂಕುಗಳಲ್ಲಿ ಅರ್ಹತೆ ಇರುವ ಫಲಾನುಭವಿಗಳಿಗೂ ಸಾಲ ನೀಡದೆ ಅರ್ಜಿಯನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಸಾಲ ಯೋಜನೆಗಳ ಪ್ರಗತಿ ಕುಂಠಿತಗೊಳ್ಳಲು ಬ್ಯಾಂಕುಗಳ ಉದಾಸೀನತೆಯೇ ಕಾರಣ. ಸರ್ಕಾರದ ಸಾಲ ಸೌಲಭ್ಯಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಬ್ಯಾಂಕುಗಳು ಪ್ರಮುಖ ಪಾತ್ರ ವಹಿಸುವುದರಿಂದ ಬೇಜವಾಬ್ದಾರಿ ವರ್ತನೆಯನ್ನು ಬದಲಾಯಿಸಿಕೊಂಡು ಬದ್ಧತೆಯನ್ನು ಕಾಪಾಡಿಕೊಳ್ಳಬೇಕೆಂದು ಬ್ಯಾಂಕುಗಳಿಗೆ ಸಲಹೆ ನೀಡಿದರು.

 

 

 

ಹಿಂದುಳಿದ ರೈತರಿಗೆ ಸಕಾಲದಲ್ಲಿ ಸಾಲ ನೀಡಿದಾಗ ಮಾತ್ರ ಕೃಷಿ ಚಟುವಟಿಕೆಗಳಿಗೆ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಲು ಸಾಧ್ಯ. ಸಕಾಲದಲ್ಲಿ ಬ್ಯಾಂಕಿನಿಂದ ಸಾಲ ದೊರೆಯದಿದ್ದಾಗ ಹೆಚ್ಚಿನ ಬಡ್ಡಿದರದಲ್ಲಿ ಖಾಸಗಿಯವರಿಂದ ಸಾಲ ಪಡೆದು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಬ್ಯಾಂಕುಗಳು ಸಾಲ ನೀಡುವಾಗ ಕೃಷಿ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರಲ್ಲದೆ, ಸರ್ಕಾರದ ವಿವಿಧ ಸಾಲ ಯೋಜನೆಯಡಿ ಸ್ವೀಕರಿಸಿದ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳದೆ ಆಗಸ್ಟ್ ಮಾಹೆಯೊಳಗಾಗಿ ವಿಲೇವಾರಿ ಮಾಡಬೇಕು. ತಿರಸ್ಕೃತ ಅರ್ಜಿಯನ್ನು ಮರು ಪರಿಶೀಲಿಸಬೇಕೆಂದು ತಿಳಿಸಿದರು.

 

 

ನಂತರ ಸಾಲ ಯೋಜನೆಗಳನ್ನು ಅನುಷ್ಟಾನಗೊಳಿಸುವ ಕೃಷಿ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಹಾಗೂ ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿಜಾಂಬವ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳಿಂದ ಸಾಲ ವಿತರಣೆಯಾದ ಬಗ್ಗೆ ಪರಿಶೀಲಿಸಲಾಯಿತು.

 

 

 

ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಕಾಶ್ ಮಾತನಾಡಿ, 2023-24ರ ಆರ್ಥಿಕ ವರ್ಷದಲ್ಲಿ ಸರ್ಕಾರದ ಸಾಲ ಯೋಜನೆಗಳಡಿ ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ವಿವಿಧ ಬ್ಯಾಂಕುಗಳಿಂದ ಒಟ್ಟು 11,715 ಕೋಟಿ ರೂ.ಗಳ ಸಾಲ ನೀಡುವ ಗುರಿ ಹೊಂದಲಾಗಿದ್ದು, ಮಾರ್ಚ್-2024ರ ಅಂತ್ಯಕ್ಕೆ 15,457 ಕೋಟಿ ರೂ. ಗಳ ಸಾಲ ವಿತರಣೆ ಮಾಡುವ ಮೂಲಕ ಗುರಿ ಮೀರಿ ಅಂದರೆ ಶೇ. 132ರಷ್ಟು ಪ್ರಗತಿ ಸಾಧಿಸಲಾಗಿದೆ. ಇದರಲ್ಲಿ ಆದ್ಯತಾವಲಯಕ್ಕೆ ನಿಗಧಿಪಡಿಸಲಾಗಿದ್ದ 8,776 ಕೋಟಿ ರೂ.ಗಳ ಗುರಿಯನ್ನು ಮೀರಿ ಒಟ್ಟು 11,537 ಕೋಟಿ ರೂ.ಗಳ ಸಾಲ ವಿತರಣೆ ಮಾಡಲಾಗಿದೆ. ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ವಲಯಕ್ಕೆ ಒಟ್ಟು 8,302 ಕೋಟಿ ರೂ.ಗಳ ಸಾಲ ನೀಡಿದ್ದು ಇದರಿಂದ ಕೃಷಿವಲಯಕ್ಕೆ ನಿಗಧಿಪಡಿಸಿದ ಗುರಿಗೆ ಶೇ.121ರಷ್ಟು ಪ್ರಗತಿ ಸಾಧಿಸಿದಂತಾಗಿದೆ.
ಪ್ರಸಕ್ತ 2024-25ನೇ ಆರ್ಥಿಕ ವರ್ಷದ ಸಾಲ ಯೋಜನೆಯನ್ವಯ ಒಟ್ಟಾರೆ ಸಾಲದ ಗುರಿಯನ್ನು 14,139 ಕೋಟಿ ರೂ.ಗಳಿಗೆ ನಿಗಧಿಪಡಿಸಲಾಗಿದ್ದು, ಕಳೆದ ವರ್ಷಕ್ಕಿಂತ ಸುಮಾರು 2,424 ಕೋಟಿ ರೂ.ಗಳಷ್ಟು ಅಂದರೆ ಶೇ. 21ರಷ್ಟು ಅಧಿಕವಾಗಿದೆ. ಇದರಲ್ಲಿ ಆದ್ಯತಾವಲಯಕ್ಕೆ 10,506 ಕೋಟಿ ರೂ.ಗಳಷ್ಟು ನಿಗಧಿಪಡಿಸಲಾಗಿದ್ದು, ಇದು ಒಟ್ಟಾರೆ ಸಾಲದ ಶೇ.74ರಷ್ಟಿರುತ್ತದೆ. ಆದ್ಯತಾವಲದಲ್ಲಿಯೇ ಕೃಷಿಗೆ 7,735 ಕೋಟಿ ರೂ.(ಶೇ.74), ಸಣ್ಣ ಮತ್ತು ಮಧ್ಯಮ ಕೈಗಾರಿಕೆಗೆ 2,358 ಕೋಟಿ ರೂ.(ಶೇ.22)ಗಳ ಗುರಿಯನ್ನು ನಿಗಧಿಪಡಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

 

 

 

ಈ ಸಂದರ್ಭದಲ್ಲಿ 2024-25ನೇ ಆರ್ಥಿಕ ವರ್ಷದ ಜಿಲ್ಲಾ ಸಾಲ ಯೋಜನೆಯನ್ನು ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ಎಜಿಎಂ ಅರುಣ್, ನಬಾರ್ಡ್‍ನ ಕೀರ್ತಿಪ್ರಭ, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜೇರಿ, ವಿವಿಧ ಬ್ಯಾಂಕು, ಇಲಾಖೆ ಹಾಗೂ ನಿಗಮಗಳ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *