ಬಿಜೆಪಿ ನಾಯಕರ ಹೋರಾಟ ತಡೆದ ಸರ್ಕಾರದ ಕ್ರಮಕ್ಕೆ ಖಂಡನೆ

ರಸ್ತೆ ತಡೆದು ಧರಣಿ ನಡೆಸಿ ಬಿಜೆಪಿ ಮುಖಂಡರ ಆಕ್ರೋಶ

ತುಮಕೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ತೆರಳುತ್ತಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಶಾಸಕರು, ಮುಖಂಡರನ್ನು ಪೊಲಿಸರು ಮಾರ್ಗ ಮಧ್ಯೆ ತಡೆದು ಅವರನ್ನು ವಶಕ್ಕೆ ಪಡೆದ ಕ್ರಮ ಖಂಡಿಸಿ ಶುಕ್ರವಾರ ನಗರದಲ್ಲಿ ಜಿಲ್ಲಾ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು.

 

 

ಬಿಜೆಪಿಯ ಪ್ರತಿಭಟನೆ ಹತ್ತಿಕ್ಕುವ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್‍ಗೌಡರ ನೇತೃತ್ವದಲ್ಲಿ ಬಿಜೆಪಿ ಮುಖಂಡರು ರಸ್ತೆ ತಡೆದು ಪ್ರತಿಭಟನೆ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಆಗ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಸ್ಥಳದಿಂದ ಕರೆದೊಯ್ದರು.

 

 

 

 

ಇದಕ್ಕೂ ಮೊದಲು ಪ್ರತಿಭಟನೆಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ರೈತ ಮೋರ್ಚಾ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿಯ ಹೋರಾಟಗಳು ಭಯ ತಂದಿವೆ. ಹೀಗಾಗಿ ಯಾವುದೇ ಹೋರಾಟಟ ಮಾಡಲು ಅವಕಾಶ ನೀಡದೆ ಪೊಲೀಸರನ್ನು ಬಳಸಿಕೊಂಡು ಹತ್ತಿಕ್ಕುವ ಪ್ರಯತ್ನ ಮಾಡಿ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

 

 

 

ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್‍ನವರು ಬಳ್ಳಾರಿ ಪಾದಯತ್ರೆ, ಮೇಕೆ ದಾಟು ಪಾದಯಾತ್ರೆ ಮಾಡುವಾಗಿ ಸರ್ಕಾರವೇ ಪೊಲೀಸ್ ರಕ್ಷಣೆ ಒದಗಿಸಿ ಹೋರಾಟಕ್ಕೆ ಅವಕಾಶ ನೀಡಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಹೋರಾಟದ ಹಕ್ಕನ್ನು ಕಸಿಯುವ ಪ್ರಯತ್ನ ಮಾಡುತ್ತಿದೆ ಎಂದು ಟೀಕಿಸಿದರು.

 

 

 

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅದಿಕಾರಕ್ಕೆ ಬಂದಾಗಿನಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ಜನಪರ ಯೋಜನೆಗಳನ್ನು ಜಾರಿ ಮಾಡಿಲ್ಲ, ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಹಲವು ಯೋಜನೆಗಳನ್ನೂ ನಿಲ್ಲಿಸಿದೆ. ಯಾವುದೇ ಅಭಿವೃದ್ಧಿ ಮಾಡದೆ ಜನರ ತೆರಿಗೆ ಹಣವನ್ನು ಲೂಟಿ ಮಾಡುತ್ತಿರುವುದೇ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ ಎಂದರು.
ಅಗತ್ಯ ವಸ್ತುಗಳ ಪದಾರ್ಥಗಳ ಬೆಲೆ ಏರಿಕೆ ಮಾಡಿ ಬಡವರಿಗೆ ಮತ್ತಷ್ಟು ಹೊರೆ ಮಾಡುತ್ತಿರುವುದೇ ಈ ಸಕಾರದ ಕೊಡುಗೆ. ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲ, ವಾಲ್ಮೀಕಿ ಅಭಿವೃದ್ಧಿ ನಿಗಮ, ಮುಡಾದಲ್ಲಿ ಅಕ್ರಮಗಳನ್ನು ಮಾಡುತ್ತಾ ಜನರ ತೆರಿಗೆ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಶಿವಪ್ರಸಾದ್ ಟೀಕಿಸಿದರು.

 

 

 

ನಂತರ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕುಗುತ್ತಾ ದಿಢೀರ್ ರಸ್ತೆ ತಡೆ ನಡೆಸಿ ಆಗ ಪೊಲೀಸರು ಹೋರಾಟಗಾರರನ್ನು ವಶಕ್ಕೆ ಪಡೆದು ಕರೆದೊಯ್ದರು.

 

 

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂದೀಪ್‍ಗೌಡ, ನಗರ ಅಧ್ಯಕ್ಷ ಟಿ.ಹೆಚ್.ಹನುಂತರಾಜು, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನವಚೇತನ್, ಟೂಡಾ ಮಾಜಿ ಅಧ್ಯಕ್ಷ ಬಿ.ಎಸ್.ನಾಗೇಶ್, ನಗರಪಾಲಿಕೆ ಮಾಜಿ ಸದಸ್ಯ ಸಿ.ಎಸ್.ರಮೇಶ್, ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ವೇದಮೂರ್ತಿ, ಮುಖಂಡರಾದ ಸಾಗರನಹಳ್ಳಿ ವಿಜಯಕುಮಾರ್, ಮನೋಹರಗೌಡ, ಬನಶಂಕರಿ ಬಾಬು, ಎನ್.ರಾಜಣ್ಣ, ನಾಗರಾಜ್, ಗಣೇಶ್‍ಪ್ರಸಾದ್, ಹನುಮಂತರಾಯಪ್ಪ, ಹನುಮಂತರಾಜು, ಅಣೆತೊಟ ಶ್ರೀನಿವಾಸ್, ಅಂಜನಮೂರ್ತಿ, ಪ್ರೇಮಾ ಹೆಗಡೆ, ಚೆಂಗಾವಿ ರವಿ, ಪುರುಷೋತ್ತಮ್ ಮೊದಲಾದವರು ಭಾಗವಹಿಸಿದ್ದರು.ಸತ್ಯಮಂಗಲ ಜಗದೀಶ್,ಪುಟಟ್ಟರಾಜು, ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *