ತುಮಕೂರು : ಬಸವ ಜಯಂತಿ ಪ್ರಯುಕ್ತ ಇಂದು ಮಹಾನಗರ ಪಾಲಿಕೆಯ ಆವರಣದಲ್ಲಿ ಅಖಿಲ ಭಾರತ ಡಾ. ಬಿ.ಆರ್.ಅಂಬೇಡ್ಕರ್ ಪ್ರಚಾರ ಸಮಿತಿ ತುಮಕೂರು ಶಾಖೆ, ದಲಿತಪರ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳ ಒಕ್ಕೂಟ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಪುಷ್ಪನಮನ ಸಲ್ಲಿಸಿ ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಲಾಯಿತು.
ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿ ಕುಮಾರ್ ಮಾತನಾಡುತ್ತಾ ೧೨ನೇ ಶತಮಾನದ ಮಹಾನಾಯಕ, ವಿಶ್ವ ಗುರು, ಕ್ರಾಂತಿಕಾರಕ, ಹಲವಾರು ಸಮುದಾಯಗಳಿಗೆ ಕಾಯಕಲ್ಪ ನೀಡಿದ ವಿಶ್ವ ಚೇತನ ಬಸವಣ್ಣನವರ ಜಯಂತಿಯ ಆಚರಿಸುತ್ತಿರುವುದು ಮಹದಾನಂದವಾಗಿದೆ, ಜೊತೆಗೆ ಪ್ರಸ್ತುತ ಪೀಳಿಗೆಯ ಪ್ರತಿಯೊಬ್ಬ ನಾಗರೀಕರು ಬಸವಣ್ಣನವರ ಭಾವಚಿತ್ರವನ್ನು ತಮ್ಮ ಮನೆಗಳಲ್ಲಿ ಇಟ್ಟು ಪೂಜೆ ಮಾಡಬೇಕು, ಏಕೆಂದರೆ ಭಾರತದಲ್ಲಿ ಕಳೆದ ಹಲವಾರು ಶತಮಾನಗಳಿಂದ ಹಲವಾರು ಕ್ರಾಂತಿಕಾರಕ ಬೆಳವಣಿಗೆಗಳು ಆಗಿದ್ದು, ಅದರಲ್ಲಿಯೂ ೧೨ನೇ ಶತಮಾನದಲ್ಲಿ ಆದ ಬದಲಾವಣೆ ಮಹಾ ಕ್ರಾಂತಿಕಾರಿ ಬೆಳವಣಿಗೆ ಎಂದರೆ ತಪ್ಪಾಗಲಾರದು, ಅಳಿವಿನಂಚಿನಲ್ಲಿದ್ದ ಎಷ್ಟೋ ಸಮುದಾಯಗಳನ್ನು ಮುನ್ನೆಲೆಗೆ ತಂದು ಅವುಗಳಿಗೆ ಕಾಯಕಲ್ಪ ನೀಡಿದ್ದು ಇದೇ ಬಸವಣ್ಣನವರು ಎಂದು ಹೇಳಿದರು.
ಮುಂದುವರೆದು ಮಾತನಾಡುತ್ತಾ ಬಸವಣ್ಣನವರು ಸರ್ವಕಾಲಿಕ ಗುರುಗಳಾಗಿದ್ದು, ಅವರ ವಚನಗಳು ಅಜರಾಮರ ಏಕೆಂದರೆ ಅವರ ವಚನಗಳಲ್ಲಿರುವ ಸತ್ವ ನಮ್ಮ ಪ್ರಸ್ತುತ ಬದುಕಿನಲ್ಲಿ ಆಗುತ್ತಿರುವ ಆಗು-ಹೋಗುಗಳ ಕುರಿತದ್ದಾಗಿದೆ, ಅವುಗಳನ್ನು ಅರಿತು ನಡೆದರೇ ಒಳ್ಳೆಯ ಮಾನವನಾಗಿ ರೂಪುಗೊಳ್ಳುತ್ತಾನೆ ಪ್ರಸ್ತುತ ಜಗತ್ತಿನ ಆಗು-ಹೋಗುಗಳನ್ನೇ ಬಸವಣ್ಣನವರು ೧೨ನೇ ಶತಮಾನದಲ್ಲಿಯೇ ವಿವರಿಸಿದ್ದಾರೆ ಎಂದರೆ ಅವರು ಎಂತಹ ಮಹಾಜ್ಞಾನಿಗಳಾಗಿರಬೇಕು ಎಂದು ಒಮ್ಮೆ ಯೋಚಿಸಿ ಎಂದು ತಿಳಿಸಿದರು, ಇಂತಹ ಮಹಾನ್ ನಾಯಕನ ಜನ್ಮದಿನವನ್ನು ಈಗಿನ ಸರ್ಕಾರ ಸಾಂಸ್ಕೃತಿಕ ದಿನವನ್ನಾಗಿ ಆಚರಿಸುತ್ತಿರುವುದು ಶ್ಲಾಘನೀಯ ಜೊತೆಗೆ ಇವರ ನೆನಪಿನಲ್ಲಿ ನಾವು ಈ ಮಹತ್ತರವಾದ ಕಾರ್ಯ ನಡೆಸುತ್ತಿರುವುದು ನಮಗೆ ಹರ್ಷದಾಯಕವಾಗಿದೆ ಎಂದು ತಿಳಿಸಿದರು.
ಅಖಿಲ ಭಾರತ ಅಂಬೇಡ್ಕರ್ ಪ್ರಚಾರ ಸಮಿತಿಯ ಉಪಾಧ್ಯಕ್ಷರು ನಂತರ ಮಾತನಾಡಿ ಬಸವ ಜಯಂತಿಯನ್ನು ಈಡೀ ವಿಶ್ವದಲ್ಲಿಯೇ ಆಚರಿಸಲಾಗುತ್ತಿದೆ, ಅದೇ ರೀತಿ ನಾವು ಸಹ ವಿವಿಧ ಸಂಘ ಸಂಸ್ಥೆಗಳ ಜೊತೆಗೂಡಿ ಇಂದು ಇಲ್ಲಿ ಆಚರಿಸುತ್ತಿರುವುದು ನಮ್ಮ ಸುದೈವ ಎಂದರು, ಏಕೆಂದರೆ ೧೨ನೇ ಶತಮಾನದಲ್ಲಿಯೇ ಬಸವಣ್ಣನವರು ಸಣ್ಣ-ಪುಟ್ಟ ಸಮುದಾಯಗಳನ್ನು ಗುರುತಿಸಿ ಅವರುಗಳನ್ನು ಸಮಾಜಮುಖಿಗಳನ್ನಾಗಿ ಮಾಡಿ, ಸಮಾಜದಲ್ಲಿ ನಾವೂ ಸಹ ಒಬ್ಬರು ಎಂದು ತೋರಿಸಿಕೊಟ್ಟಂತಹ ಮಹಾನ್ ಧೀಮಂತ ನಾಯಕ ಅವರ ಜಯಂತ್ಯೋತ್ಸವವನ್ನು ನಾವು ಇಂದು ರಾಜ್ಯವು ಬರಗಾಲದಿಂದ ಬಳಲುತ್ತಿರುವ ಕಾರಣ ಅತ್ಯಂತ ಸರಳವಾಗಿ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷರು ಎನ್.ಕೆ.ನಿಧಿಕುಮಾರ್, ಜಿಲ್ಲಾ ಉಪಾಧ್ಯಕ್ಷರು ಇಂದ್ರಕುಮಾರ್, ಕಾರ್ಮಿಕರ ಘಟಕದ ಜಿಲ್ಲಾಧ್ಯಕ್ಷರು ಎಸ್.ನಾರಾಯಣ್, ಒಬಿಸಿ ಘಟಕದ ಜಿಲ್ಲಾಧ್ಯಕ್ಷರು ಎಸ್.ರಾಮಚಂದ್ರರಾವ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರು ಶಬ್ಬೀರ್ ಅಹಮ್ಮದ್, ಅಲ್ಪ ಸಂಖ್ಯಾತರ ಘಟಕದ ನಗರಾಧ್ಯಕ್ಷರು ರಫೀಕ್ ಅಹಮ್ಮದ್, ಗೂಳೂರು ರಾಜಣ್ಣ, ಟೈಲರ್ ಜಗದೀಶ್, ಕ.ರ.ವೇ. ಆನಂದ್, ಕನ್ನಡ ಪ್ರಕಾಶ್, ಮೋಹನ್ ಕುಮಾರ್, ದರ್ಶನ್, ಎ.ರಂಜನ್, ಲಕ್ಷ್ಮಣ್ ಸೇರಿದಂತೆ ಇನ್ನಿತರೆ ಮುಖಂಡರು ಉಪಸ್ಥಿತರಿದ್ದರು.