
ತುಮಕೂರು :- ಜಿಲ್ಲೆಯ ಲಂಬಾಣಿ (ಬಂಜಾರ) ಸಮುದಾಯ ಭವನದ ಕನಸು ಅನೇಕ ವರ್ಷಗಳ ಹೋರಾಟದ ಫಲವಾಗಿ, ತುಮಕೂರು ನಗರದ ಸರಸ್ವತಿಪುರಂನಲ್ಲಿ ಬೃಹತ್ ಮತ್ತು ಭವ್ಯವಾದ ಜಿಲ್ಲಾ ಬಂಜಾರ ಭವನ ನಿರ್ಮಾಣಗೊಳ್ಳುವುದರೊಂದಿಗೆ ಸಕಾರಗೊಂಡಿದೆ. ಸುಸಜ್ಜಿತ ಸಮುದಾಯ ಭವನ ಉದ್ಘಾಟನೆಗೆ ಸಿದ್ಧಗೊಂಡಿದೆ. ಜಿಲ್ಲೆಯಲ್ಲಿ ತನ್ನದೆಯಾದ ಆದ ವೈಶಿಷ್ಟತೆ ಹೊಂದಿರುವ ಲಂಬಾಣಿ ಸಮುದಾಯದ ಬುಡಕಟ್ಟು ಸಂಸ್ಕøತಿ, ಕಲೆ, ಪರಂಪರೆ ಮತ್ತು ಐತಿಹಾಸಿಕ ಹೆಗ್ಗಳಿಕೆಯನ್ನು ಉಳಿಸಿ ಬೆಳೆಸಲು ಭವನವು ಭದ್ರ ನೆಲೆಯಾಗಲಿದೆ.
ಭಾರತದ ಶ್ರೀಮಂತ ಸಂಸ್ಕೃತಿಯಲ್ಲಿ ಬಂಜಾರ ಸಮುದಾಯವು ವಿಶಿಷ್ಟ ಸ್ಥಾನಪಡೆದುಕೊಂಡಿದೆ. ಸಮುದಾಯದ ಉಡುಗೆ–ತೊಡುಗೆ, ಹಾಡು–ನೃತ್ಯ, ಕಸೂತಿ ಕಲೆ ಹಾಗೂ ಸಂಗೀತ ಎಲ್ಲವೂ ಅನನ್ಯತೆ ಹೊಂದಿವೆ. ಪರಂಪರೆಯ ಮೌಲ್ಯಗಳನ್ನು ಕಾಪಾಡಿಕೊಂಡು ಬದುಕುತ್ತಿರುವ ಈ ಜನಾಂಗ, ಸಾಮಾಜಿಕ ಮತ್ತು ಆರ್ಥಿಕ ಹಿನ್ನಡೆಯ ನಡುವೆಯೂ ತನ್ನ ಗುರುತನ್ನು ಉಳಿಸಿಕೊಂಡಿದೆ. ಜಿಲ್ಲೆಯ ತಾಂಡಗಳಲ್ಲಿ ವಾಸವಾಗಿರುವ ಬಹುತೇಕ ಜನರು ರಾಜಕೀಯ ಮತ್ತು ಶೈಕ್ಷಣಿಕವಾಗಿಯೂ ಹಿಂದುಳಿದ ಸ್ಥಿತಿಯಲ್ಲಿ ಇದ್ದರೂ ಇತ್ತೀಚಿನ ದಿನಗಳಲ್ಲಿ ಸಂಘಟನೆ ಮೂಲಕ ಜಾಗೃತರಾಗುತ್ತಿದ್ದಾರೆ.
ಸ್ವಾತಂತ್ರ್ಯ ನಂತರ 75 ವರ್ಷಗಳಾದರೂ ಜಿಲ್ಲಾ ಮಟ್ಟದಲ್ಲಿ ಸಮುದಾಯಕ್ಕೆ ಭವನ ಸ್ಥಾಪಿಸಲು ಸಾಧ್ಯವಾಗಿರಲಿಲ್ಲ. 2012–13ರಲ್ಲಿ ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘದ ಮಾರ್ಗದರ್ಶನದಲ್ಲಿ ಜಿಲ್ಲಾ ಸಂಘವನ್ನು ಸ್ಥಾಪಿಸಲಾಗಿತ್ತು. ಅದರ ಪ್ರಯತ್ನದಿಂದ ಸಿಎ ನಿವೇಶನ ದೊರೆಯಿತು. ನಂತರ 2016–17ರಲ್ಲಿ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಮುಖಾಂತರ ರಾಜ್ಯ ಸರ್ಕಾರವು ಮೂರು ಕೋಟಿ ರೂ. ಅನುದಾನ ಮಂಜೂರು ಮಾಡಿತ್ತು. ಕಮಗಾರಿ ಪೂರ್ಣಗೊಂಡಿದ್ದು, ಭವ್ಯ ಬಂಜಾರ ಭವನದ ಕನಸು ನನಸಾಗಿದೆ.
ಭವನದಲ್ಲಿ ಏನೇನಿದೆ..?
ಮೂರು ಅಂತಸ್ತಿನ ಕಟ್ಟಡದಲ್ಲಿ ಒಂದು ಸಮುದಾಯ ಭವನ, 13 ಕೊಠಡಿಗಳು, 200 ಜನ ಒಮ್ಮೆಲೇ ಕುಳಿತು ಊಟ ಮಾಡಲು ಭೋಜನಾಲಯ, ,ಸುಸಜ್ಜಿತ ಶೌಚಾಲಯ ಹಾಗೂ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ತುಮಕೂರು ಹಾಸನ ಚಿಕ್ಕಬಳ್ಳಾಪುರ ಜಿಲ್ಲೆಗಳ ವಲಯ ಕಚೇರಿ, ಜಿಲ್ಲಾ ಬಂಜಾರ ಸಂಘದ ಕಚೇರಿಗಳನ್ನು ಹೊಂದಿದೆ, ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ಬಂಜಾರ ಭವನ ರೂಪ ಪಡೆದುಕೊಂಡಿದೆ.
ಅಗತ್ಯಗಳು ಹೀಗಿವೆ
ಅಂಗವಿಕಲರು ಮತ್ತು ವೃದ್ಧರಿಗೆ ಅನುಕೂಲ ಆಗುವ ರೀತಿಯಲ್ಲಿ ಲಿಫ್ಟ್ ವ್ಯವಸ್ಥೆ, ಭವನದ ಮುಂಭಾಗದಲ್ಲಿ ಗಣಪತಿ ವಿಗ್ರಹ, ಜನರೇಟರ್, ಅಡುಗೆ ಮಾಡಲು ಪಾತ್ರೆ ಸಾಮಗ್ರಿಗಳು ಅಗತ್ಯವಿದೆ.
ಯಾವ ಯಾವ ಕಾರ್ಯಕ್ರಮಕ್ಕ ಬಳಕೆ
ಪ್ರಮುಖವಾಗಿ ಸರ್ಕಾರಿ ಕಾರ್ಯಕ್ರಮಗಳು, ನಿಗಮದ ಕಾರ್ಯಕ್ರಮಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಶಿಬಿರಗಳಿಗೆ, ಧಾರ್ಮಿಕ ಕಾರ್ಯಕ್ರಮಗಳಿಗೆ, ಬಂಜಾರ ಸಮುದಾಯದ ಕಸೂತಿ ಬಟ್ಟೆಗಳ ತಯಾರಿಕಾ ಶಿಬಿರಕ್ಕೆ, ಸಮುದಾಯದ ಕಾರ್ಯಕ್ರಮಗಳಿಗೆ ಅವಕಾಶ ಇದೆ.
ಕೋರ್ಟ್ 01
ಸಮುದಾಯದ ಬಹುದಿನಗಳ ಕನಸು ನನಸಾಗಿದೆ, ಭವನದ ನಿರ್ಮಾಣಕ್ಕೆ ಶ್ರಮಿಸಿದ ನಾಯಕರಿಗೆ ಮತ್ತು ಅಧಿಕಾರಿಗಳು ಸಮುದಾಯದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ನಾರಾಯಣ್ ನಾಯ್ಕ.ಡಿ
ಜಿಲ್ಲಾಧ್ಯಕ್ಷ ಬಂಜಾರ ಸಂಘ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ ಹಾಗೂ ತುಮಕೂರು ಜಿಲ್ಲಾ ಬಂಜಾರ ಲಂಬಾಣಿ ಸೇವಾಲಾಲ್ ಸೇವಾ ಸಂಘದ ಸಹಯೋಗದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ನಗರದ ಸರಸ್ವತಿಪುರಂನಲ್ಲಿ ಜಿಲ್ಲಾ ಬಂಜಾರ ಭವನದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ, ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ, ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಉಪಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ, ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು, ಜಿಲ್ಲೆಯ ಎಲ್ಲಾ ತಾಲ್ಲೂಕಿನ ಸಂಘ–ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಜನಪ್ರತಿನಿಧಿಗಳು, ನಾಯಕ್, ಡಾವೋ, ಕಾರ್‍ಭಾರಿ ಮತ್ತು ಸಮುದಾಯದ ಮುಖಂಡರು ಸೇರಿದಂತೆ ಬಂಜಾರ ಸಮುದಾಯದವರು ಭಾಗವಹಿಸುತ್ತಾರೆ.