ತುಮಕೂರು : ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಮತ್ತು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ವತಿಯಿಂದ ಇಂದು ಭಾರತದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ.ಅಬ್ದುಲ್ ಕಲಾಂರವರ ಪುಣ್ಯಸ್ಮರಣೆಯನ್ನು ಪುಷ್ಪನಮನ ಸಲ್ಲಿಸುವುದರ ಮುಖೇನ ಆಚರಿಸಲಾಯಿತು.
ಎ.ಪಿ.ಜೆ.ಅಬ್ದುಲ್ ಕಲಾಂರವರ ಕುರಿತು ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಮತ್ತು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷರು ಎನ್.ಕೆ.ನಿಧಿಕುಮಾರ್ ಮಾತನಾಡಿ ಕಲಾಂ ರವರನ್ನು ನಮ್ಮ ದೇಶವು ಮರೆಯದಂತ ಆಣಿಮುತ್ತು ಅವರಾಗಿದ್ದು, ನಮ್ಮ ದೇಶದ ರಕ್ಷಣಾವ್ಯವಸ್ಥೆಗೆ ಅವರು ನೀಡಿದಂತಹ ಕೊಡುಗೆ ಅಪಾರ ಅದಕ್ಕೆ ಅವರನ್ನು ನಾವು ಮಿಸೈಲ್ ಮ್ಯಾನ್ ಆಫ್ ಇಂಡಿಯಾ ಎಂದು ಕರೆಯುತ್ತೇವೆ, ಅವರು ಪರಿಶ್ರಮದಿಂದಲೇ ನಾವು ಸ್ವದೇಶಿ ನಿರ್ಮಿತ ಕ್ಷಿಪಣಿಗಳನ್ನು ಇಂದು ತಯಾರಿಸುತ್ತಿದ್ದೇವೆ, ಅವರು ರಾಷ್ಟ್ರಪತಿಗಳಾಗಿದ್ದಂತಹ ಸಂದರ್ಭದಲ್ಲಿ ಮಹೋನ್ನತ ಕಾರ್ಯಗಳನ್ನು ಮಾಡಿ, ಎಲ್ಲರ ಮನೆ ಮಾತಾಗಿದ್ದು ಇದೀಗ ಇತಿಹಾಸ ಎಂದು ತಿಳಿಸಿದರು.
ಅಲ್ಪ ಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾದ ಇಲಾಸ್ ಅಹಮ್ಮದ್‍ರವರು ಕಲಾಂರವರ ಬಗ್ಗೆ ಮಾತನಾಡಿ ಕಲಾಂ ರವರಿಗೆ ಪುಟಾಣಿ ಮಕ್ಕಳು ಎಂದರೇ ಎಲ್ಲಿಲ್ಲದ ಪ್ರೀತಿ ಅವರು ಮಕ್ಕಳೊಟ್ಟಿಗೆ ಹಲವಾರು ಸಂದರ್ಶನಗಳನ್ನು ಮಾಡಿದ್ದಾರೆ, ಎಷ್ಟೋ ಜನ ಮಕ್ಕಳಿಗೆ ನೀತಿ ಪಾಠಗಳನ್ನು ಹೇಳಿಕೊಟ್ಟಿದ್ದಾರೆ, ಎಷ್ಟೋ ಸೆಮಿನಾರ್‍ಗಳನ್ನು ಮಾಡಿರುವುದಲ್ಲದೇ ಕಲಾಂ ರವರು ನಮ್ಮ ಭಾರತದ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡಿದವರಲ್ಲಿ ಅತ್ಯುನ್ನತ ಸ್ಥಾನವನ್ನು ಪಡೆದಿದ್ದಾರೆ, ಅವರು ಒಂದು ಸೆಮಿನಾರ್‍ನಲ್ಲಿ ಭಾಗವಹಿಸಿ ಮಾತನಾಡುತ್ತಿರುವಾಗಲೇ ಅವರು ಕೊನೆ ಉಸಿರು ಎಳೆದಿದ್ದು ದುರಂತ ಆ ಸನ್ನಿವೇಶವನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಭಾವುಕರಾದರು.
ಕಲಾಂ ರವರ ಕುರಿತು ಡಿ.ಕೆ.ಇಂದ್ರುಕುಮಾರ್ ಮಾತನಾಡಿ ಕಲಾಂ ರವರು ಹುಟ್ಟಿದ್ದು ಮುಸ್ಲಿಂ ಸಮುದಾಯದಲ್ಲಿಯಾದರೂ ಅವರು ಎಂದಿಗೂ ಜಾತಿ ಬೇಧವಿಲ್ಲದೇ ಒಬ್ಬ ಸಮಾನ್ಯನಾಗಿ ತಾನೊಬ್ಬ ಭಾರತೀಯ ಎಂದು ಸಾರಿ ಹೇಳುತ್ತಿದ್ದರಲ್ಲದೇ, ತಾನು ಮನುಷ್ಯ, ನನ್ನದು ಭಾರತದೇಶ ಅದನ್ನು ಪ್ರೀತಿ ಮಾಡಿ ಜಾತಿ ಬೇಧ ಅವೆಲ್ಲಾ ನಮಗ್ಯಾಕೇ ಎಂಬ ಅವರ ನಾನ್ನುಡಿ ನಿಜಕ್ಕೂ ಅರ್ಥಗರ್ಭೀತವಾದದ್ದು, ಅವರನ್ನು ಅನುಸರಿಸಿದರೇ ನಮ್ಮ ಭಾರತ ದೇಶದಲ್ಲಿ ಜಾತಿ ವ್ಯವಸ್ಥೆಯೇ ಇರುವುದಿಲ್ಲ, ಎಲ್ಲರೂ ಸರಿಸಮಾನರು ಎಂಬ ಅವರ ನಾನ್ನುಡಿ ಅಂಬೇಡ್ಕರ್‍ರವರ ಆಶಯ ಈಡೇರಿದಂತೆ ಆಗುತ್ತದೆಂದು ತಿಳಿಸಿದರು.
ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಮತ್ತು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾ ಕಾರ್ಯಧ್ಯಕ್ಷರಾದ ಕೆಸ್ತೂರು ನರಸಿಂಹಮೂರ್ತಿ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾದ ಇಲಾಸ್ ಅಹಮ್ಮದ್, ನಗರಾಧ್ಯಕ್ಷರಾದ ಮನು ಟಿ.ಎಲ್, ಅಲ್ಪಸಂಖ್ಯಾತರ ಘಟಕದ ನಗರಾಧ್ಯಕ್ಷರಾದ ನೂರ್ ಅಹಮ್ಮದ್, ಅಲ್ಪಸಂಖ್ಯಾತರ ಘಟಕದ ತಾಲ್ಲೂಕು ಅಧ್ಯಕ್ಷರಾದ ಜಬಿನೇಷನ್, ಪದಾಧಿಕಾರಿಗಳಾದ ಕೃಷ್ಣಮೂರ್ತಿ, ರಾಜಶೇಖರ್, ನಾರಾಯಣ್, ಮೋಯಿನ್ ಅಹಮ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು