ಆಗ್ನೇಯ ಕ್ಷೇತ್ರ: ಬಿಜೆಪಿ ಮುಖಂಡರ ಸಮಾಲೋಚನೆ ಅತ್ಯಧಿಕ ಮತದಾರರ ನೋಂದಣಿ ಕುರಿತು ಚರ್ಚೆ

ತುಮಕೂರು: ಮುಂದಿನ ವರ್ಷ ನಡೆಯುವ ಆಗ್ನೇಯ ಪದವಿಧರರ ಕ್ಷೇತ್ರದ ವಿಧಾನ ಪರಿಷತ್ತಿನ ಚುನಾವಣೆಗೆ ಅರ್ಹ ಪದವಿಧರರನ್ನು ಮತದಾರರ ಪಟ್ಟಿಗೆ ಸೇರಿಸುವ ಸಂಬಂಧ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿರುವ ರಾಜ್ಯ ಬಿಜೆಪಿ ಕಾನೂನು ಪ್ರಕೋಷ್ಠ ಸಂಚಾಲಕ ವಸಂತಕುಮಾರ್ ಅವರು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹಾಗೂ ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು.
ಹನುಮ ಜಯಂತಿ ಅಂಗವಾಗಿ ಮಂಗಳವಾರ ನಗರದ ಕೋಡಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ವಸಂತಕುಮಾರ್, ಶಾಸಕರೊಂದಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನವಚೇತನ್, ನಗರ ಅಧ್ಯಕ್ಷ ಟಿ.ಕೆ.ಧನುಷ್ ಹಾಗೂ ವಿವಿಧ ಮುಖಂಡ ಸಭೆ ನಡೆಸಿ ಚರ್ಚಿಸಿದರು.

ಬಿಜೆಪಿ ಕಾರ್ಯಕರ್ತರು ಅರ್ಹ ಪದವಿಧರರನ್ನು ಗುರುತಿಸಿ ಅವರು ಮತದಾರರ ಪಟ್ಟಿಗೆ ಸೇರಲು ಮನವರಿಕೆ ಮಾಡಬೇಕು. ಚುನಾವಣೆಯಲ್ಲಿ ಸಾಂವಿಧಾನಿಕ ಮತಹಕ್ಕು ಪಡೆಯಲು ಮತದಾರರಾಗಿ ನೋಂದಾಯಿಸಲು ಮಾರ್ಗದರ್ಶನ ಮಾಡಬೇಕು. ಕಳೆದಬಾರಿಗಿಂತ ಹೆಚ್ಚು ಮತದಾರರ ನೋಂದಣೆಗೆ ಬಿಜೆಪಿ ಕಾರ್ಯಕರ್ತರು ಶ್ರಮಿಸಬೇಕು ಎಂದು ವಸಂತಕುಮಾರ್ ಕೋರಿದರು.
ಈಗಾಗಲೇ ತಾವು ಆಗ್ನೇಯ ಪದವಿಧರರ ಕ್ಷೇತ್ರದಾದ್ಯಂತ ಹಲವು ಸುತ್ತಿನ ಪ್ರವಾಸ ಮಾಡಿ ಮತದಾರರ ಪಟ್ಟಿಗೆ ಪದವಿಧರರನ್ನು ಸೇರ್ಪಡೆ ಮಾಡುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿದ್ದು, ಈ ತಿಂಗಳ 10ರೊಳಗೆ ಎಲ್ಲಾ ಅರ್ಹ ಪದವಿಧರರು ಮತದಾರರ ಪಟ್ಟಿಗೆ ನೋಂದಣೆಯಾಗುವಂತೆ ನೋಡಿಕೊಳ್ಳಬೇಕು. ಈ ಕ್ಷೇತ್ರವನ್ನು ಬಿಜೆಪಿಗೇ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!