ಮುಖ್ಯಮಂತ್ರಿಗಳಿಂದ ಬರ ನಿರ್ವಹಣೆ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಪರಿಶೀಲನಾ ಸಭೆ

ಮುಖ್ಯಮಂತ್ರಿಗಳಿಂದ ಬರ ನಿರ್ವಹಣೆ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಪರಿಶೀಲನಾ ಸಭೆ
ಜಿಲ್ಲೆಯ ಬರ ನಿರ್ವಹಣೆ, ಪೂರ್ವ ಮುಂಗಾರು ಪರಿಸ್ಥಿತಿ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್
ತುಮಕೂರು: ರಾಜ್ಯದಲ್ಲಿನ ಬರಪರಿಸ್ಥಿತಿ, ಪೂರ್ವ-ಮುಂಗಾರು ಮತ್ತು ಮುಂಗಾರು ಋತುಮಾನ ಪರಿಸ್ಥಿತಿ ಮತ್ತು ಮಳೆಯಿಂದ ಉಂಟಾದ ಹಾನಿ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೇಸ್ವಾನ್ ಮೂಲಕ ನಡೆದ ವಿಡಿಯೋ ಸಂವಾದ ಸಭೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭಾಗವಹಿಸಿ ಜಿಲ್ಲೆಯ ಬರಪರಿಸ್ಥಿತಿ, ಮುಂಗಾರು ಋತುಮಾನ ಪರಿಸ್ಥಿತಿ ಹಾಗೂ ಮಳೆಯಿಂದ ಉಂಟಾದ ಹಾನಿ ಬಗ್ಗೆ ಮಾಹಿತಿ ನೀಡಿದರು.
ರಾಜ್ಯದಲ್ಲಿಯೇ ಅತಿ ಹೆಚ್ಚು 20 ಮೇವಿನ ಬ್ಯಾಂಕ್‍ಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸಲಾಗಿದ್ದು, ಬರ ಸಮರ್ಪಕ ನಿರ್ವಹಣೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರಲ್ಲದೆ, ಜಿಲ್ಲೆಯಲ್ಲಿ ಮೇ 21, 2024ರ ಮಾಹೆಯಲ್ಲಿ 94 ಮಿ.ಮೀ. ವಾಡಿಕೆ ರೀತ್ಯಾ ಮಳೆಯಾಗಬೇಕಿದ್ದು, 150.9 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಬೀಜ, ರಸಗೊಬ್ಬರ, ಕೀಟನಾಶಕ ಸಂಗ್ರಹ ಇದ್ದು, ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವ ಕಾರಣ ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆಗಾಗಿ 50 ರೈತ ಸಂಪರ್ಕ ಕೇಂದ್ರಗಳಿದ್ದು, ಪ್ರಸ್ತುತ ವರ್ಷ ಹೆಚ್ಚುವರಿಯಾಗಿ 11 ಬೀಜ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸರಬರಾಜು ಸಂಸ್ಥೆಗಳಲ್ಲಿ 52,000 ಕ್ವಿಂಟಾಲ್ ಬಿತ್ತನೆ ಬೀಜಗಳ ಸಂಗ್ರಹವಿದ್ದು, ಇಲ್ಲಿಯವರೆಗೂ 284 ಕ್ವಿಂಟಾಲ್ ಬಿತ್ತನೆ ಬೀಜ ವಿತರಿಸಲಾಗಿದೆ, ಆಧಾರ್ ಸೀಡಿಂಗ್ ಮತ್ತಿತರ ಸಮಸ್ಯೆ ಕಾರಣ ಕೆಲವು ರೈತರಿಗೆ ಪರಿಹಾರ ವಿತರಣೆ ಬಾಕಿ ಇತ್ತು. ಇದರಲ್ಲಿ ಬಹುತೇಕ ಸಮಸ್ಯೆ ಬಗೆಹರಿಸಿ ಎಲ್ಲಾ ಅರ್ಹ ರೈತರಿಗೆ ಪರಿಹಾರ ವಿತರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಮುಂಗಾರು ಪೂರ್ವ ಮಳೆ ಎಲ್ಲೆಡೆ ಉತ್ತಮವಾಗಿದೆ. ಹೀಗಾಗಿ ಬಿತ್ತನೆ ಕಾರ್ಯ ಚುರುಕಾಗಬೇಕು. ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತಿಯಿಂದ ಸಡಿಲಿಕೆ ನೀಡಿರುವುದರಿಂದ ಅಭಿವೃದ್ಧಿ ಕೆಲಸದ ಕಡೆ ಅಧಿಕಾರಿಗಳು ಹೆಚ್ಚು ಗಮನ ಹರಿಸಬೇಕು. ಬಿತ್ತನೆ ಬೀಜಕ್ಕೆ ಜನ ಹೆಚ್ಚು ಸಮಯ ಕ್ಯೂ ನಿಲ್ಲುವುದು ತಪ್ಪಿಸಿ, ರೈತರಿಂದ ದೂರು ಬಾರದಂತೆ ಬೇಡಿಕೆಯನುಗುಣವಾಗಿ ಬೀಜ, ರಸಗೊಬ್ಬರ, ಕೀಟನಾಶಕ ಸರಿಯಾಗಿ ಪೂರೈಸಿ, ಎಲ್ಲಿಯೂ ಕೊರತೆಯಾಗದಂತೆ ನೋಡಬೇಕು.
ಕುಡಿಯುವ ನೀರಿನ ಶುದ್ಧತೆ ಪರೀಕ್ಷಿಸಿ :-
ನಂತರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಮಳೆಯ ನೀರು ಶುದ್ಧ ಕುಡಿಯುವ ನೀರಿನೊಂದಿಗೆ ಮಿಶ್ರಣಗೊಳ್ಳುವ ಸಾಧ್ಯತೆಯಿದ್ದು, ಕುಡಿಯುವ ನೀರಿನ ಮೂಲಗಳು ಕಲುಷಿತಗೊಂಡಲ್ಲಿ ಆ ನೀರನ್ನು ಸೇವಿಸುವ ಜನರು ರೋಗಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ವ್ಯಾಪ್ತಿಯಲ್ಲಿರುವ 11,150 ಜಲಮೂಲಗಳು ಸೇರಿದಂತೆ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಎಲ್ಲಾ ಜಲಮೂಲಗಳ ಶುದ್ಧತೆಯನ್ನು ಪರೀಕ್ಷಿಸಿ ನೀರು ಕುಡಿಯಲು ಯೋಗ್ಯವಿದೆಯೇ ಎಂಬುದನ್ನು ಖಚಿತಪಡಿಸಿಕೊಂಡು ಸಾರ್ವಜನಿಕರಿಗೆ ಸಮರ್ಪಕ ಕುಡಿಯುವ ನೀರನ್ನು ಪೂರೈಸುವಂತೆ ಸೂಚಿಸಿದರು. ಆರೋಗ್ಯ ಇಲಾಖೆಯು ಈಗಿನಿಂದಲೆ ಪೂರ್ವ ಸಿದ್ದತೆ ಮಾಡಿಕೊಂಡು, ಎಲ್ಲಿಯೂ ಕಲುಷಿತ ನೀರು ಪೂರೈಕೆಯಾಗದಂತೆ ಎಚ್ಚರ ವಹಿಸಬೇಕೆಂದು ನಿರ್ದೇಶನ ನೀಡಿದರು.
ರೈತರು ಆತಂಕ ಪಡುವ ಅಗತ್ಯವಿಲ್ಲ :-
ಜಿಲ್ಲೆಯಲ್ಲಿ 52,217 ಕ್ವಿಂಟಾಲ್ ಬಿತ್ತನೆ ಬೀಜವು ಸರಬರಾಜು ಸಂಸ್ಥೆಗಳಲ್ಲಿ ಸಂಗ್ರಹವಿದ್ದು, 50,363 ಮೆ.ಟನ್ ರಸಗೊಬ್ಬರದ ಸಂಗ್ರಹವಿದೆ.

 

 

 

ರೈತರಿಗೆ ತ್ವರಿತವಾಗಿ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಹಾಗೂ ಅಗತ್ಯ ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಜುಲೈ-2024 ಅಂತ್ಯದವರೆಗೂ ವಿತರಣೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ರೈತರು ಆತಂಕಕ್ಕೊಳಗಾಗದೆ ತಮಗೆ ಅಗತ್ಯವಿರುವಷ್ಟು ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

 

 

 

ಸಚಿವರ ಮೆಚ್ಚುಗೆ :-

ರಾಜ್ಯದಲ್ಲಿ 2312 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಈ ಬಾರಿ ಕಂಡು ಬಂದಿದ್ದು, ಅದರಲ್ಲಿ 1700 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮೂಲಕ, 500 ಗ್ರಾಮಗಳಿಗೆ ಟ್ಯಾಂಕರ್‍ಗಳ ಮೂಲಕ, ಉಳಿದ ಗ್ರಾಮಗಳಲ್ಲಿ ಹಳೆಯ ಕೊಳವೆ ಬಾವಿ ನವೀಕರಣ ಹಾಗೂ ಹೊಸ ಕೊಳವೆ ಬಾವಿ ಕೊರಸುವ ಮೂಲಕ ಸಮರ್ಪಕವಾಗಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲಾಗಿದೆ. ರಾಜ್ಯಾದ್ಯಂತ ಅಗತ್ಯವಿರುವ ಕಡೆ ಮೇವಿನ ಬ್ಯಾಂಕ್‍ಗಳನ್ನು ಸ್ಥಾಪಿಸಿ ರೈತರ ಕಷ್ಟಕ್ಕೆ ಸ್ಪಂದಿಸಲಾಗಿದೆ. ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಈ ಬಾರಿ ಪ್ರಾರಂಭದಲ್ಲೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಬರ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಡಿಯೋ ಸಂವಾದದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ, ಕಾನೂನು, ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ, ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಕನ್ನಡ ಮತ್ತು ಸಂಸ್ಕøತಿ ಸಚಿವ ಶಿವರಾಜ ತಂಗಡಗಿ, ಸಕ್ಕರೆ ಮತ್ತು ಜವಳಿ ಖಾತೆ ಸಚಿವ ಶಿವಾನಂದ ಪಾಟೀಲ, ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್, ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಯೋಜನೆ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಹಾಗೂ ಮತ್ತಿತರ ಹಿರಿಯ ಅಧಿಕಾರಿಗಳು ಮುಖ್ಯಮಂತ್ರಿಗಳೊಂದಿಗೆ ಭಾಗಿಯಾಗಿದ್ದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಅಪರ ಜಿಲ್ಲಾಧಿಕಾರಿ ಶಿವಾನಂದ್ ಬಿ. ಕರಾಳೆ, ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಉಪವಿಭಾಗಾಧಿಕಾರಿಗಳಾದ ಸಪ್ತಶ್ರೀ, ಗೌರವ ಕುಮಾರ್ ಶೆಟ್ಟಿ, ಗೋಟೂರು ಶಿವಪ್ಪ, ಕೃಷಿ ಇಲಾಖೆ ಜಂಟಿನಿರ್ದೇಶಕ ರಮೇಶ್ ಎನ್., ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಶಾರದಮ್ಮ, ಸೇರಿದಂತೆ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *