ತುಮಕೂರು: ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವುದರಿಂದ ರೈತರು ಏಕಕಾಲದಲ್ಲಿ ಮುಂಗಾರು ಹಂಗಾಮಿನ ಬಿತ್ತನೆಯನ್ನು ಪ್ರಾರಂಭಿಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಸಂಜೆ ಮುಂಗಾರು ಹಂಗಾಮಿನ ಸಿದ್ಧತೆ ಕುರಿತು ಕೃಷಿ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ರೈತರ ಬೇಡಿಕೆಗನುಗುಣವಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ದಾಸ್ತಾನು ಮಾಡಿರಬೇಕು. ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲು ಜಾಗದ ಅಭಾವವಿದ್ದಲ್ಲಿ ಗೋದಾಮು, ಗ್ರಾಮ ಪಂಚಾಯಿತಿ ಭವನಗಳಲ್ಲಿ ದಾಸ್ತಾನು ಮಾಡಬೇಕೆಂದು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕಾಗಿ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಬಾರದು. ಬೀಜ ಮತ್ತು ಗೊಬ್ಬರ ಕೊರತೆ ಉಂಟಾದರೆ ಸಂಬಂಧಿಸಿದ ತಾಲೂಕು ಕೃಷಿ ಸಹಾಯಕ ನಿರ್ದೇಶಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.
ಮುಂಗಾರು ಪೂರ್ವದಲ್ಲಿಯೇ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ದಾಸ್ತಾನು ಮಾಡಿಕೊಂಡಲ್ಲಿ ರೈತರು ಬಿತ್ತನೆ ಕಾರ್ಯವನ್ನು ಸಕಾಲದಲ್ಲಿ ಕೈಗೊಳ್ಳಲು ಅನುಕೂಲವಾಗುತ್ತದೆ. ರೈತರಿಂದ ಯಾವುದೇ ದೂರುಗಳು ಬಾರದಂತೆ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆಯಾಗಬೇಕು. ಅಧಿಕೃತ ಮಾರಾಟಗಾರರಿಂದಲೇ ನಿಗಧಿತ ದರದಲ್ಲಿ ಬೀಜ, ಗೊಬ್ಬರ ಖರೀದಿಸುವ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕೆಂದು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಜಿಲ್ಲೆಯ ಎಲ್ಲ ತಾಲೂಕು ಕೃಷಿ ಸಹಾಯಕ ನಿರ್ದೇಶಕರಿಂದ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ದಾಸ್ತಾನು, ಬಿತ್ತನೆ ಪ್ರದೇಶದ ಗುರಿ, ಮಳೆ ವಿವರದ ತಾಲೂಕುವಾರು ಮಾಹಿತಿ ಪಡೆದು ಮಾತನಾಡುತ್ತಾ ರೈತರಿಗೆ ಸಕಾಲದಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಪೂರೈಕೆಯಾಗದಿದ್ದಲ್ಲಿ ಮುಕ್ತ ಮಾರುಕಟ್ಟೆಗೆ ಹೋಗುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಮೇ ಅಂತ್ಯದೊಳಗಾಗಿ ಅಗತ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ದಾಸ್ತಾನು ಮಾಡಲು ಕ್ರಮವಹಿಸಬೇಕೆಂದು ನಿರ್ದೇಶಿಸಿದರು.
ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ನಿಗಧಿತ ದರದಲ್ಲಿಯೇ ವಿತರಿಸಬೇಕು. ವಿತರಣೆಯಲ್ಲಿ ಯಾವುದೇ ಗೊಂದಲಗಳುಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಬಿತ್ತನೆ ಬೀಜದ ದಾಸ್ತಾನು ಪ್ರಮಾಣವನ್ನು ಹಿಂದಿನ ಸಾಂಪ್ರದಾಯಿಕ ಪದ್ಧತಿ ಅನ್ವಯ ನಿಗಧಿಪಡಿಸದೆ ರೈತ ಸಮುದಾಯವನ್ನು ಖುದ್ದಾಗಿ ಭೇಟಿ ಮಾಡಿ ವಾಸ್ತವವಾಗಿ ಅಗತ್ಯವಿರುವ ಬೀಜದ ಪ್ರಮಾಣವನ್ನು ನಿರ್ಧರಿಸಿ ದಾಸ್ತಾನು ಮಾಡಬೇಕೆಂದರಲ್ಲದೆ ಜಿಲ್ಲೆಯ ಮುಖ್ಯ ಬೆಳೆಗಳಾದ ರಾಗಿ, ಶೇಂಗಾ ಬೆಳೆಯ ಬಿತ್ತನೆ ಬೀಜವನ್ನು ಬೇಡಿಕೆಗಿಂತ ಹೆಚ್ಚುವರಿ ಪ್ರಮಾಣದಲ್ಲಿ ದಾಸ್ತಾನು ಮಾಡಬೇಕೆಂದು ಸಲಹೆ ನೀಡಿದರು.
ಜಂಟಿ ಕೃಷಿ ನಿರ್ದೇಶಕ ರಮೇಶ್ ಮಾತನಾಡಿ ಜಿಲ್ಲೆಯಲ್ಲಿ ಮೇ ಮಾಹೆಯಲ್ಲಿ ಉತ್ತಮ ಮಳೆಯಾಗಿದ್ದರೂ ಸಹ ಪೂರ್ವ ಮುಂಗಾರು ಬಿತ್ತನೆಗೆ ತಡವಾಗಿದೆ ಕಳೆದ ಮಾರ್ಚ್, ಏಪ್ರಿಲ್ ಮಾಹೆ ಯಲ್ಲಿ ಮಳೆಯಾಗಿದ್ದರೆ ಸಕಾಲದಲ್ಲಿ ಪೂರ್ವ ಮುಂಗಾರು ಬಿತ್ತನೆ ಮಾಡಬಹುದಾಗಿತ್ತು ಎಂದು ಮಾಹಿತಿ ನೀಡಿದರಲ್ಲದೆ ಜೂನ್ 10ರ ನಂತರ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ರೈತರು ತಮ್ಮ ಜಮೀನನ್ನು ಹದಗೊಳಿಸುವಲ್ಲಿ ನಿರತರಾಗಿದ್ದಾರೆ ಎಂದು ತಿಳಿಸಿದರು.
ಕಳೆದ ಮೂರು ವರ್ಷಗಳಲ್ಲಿ ಇದೇ ಅವಧಿಯ ಮಳೆ ವರದಿಯನ್ನು ಅವಲೋಕಿಸಿದಾಗ 2021ರಲ್ಲಿ 164.5 ಮಿ.ಮೀ., 2022ರಲ್ಲಿ 126 ಮಿ.ಮೀ. ಹಾಗೂ 2023ರಲ್ಲಿ 139.7 ಮಿ.ಮೀ. ಸರಾಸರಿ ಮಳೆಯಾಗಿದ್ದು, 2024ರ ಮೇ ಮಾಹೆಯಲ್ಲಿ ಈವರೆಗೆ 193.8 ಮಿ.ಮೀ.ನಷ್ಟು ದಾಖಲೆ ಮಳೆಯಾಗಿರುವುದರಿಂದ ರೈತರ ಮನದಲ್ಲಿ ಪ್ರಸಕ್ತ ವರ್ಷ ಉತ್ತಮ ಕೃಷಿ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಬಹುದೆಂಬ ಭರವಸೆಯನ್ನು ಮೂಡಿಸಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಪ್ರಮುಖ ಬೆಳೆಗಳಾದ ಭತ್ತ, ಜೋಳ, ರಾಗಿ, ಸಿರಿಧಾನ್ಯ, ಮುಸುಕಿನ ಜೋಳ, ದ್ವಿದಳ ಧಾನ್ಯ, ಎಣ್ಣೆಕಾಳು, ವಾಣಿಜ್ಯ ಬೆಳೆ ಸೇರಿದಂತೆ 3,20,455 ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಒಟ್ಟು 28,805 ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆ ಇದ್ದು, 765.70 ಕ್ವಿಟಾಲ್ ಬಿತ್ತನೆ ಬೀಜವನ್ನು ಈಗಾಗಲೇ ದಾಸ್ತಾನು ಮಾಡಲಾಗಿದೆ. ಈಗಾಗಲೇ 106.45 ಕ್ವಿಂಟಾಲ್ ಬಿತ್ತನೆ ಬೀಜವನ್ನು ರೈತರಿಗೆ ವಿತರಿಸಲಾಗಿದೆ. ವಿವಿಧ ಸರಬರಾಜು ಸಂಸ್ಥೆಗಳಲ್ಲಿ 52,217 ಕ್ವಿಂಟಾಲ್ ಬೀಜ ಲಭ್ಯವಿದ್ದು, ಬರುವ ಜೂನ್ ಮಾಹೆ 1ರೊಳಗಾಗಿ ಹಂತ ಹಂತವಾಗಿ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗುವುದು ಎಂದು ಸಭೆಗೆ ವಿವರಿಸಿದರು.
ಜಿಲ್ಲೆಯಲ್ಲಿ ಯೂರಿಯಾ, ಡಿಎಪಿ, ಎಂಓಪಿ, ಎನ್‍ಪಿಕೆಎಸ್, ಎಸ್‍ಎಸ್‍ಪಿ ಸೇರಿದಂತೆ ಒಟ್ಟು 70,264 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆ ಇದ್ದು, ಈಗಾಗಲೇ 8,033 ಮೆ.ಟನ್ ರಸಗೊಬ್ಬರವನ್ನು ವಿತರಿಸಲಾಗಿದೆ. ಈವರೆಗೆ 50,160 ಮೆ.ಟನ್ ರಸಗೊಬ್ಬರ ವಿವಿಧ ಸಂಸ್ಥೆಗಳಿಂದ ಸರಬರಾಜಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ್ ಬಿ. ಕರಾಳೆ ಜಿಲ್ಲಾ ಕೃಷಿ ಉಪ ನಿರ್ದೇಶಕ ಅಶೋಕ್, ಎಲ್ಲ ತಾಲೂಕು ಮಟ್ಟದ ಸಹಾಯಕ ಕೃಷಿ ನಿರ್ದೇಶಕರು ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.