ಎತ್ತಿನಹೊಳೆ ಯೋಜನೆ : ಶೀಘ್ರ ಪೂರ್ಣಗೊಳಿಸಲು ಜಿಲ್ಲಾಧಿಕಾರಿಗಳ ಸೂಚನೆ

ತುಮಕೂರು: ಜಿಲ್ಲೆಯಲ್ಲಿ ಕೈಗೊಂಡಿರುವ ಎತ್ತಿನಹೊಳೆ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಇಂಜಿನಿಯರ್‍ ಗಳಿಗೆ ಸೂಚನೆ ನೀಡಿದರು.

ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿ ದೊಡ್ಡಗುಣಿ, ತಿಪಟೂರು ತಾಲ್ಲೂಕು ರಜತಾದ್ರಿಪುರ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಜೆ.ಸಿ.ಪುರ ಗ್ರಾಮಗಳಿಗೆ ಭೇಟಿ ನೀಡಿ ಕಾಮಗಾರಿ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ತಿಪಟೂರು ಹಾಗೂ ಚಿಕ್ಕನಾಯಕನಹಳ್ಳಿ ವ್ಯಾಪ್ತಿಯಲ್ಲಿ ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಇದುವರೆಗೂ ಪೂರ್ಣಗೊಂಡಿಲ್ಲ. ಕೂಡಲೇ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ತೋಟಗಾರಿಕೆ, ಅರಣ್ಯ ಇಲಾಖೆಗಳು ಮರ-ಮುಟ್ಟುಗಳ ಮೌಲ್ಯಮಾಪನ ಮಾಡಿ ವರದಿ ನೀಡುವ ಮೂಲಕ ಭೂಸ್ವಾಧೀನ ಪ್ರಕ್ರಿಯೆಗೆ ವೇಗ ನೀಡಲು ಸಹಕರಿಸಬೇಕು ಎಂದು ನಿರ್ದೇಶನ ನೀಡಿದರು.

ದೊಡ್ಡಗುಣಿ ಬಳಿ ಎತ್ತಿನಹೊಳೆ ಯೋಜನೆ ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯ ವಿಳಂಬಕ್ಕೆ ಕಾರಣವೇನೆಂದು ಮಾಹಿತಿ ಪಡೆದ ಅವರು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿ ಜಿ.ಎನ್. ಮಂಜುನಾಥ, ಕಾರ್ಯಪಾಲಕ ಇಂಜಿನಿಯರ್ ಆನಂದ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *