ತುರುವೇಕೆರೆ: ತಾಲ್ಲೂಕಿನ ದೊಡ್ಡೇನಹಳ್ಳಿಯ ಸೇಂಟ್ ಮೇರಿಸ್ ಪ್ರೌಢಶಾಲೆಯು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ 100 ರಷ್ಟು ಪಲಿತಾಂಶ ಪಡೆದಿದೆ ಎಂದು ಶಾಲೆಯ ನೂತನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ.ಎಂ.ಎಸ್. ಗಂಗಾಧರ ದೇವರಮನೆ ತಿಳಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪರೀಕ್ಷೆಯಲ್ಲಿ ಅಕ್ರಮ ತಡೆಗಟ್ಟುವ ಹಾಗೂ ಪಾರದರ್ಶಕತೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪರೀಕ್ಷಾ ಕೇಂದ್ರದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಹೊಸ ತೀರ್ಮಾನ ಕೈಗೊಂಡಿದ್ದು, ಪರೀಕ್ಷಾ ಫಲಿತಾಂಶ ಎಲ್ಲರ ಗಮನ ಸೆಳೆದಿತ್ತು. ಮೊದಲ ಬಾರಿ ಸಿಸಿ ಕ್ಯಾಮೆರಾ ಕಣ್ಣಿನ ಕಣ್ಗಾವಲಿನಲ್ಲಿ ಪರೀಕ್ಷೆ ಬರೆಯುವುದು ವಿದ್ಯಾರ್ಥಿಗಳಿಗೆ ಸವಾಲಿನ ವಿಚಾರವಾಗಿತ್ತು. ಪೋಷಕರಲ್ಲಿ ಮಕ್ಕಳ ಫಲಿತಾಂಶ ಏನಾಗುವುದೋ ಎಂಬ ಆತಂಕ ಮನೆಮಾಡಿತ್ತು. ಇಂತಹ ಸವಾಲು ಹಾಗೂ ಭಯದ ವಾತಾವರಣದ ನಿರ್ಮಾಣವಾಗಿತ್ತು ಎಂದರು.
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕಳೆದ 3 ವರ್ಷಳಿಂದ ಶೇ.100 ಫಲಿತಾಂಶ ಪಡೆದು ಹ್ಯಾಟ್ರಿಕ್ ಬಾರಿಸಿತ್ತು. ಈ ಸಾಧನೆಯನ್ನು ಮುಂದುವರೆಸಲು ಸರ್ಕಾರದ ಸಿಸಿ ಕ್ಯಾಮೆರಾ ಕಣ್ಗಾವಲಿನ ಸವಾಲು ಎದುರಾಗಿತ್ತು. ಈ ಸವಾಲನ್ನು ಸೇಂಟ್ ಮೇರೀಸ್ ಪ್ರೌಢಶಾಲೆಯ 2023-24 ನೇ ಸಾಲಿನ ವಿದ್ಯಾರ್ಥಿಗಳು ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾಗಿ ಶೇ. 100 ಫಲಿತಾಂಶ ಬರಲು ಕಾರಣವಾಗಿದ್ದಾರೆ.
ಶಾಲೆಯ ವಿದ್ಯಾರ್ಥಿನಿ ಇಂಚರ ವೈ. 95.84 (599) ಅಂಕ ಪಡೆದು ತಾಲ್ಲೂಕಿನಲ್ಲಿ 6 ನೇ ಸ್ಥಾನ ಪಡೆದಿದ್ದಾಳೆ. ಕಾಲೇಜಿಗೆ ಸತತ 4ನೇ ಬಾರಿಗೆ ಶೇ.100 ಫಲಿತಾಂಶ ಬರಲು ಕಾರಣರಾದ ವಿದ್ಯಾರ್ಥಿಗಳಿಗೆ, ಶಾಲಾ ಶಿಕ್ಷಕರಿಗೆ, ಸಿಬ್ಬಂದಿಗೆ ಹಾಗೂ ಸಹಕರಿಸಿದ ಪೋಷಕರಿಗೆ ಶಾಲಾ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಲಿದೆ ಎಂದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ