ವರ್ತುಲ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಶುಭ ಕಲ್ಯಾಣ್ ಸೂಚನೆ

 

ತುಮಕೂರು: ಸಾರ್ವಜನಿಕರ ಅನುಕೂಲಕ್ಕಾಗಿ ಶಿರಾ

ಗೇಟ್-ಗುಬ್ಬಿ ಗೇಟ್‍ವರೆಗೂ ಸಂಪರ್ಕಿಸುವ ವರ್ತುಲ ರಸ್ತೆ
ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ
ಶುಭ ಕಲ್ಯಾಣ್ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ
ಸೂಚಿಸಿದರು.
ಶನಿವಾರ ವರ್ತುಲ ರಸ್ತೆ ಕಾಮಗಾರಿ ಪರಿಶೀಲನೆಗಾಗಿ ಭೇಟಿ ನೀಡಿದ
ಸಂದರ್ಭದಲ್ಲಿ ಮಾತನಾಡಿದ ಅವರು ನಗರದ ಎಸ್ ಮಾಲ್ ಬಳಿ
ಕೈಗೊಂಡಿರುವ ಸೇತುವೆ ನಿರ್ಮಾಣ ಕಾಮಗಾರಿ
ಪೂರ್ಣಗೊಳ್ಳುವವರೆಗೂ ಕೋಡಿ ಬಸವಣ್ಣ ರಸ್ತೆ ಮಾರ್ಗವಾಗಿ
ಸಂಚರಿಸುತ್ತಿದ್ದ ವಾಹನಗಳು ಶಿರಾಗೇಟ್-ಗುಬ್ಬಿಗೇಟ್
ಮಾರ್ಗದಲ್ಲಿ ಸಂಚರಿಸುವುದರಿಂದ ವಾಹನ ದಟ್ಟಣೆ ಹೆಚ್ಚಾಗುವ
ಸಾಧ್ಯತೆಯಿದೆ. ಇದರಿಂದ ಯಾವುದೇ ಅಪಘಾತಗಳು
ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ವಾಹನಗಳ ಸುಗಮ
ಸಂಚಾರಕ್ಕಾಗಿ ಅನುವು ಮಾಡಿಕೊಡುವ ದೃಷ್ಟಿಯಿಂದ ವರ್ತುಲ
ರಸ್ತೆಯಲ್ಲಿರುವ ತಗ್ಗುಗಳನ್ನು ಮುಚ್ಚಿ
ಸಮತಟ್ಟುಗೊಳಿಸಬೇಕು. ರಾತ್ರಿ ವೇಳೆ ವಾಹನ ಸಂಚಾರಕ್ಕೆ
ಅಡ್ಡಿಯಾಗದಂತೆ ವಿದ್ಯುದ್ದೀಪ ಅಳವಡಿಸಬೇಕು ಎಂದು ಸೂಚನೆ
ನೀಡಿದರು.

ವರ್ತುಲ ರಸ್ತೆಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಸೇತುವೆ
ಕಾಮಗಾರಿಯನ್ನು ಮೇ 30ರೊಳಗಾಗಿ ಪೂರ್ಣಗೊಳಿಸಬೇಕು.
ಕಾಮಗಾರಿ ಪೂರ್ಣಗೊಳ್ಳುವವರೆಗೂ ಪ್ರತೀದಿನ ಸ್ಥಳಕ್ಕೆ ಭೇಟಿ
ನೀಡಿ ಪರಿಶೀಲಿಸಬೇಕು. ಕಾಮಗಾರಿ ವಿಳಂಬಕ್ಕೆ ಕಾರಣವಾದ
ಗುತ್ತಿಗೆದಾರರಿಗೆ ಕೂಡಲೇ ಶೋಕಾಸ್ ನೋಟೀಸ್ ನೀಡಬೇಕು
ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಉಪ
ವಿಭಾಗಾಧಿಕಾರಿ ಗೌರವ ಕುಮಾರ್ ಶೆಟ್ಟಿ, ತಹಸೀಲ್ದಾರ್ ಎಂ. ಸಿದ್ದೇಶ್, ಟೂಡಾ
ಆಯುಕ್ತ ಬಸಂತಿ, ಲೋಕೋಪಯೋಗಿ ಇಲಾಖೆ ಸಹಾಯಕ
ಕಾರ್ಯನಿರ್ವಾಹಕ ಇಂಜಿನಿಯರ್ ರವಿ ಸೇರಿದಂತೆ ಮತ್ತಿತರ
ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *