ತುಮಕೂರು : ತುಮಕೂರು ಕಸಬಾ ಹೋಬಳಿಯ ಗ್ರಾಮ ಆಡಳಿತಾಧಿಕಾರಿಗಳ ಕಾರ್ಯವೈಖರಿಗೆ ಬೇಸತ್ತ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ ಎಂದು ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿ ಕುಮಾರ್ ರವರು ಅಧಿಕಾರಿಗಳ ವರ್ತನೆಗೆ ತೀವ್ರ ಆಕ್ರೋಶವನ್ನು ಹೊರ ಹಾಕಿ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.
ಮನವಿ ಸಲ್ಲಿಸಿ ಮಾತನಾಡಿದ ಕಸಬಾ ಹೋಬಳಿ ವ್ಯಾಪ್ತಿಯ ಗ್ರಾಮ ಆಡಳಿತ ಅಧಿಕಾರಿಗಳು ಜಾತಿ ಮತ್ತು ಆದಾಯ ದೃಢೀಕರಣ ಪತ್ರ, ವಂಶವೃಕ್ಷ, ವಿಧವಾವೇತನ, ಅಂಗವಿಕಲ ವೇತನ, ವೃದ್ದಾಪ್ಯ ವೇತನ, ವಾಸ ಸ್ಥಳ ದೃಢೀಕರಣ ಪಾತ್ರಗಳ ದಾಖಲೆಗಳಿಗಾಗಿ ಸಾರ್ವಜನಿಕರು ಪ್ರತಿನಿತ್ಯ ಕಚೇರಿಗಳಿಗೆ ಅಲೆದಾಡಿ ಹೈರಾಣಾಗುತ್ತಿದ್ದಾರೆ ಎಂದು ತಿಳಿಸಿದರು.
ಅದರಲ್ಲಿಯೂ ಗ್ರಾಮ ಆಡಳಿತ ಅಧಿಕಾರಿಗಳಾದ ದೇವರಾಜು, ದಿವ್ಯ ಸೇರಿದಂತೆ ಹಲವರು ಸರ್ಕಾರಿ ನೌಕರರು ಸಾರ್ವಜನಿಕರಿಗೆ ಸಮರ್ಪಕವಾಗಿ ಸ್ಪಂದಿಸದೆ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದು ದಾಖಲೆಗಳು ಸಮರ್ಪಕವಾಗಿದ್ದರೂ ಸಹ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ಸರಿಯಾಗಿ ವಿಲೇ ಮಾಡದೇ ಮುಲ್ಕಿಯಲ್ಲಿಟ್ಟುಕೊಂಡು ಅದನ್ನು ವಜಾ ಮಾಡುವ ಮನಸ್ಥಿತಿಯನ್ನು ಹೊಂದಿದ್ದಾರೆ, ಜೊತೆಗೆ ಕಛೇರಿಗಳಲ್ಲಿ ಸರಿಯಾಗಿ ನಾಮಫಲಕಗಳನ್ನು ಅಳವಡಿಸದೇ ಕಛೇರಿಯಲ್ಲಿನ ವಿವಿಧ ವಿಭಾಗಗಳನ್ನು ಗುರ್ತಿಸುವುದೇ ಸಾರ್ವಜನಿಕರಿಗೆ ತಲೆ ನೋವಾಗಿರುತ್ತದೆ, ಈ ಭಾಗದ ಜನರು ಬಹುತೇಕರು ರೈತಾಪಿ ವರ್ಗದವರಾಗಿರುವುದಲ್ಲದೇ ಅನೇಕರು ಅವಿದ್ಯಾವಂತರಾಗಿರುತ್ತಾರೆ ಅವರುಗಳಿಗೆ ಸಮರ್ಪಕವಾದ ಮಾಹಿತಿಯನ್ನು ಅಧಿಕಾರಿ ವರ್ಗದವರು ನೀಡದೇ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ತಮ್ಮ ಮನವಿಯಲ್ಲಿ ಆರೋಪಿಸಿದ್ದಾರೆ.
ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ವತಿಯಿಂದ ನೀಡಲಾದ ಮನವಿ ಪತ್ರದಲ್ಲಿ ದುರ್ನಡತೆ ತೋರುವ ಗ್ರಾಮ ಆಡಳಿತ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ, ಸಾರ್ವಜನಿಕರಿಗೆ ಸೂಕ್ತ ನ್ಯಾಯ ಒದಗಿಸಿಕೊಡುವುದರೊಂದಿಗೆ ಅಧಿಕಾರಿ ವರ್ಗದವರು ಶಿಸ್ತಿನಿಂದ ವರ್ತಿಸಬೇಕು ಎಂದು ಮನವಿ ಮಾಡಿರುವುದಲ್ಲದೇ ಅಶಿಸ್ತು ಹಾಗೂ ಸಾರ್ವಜನಿಕರ ಅರ್ಜಿಗಳನ್ನು ಮುಲ್ಕಿಯಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳದ ನೌಕರರ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯೆ ನೀಡಿ ತಮ್ಮ ಅರ್ಜಿಯನ್ನು ಕೂಲಂಕುಷವಾಗಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮವನ್ನು ಅತೀ ಶೀಘ್ರದಲ್ಲಿಯೇ ಜರುಗಿಸುವುದಾಗಿ ಅಭಯ ನೀಡಿದ್ದಾರೆಂದು ಎನ್.ಕೆ.ನಿಧಿಕುಮಾರ್ ತಿಳಿಸಿದ್ದಾರೆ.
ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಕಾರ್ಯಧ್ಯಕ್ಷರಾದ ಕೆಸ್ತೂರು ನರಸಿಂಹಮೂರ್ತಿ, ಮುಖಂಡರುಗಳಾದ ವಾಸು, ವೀಣಾ, ಚಿಕ್ಕಮ್ಮ, ಮಂಗಳಮ್ಮ, ಸಂಜೀವಮ್ಮ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.