ತುಮಕೂರು: ಪ.ಜಾತಿ/ಪ.ಪಂಗಡ ಸಮುದಾಯಗಳ ಸಮಸ್ಯೆಗಳನ್ನು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ದೊರಕಿಸಿಕೊಡಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಪ.ಜಾತಿ ಮತ್ತು ಪ.ಪಂಗಡಗಳ ಕುಂದು ಕೊರತೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ.ಜಾತಿ ಮತ್ತು ಪ.ಪಂಗಡಗಳ ಸ್ಮಶಾನ ಭೂಮಿ ಅಭಿವೃದ್ಧಿ, ನಿವೇಶನ ಹಂಚಿಕೆ, ಸಾಗುವಳಿ ಚೀಟಿ, ಮೂಲಭೂತ ಸೌಕರ್ಯ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಕುಂದು ಕೊರತೆ ಸಭೆಗಳಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಶೀಲಿಸಿ ತಾಲ್ಲೂಕು ಹಂತದಲ್ಲೇ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.
ಜಿಲ್ಲೆಯ ಹಲವಾರು ಗ್ರಾಮಗಳಲ್ಲಿನ ಪ.ಜಾತಿ ಮತ್ತು ಪ.ಪಂಗಡಗಳ ಸ್ಮಶಾನ ಭೂಮಿ ಸಮಸ್ಯೆಗೆ ಪರಿಹಾರ ದೊರಕಿಸಿಕೊಡದಿರುವ ಬಗ್ಗೆ ಸಮುದಾಯದ ಮುಖಂಡರ ಪ್ರಶ್ನೆಗೆ ಉತ್ತರಿಸಿದ ಅವರು ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲೂ ಸ್ಮಶಾನಕ್ಕಾಗಿ ಪ್ರತ್ಯೇಕ ಭೂಮಿಯನ್ನು ಮೀಸಲಿಟ್ಟಿದ್ದು, ಜಿ.ಪಿ.ಎಸ್ ಮೂಲಕ ಸರ್ವೇ ನಡೆಸಿ ಸ್ಮಶಾನ ಭೂಮಿಗೆ ಆವರಣ ಗೋಡೆ ನಿರ್ಮಾಣದ ಜೊತೆಗೆ ಸ್ಮಶಾನ ಭೂಮಿಯನ್ನು ಅಭಿವೃದ್ಧಿ ಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತುರುವೇಕೆರೆ ತಾಲ್ಲೂಕಿನ ಚಿಕ್ಕ ತುರುವೇಕೆರೆ ದಲಿತ ಕಾಲೋನಿಯ ಜನರು ರಸ್ತೆ, ಚರಂಡಿ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳಿಲ್ಲದೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಬಗ್ಗೆ ಪ್ರಶ್ನಿಸಿದ ದಲಿತ ಮುಖಂಡರಿಗೆ ಉತ್ತರಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಅವರು, ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನಾಳೆಯೇ ಗ್ರಾಮಕ್ಕೆ ಭೇಟಿ ನೀಡಲಿದ್ದು ಅಗತ್ಯ ಕ್ರಿಯಾ ಯೋಜನೆ ತಯಾರಿಸಿ ಶೀಘ್ರವಾಗಿ ಕಾಮಗಾರಿ ಪ್ರಾರಂಭಿಸಲಿದ್ದಾರೆ ಎಂದು ತಿಳಿಸಿದರು.
ತುರುವೇಕೆರೆ ತಾಲ್ಲೂಕು ಬಾಣಸಂದ್ರ ಗ್ರಾಮದಲ್ಲಿ ಕಳಪೆ ಕಾಮಗಾರಿ ನಡೆಸಲಾಗಿದೆ ಎಂಬ ಮುಖಂಡರ ಆರೋಪಕ್ಕೆ ಉತ್ತರಿಸಿದ ಅವರು ಜಿಲ್ಲೆಯಲ್ಲಿ ಗುಣಮಟ್ಟದ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಜಿಲ್ಲೆಯ ಯಾವುದೇ ಭಾಗದಲ್ಲಿ ಕಳಪೆ ಕಾಮಗಾರಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದರೆ ಅಂತಹ ಕಾಮಗಾರಿಗಳನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತುರುವೇಕೆರೆ ತಾಲ್ಲೂಕಿನ ದಂಡಿನ ಶಿವರದಲ್ಲಿ ಡಾ: ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣ ಮಾಡಲು ಭೂಮಿ ಮಂಜೂರಾಗಿದ್ದರೂ ಕಟ್ಟಡ ಕಾಮಗಾರಿ ಕೈಗೊಳ್ಳದಿರುವ ಬಗ್ಗೆ ಪ್ರಶ್ನಿಸಿದ ಮುಖಂಡರಿಗೆ ಉತ್ತರಿಸಿದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರು, ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರಕ್ಕೆ 28 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಬೇಡಿಕೆ ಸಲ್ಲಿಸಿದ್ದು, ಸರ್ಕಾರದಿಂದ ಅನುದಾನ ಬಂದ ತಕ್ಷಣ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದರು.
ಪ.ಜಾತಿ ಮತ್ತು ಪ.ಪಂಗಡದ ಸಮುದಾಯಗಳು ಅನೇಕ ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಹ ಸಮಸ್ಯೆ ಬಗೆಹರಿಯದೆ ಉಳಿದುಕೊಂಡಿದೆ.
ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹಾರ ದೊರಕಿಸಿಕೊಡಬೇಕೆಂದು ಜಿಲ್ಲೆಯ ದಲಿತ ಮುಖಂಡರು ಜಿಲ್ಲಾಧಿಕಾರಿಗಳಿಗೆ ಬೇಡಿಕೆಯಿಟ್ಟರು.
ಸಭೆಯಲ್ಲಿ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಕೆ.ವಿ. ಅಶೋಕ್, ಮಹಾನಗರ ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ, ಅಪರ ಜಿಲ್ಲಾಧಿಕಾರಿ ಡಾ: ಎನ್.ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸಣ್ಣಮಸಿಯಪ್ಪ, ಉಪ ವಿಭಾಗಾಧಿಕಾರಿಗಳಾದ ಗೋಟೂರು ಶಿವಪ್ಪ, ಸಪ್ತಶ್ರೀ, ಗೌರವ್ ಕುಮಾರ್ ಶೆಟ್ಟಿ, ವಿವಿಧ ತಾಲ್ಲೂಕುಗಳ ತಹಶೀಲ್ದಾರ್ಗಳು, ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಜಿಲ್ಲೆಯ ದಲಿತ ಮುಖಂಡರು ಉಪಸ್ಥಿತರಿದ್ದರು.