ತುಮಕೂರು : ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ವತಿಯಿಂದ ವಿಶ್ವಮಾನವ ಬ್ರಹ್ಮಶ್ರೀ ನಾರಾಯಣಗುರು ಅವರ 17೦ನೇ ಜಯಂತೋತ್ಸವವನ್ನು ತುಮಕೂರು ನಗರದ ಅಮಾನಿಕೆರೆ ಪಾರ್ಕ್ ಆವರಣದಲ್ಲಿ ನಾರಾಯಣಗುರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಭಾರತ ದಲಿತ ಕ್ರಿಯ ಸಮಿತಿ ಜಿಲ್ಲಾ ಅಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ರವರು ಮಾತನಾಡಿ ನಾರಾಯಣಗುರು ಅವರ ಆದರ್ಶಗಳು ಹಾಗೂ ಅವರು ಈ ನಾಡಿಗೆ ನೀಡಿರುವ ಕೊಡುಗೆ ಅಪಾರವಾದುದ್ದು ಅವರ ಕಾಲಘಟ್ಟದಲ್ಲಿ ನಮ್ಮ ದೇಶದಲ್ಲಿದ್ದ ಅಸ್ಪೃಶ್ಯತೆಯ ಪಿಡುಗನ್ನು ಹೋಗಲಾಡಿಸುವಲ್ಲಿ ಅವರ ಪಾತ್ರ ಅತ್ಯಂತ ಹಿರಿಮೆ ತಂದಿದೆ, ಅಂದಿನ ಜನಜೀವನ ಆಧುನಿಕತೆಯಿಂದ ವಂಚಿತವಾಗಿತ್ತು, ಅಂತಹ ಕ್ಲಿಷ್ಠಕರ ಸಂದರ್ಭದಲ್ಲಿಯೂ ಸಹ ಬ್ರಹ್ಮಶ್ರೀ ನಾರಾಯಣಗುರು ರವರು ದೇಶದ ನಾನಾ ಕಡೆ ಪಾದಯಾತ್ರೆ ಮಾಡಿ ಜನರಲ್ಲಿದ್ದ ಮೂಡನಂಬಿಕೆಗಳನ್ನು ಹೋಗಲಾಡಿಸುವಲ್ಲಿ ಯಶಸ್ವಿಯಾಗಿದ್ದರು
ಬ್ರಹ್ಮಶ್ರೀ ನಾರಾಯಣಗುರುಗಳಿಗೆ ದಲಿತರೆಂದರೇ ಎಲ್ಲಿಲ್ಲದ ಪ್ರೀತಿ, ವಾತ್ಸಲ್ಯವಿತ್ತು ಅವರ ಬೋಧನೆಗಳಲ್ಲಿ ದೇವರು ಒಬ್ಬನೇ ನಾಮ ಹಲವು, ಮತ್ತೊಬ್ಬರಿಗೆ ಸಹಾಯ ಮಾಡುವುದರ ಮೂಲಕ ದೇವರನ್ನು ಕಾಣಬೇಕು, ಮತ್ತೊಬ್ಬರಿಗೆ ಕೆಡುಕನ್ನು ಬಯಸದೇ ಸದಾ ಒಳ್ಳೆಯತನದಿಂದ ಜೀವನ ನಡೆಸಿದರೆ ಸಾರ್ಥಕ ಜೀವನ ನಡೆಸಿದಂತೆ ಆಗುತ್ತದೆ ಎಂದು ಗುರುಗಳು ಬೋಧನೆ ಮಾಡುತ್ತಿದ್ದರು, ಜೊತೆಗೆ ಈಡಿಗ ಸಮುದಾಯವು ಆಗಿನ ಕಾಲಘಟ್ಟದಲ್ಲಿ ನಗರ ಜೀವನದಿಂದ ಬಹಳ ದೂರದಲ್ಲಿಯೇ ವಾಸ ಮಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು ಅದನ್ನು ಹೋಗಲಾಡಿಸಿ ಸಾಮಾಜಿಕ ಜನಜೀವನ ನಡೆಸಲು ನಾರಾಯಣಗುರುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರಲ್ಲದೇ ಇಂತಹ ಮಹಾನ್ ಚೇತನರ ಜನ್ಮದಿನೋತ್ಸವವನ್ನು ಆಚರಿಸುತ್ತಿರುವುದು ನಮ್ಮ ಸುದೈವ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಇಂದ್ರಕುಮಾರ್ ಡಿ.ಕೆ. ಮಾತನಾಡಿ ಬ್ರಹ್ಮಶ್ರೀ ನಾರಾಯಣಗುರುಗಳು ಅನಿಷ್ಟ ಪದ್ದತಿಯ ವಿರುದ್ಧ ಅಂದಿನ ಕಾಲಘಟ್ಟದಲ್ಲಿ ಜಾಗೃತಿ ಮೂಡಿಸುತ್ತಿದ್ದರು ದಲಿತರನ್ನು ದೇವಸ್ಥಾನಗಳಿಗೆ ಪ್ರವೇಶ ಮಾಡುವ ಮೂಲಕ ಜಾತಿ ಪದ್ಧತಿಯನ್ನು ನಿರ್ಮೂಲನೆ ಮಾಡಲು ಹೋರಾಡಿದಂತ ಮಹಾನ್ ನಾಯಕರಾಗಿದ್ದರು ನಾರಾಯಣ ಗುರೂಜಿಯವರು ಒಂದೇ ದೇಶ ಒಂದೇ ಜಾತಿ ಎಂಬ ಸಂದೇಶವನ್ನು ನೀಡುವುದರ ಜೊತೆಗೆ ಸಮಾಜದಲ್ಲಿ ಶಾಂತಿಯ ಸಂದೇಶವನ್ನು ನೀಡಿದಂತ ಮಹಾ ಗುರುಗಳು ಇಂದು ನಾವೆಲ್ಲರೂ ಸೇರಿ ನಾರಾಯಣ ಗುರೂಜಿಯವರ 170 ನೇ ಜಯಂತೋತ್ಸವ ಮಾಡುತ್ತಿದ್ದು ಅದೆ ರೀತಿ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಸಹ ಪಾಲಿಸುವ ಮೂಲಕ ಸಮಾಜದಲ್ಲಿ ಸಮಾನತೆ ಶಾಂತಿ ಸಹೋದರತ್ವ ಬೆಳೆಸಿಕೊಂಡಾಗ ಮಾತ್ರ ಅವರ ಜಯಂತೋತ್ಸವಕ್ಕೆ ಸಾರ್ಥಕತೆ ಸಿಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಗಮಿಸಿದ್ದ ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಅಖಿಲ ಭಾರತ ದಲಿತ ಕ್ರಿಯ ಸಮಿತಿ ಜಿಲ್ಲಾ ಅಧ್ಯಕ್ಷರಾದ ಎನ್.ಕೆ.ನಿಧಿ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಇಂದ್ರಕುಮಾರ್ ಡಿ.ಕೆ. ಜಿಲ್ಲಾ ಉಪಾಧ್ಯಕ್ಷರಾದ ನಾರಾಯಣ್ ಎಸ್, ಜಿಲ್ಲಾ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ಟೈಲರ್ ಜಗದೀಶ್, ಸಹ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗಯ್ಯ ಕೆ.ಎನ್, ನಗರಾಧ್ಯಕ್ಷರಾದ ಶ್ರೀನಿವಾಸ್.ಡಿ. ಆರ್, ಪದಾಧಿಕಾರಿಗಳಾದ ಇಮ್ರಾನ್, ವಿನಯ್, ನಾಗರಾಜ್, ಕುಮಾರ್, ಗಂಗಾಧರ್ ಜಿ.ಆರ್, ರಂಗಸ್ವಾಮಯ್ಯ, ದರ್ಶನ್, ಗೋವಿಂದರಾಜ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.