ಹಂದಿಜೋಗರ ಮನವೊಲಿಸಿದ : ಉಪಲೋಕಾಯುಕ್ತ ಬಿ. ವೀರಪ್ಪ

ತುಮಕೂರು : ಕರ್ನಾಟಕ ಲೋಕಾಯುಕ್ತದ ಉಪಲೋಕಾಯುಕ್ತ ಅವರು ಇಂದು ಗುಬ್ಬಿ ಪಟ್ಟಣದ ಪೋಲೀಸ್ ಠಾಣೆ ಹಿಂಭಾಗ ವಾಸಿಸುತ್ತಿರುವ ಹಂದಿಜೋಗಿಗಳ ವಸತಿ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಸಮಸ್ಯೆಗಳನ್ನು ಆಲಿಸುತ್ತಾ ಮಳೆ ನೀರಿನಲ್ಲಿಯೇ ಬದುಕು ಸವೆಸುತ್ತಿರುವ ಹಂದಿಜೋಗರಿಗೆ ಸರ್ಕಾರದಿಂದ ಗುರುತಿಸಲಾಗಿರುವ ಸಾತೇನಹಳ್ಳಿ ಪ್ರದೇಶಕ್ಕೆ ಸ್ಥಳಾಂತರವಾಗುವಂತೆ ಮನವೊಲಿಸಿದರು.

 

ಪ್ರಸ್ತುತ ವಾಸಿಸುತ್ತಿರುವ ಹಂದಿಜೋಗರ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು ಮಳೆ ನೀರಿನಿಂದ ಆವೃತವಾಗಿರುವ ಗುಡಿಸಲಿನಲ್ಲಿ ಹೇಗೆ ಬದುಕುತ್ತೀರಿ? ಸುರಕ್ಷಿತ ಸ್ಥಳಕ್ಕೆ ತೆರಳಬೇಕೆಂದು ಮನವಿ ಮಾಡಿದರು.

 

ಸತತ ಮಳೆಯಿಂದ ಹಂದಿಜೋಗಿಗಳು ವಾಸಿಸುತ್ತಿದ್ದ ಗುಡಿಸಲುಗಳಿಗೆ ನೀರು ನುಗ್ಗಿದ ಪರಿಣಾಮ ಪಟ್ಟಣದ ಬಾಬು ಜಗಜೀವನರಾಮ ಸಮುದಾಯ ಭವನದಲ್ಲಿ ತಾತ್ಕಾಲಿಕ ಗಂಜಿ ಕೇಂದ್ರ ತೆರೆದು ಆಶ್ರಯ ನೀಡಲಾಗಿದೆ. ಕೆರೆ ಅಂಗಳದಲ್ಲಿಯೇ ಗುಡಿಸಲುಗಳು ಇರುವುದರಿಂದ ಮಳೆ ಬಂದಾಗಲೆಲ್ಲ ಹಂದಿಜೋಗಿಗಳು ಇಂಥ ಪರಿಸ್ಥಿತಿಯನ್ನು ಎದುರಿಸುವ ಅನಿವಾರ್ಯತೆ ಉಂಟಾಗಿದೆ. ತಾಲೂಕು ಆಡಳಿತದಿಂದ ಸಾತೇನಹಳ್ಳಿಯಲ್ಲಿ ಹಂದಿಜೋಗಿ ಕುಟುಂಬಗಳಿಗೆ ನಿವೇಶನ ಗುರುತಿಸಿ ಈಗಾಗಲೇ ಅರ್ಹ 35 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದ್ದು, ಉಳಿದ ಫಲಾನುಭವಿಗಳು ಅಗತ್ಯ ದಾಖಲಾತಿ ಸಲ್ಲಿಸಿದಲ್ಲಿ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಬಿ. ಆರತಿ ಉಪಲೋಕಾಯುಕ್ತರ ಗಮನಕ್ಕೆ ತಂದರು.

 

 

ನಂತರ ಸಾತೇನಹಳ್ಳಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ಉಪಲೋಕಾಯುಕ್ತರು ತಾಲೂಕು ಆಡಳಿತದಿಂದ ಈ ಪ್ರದೇಶಕ್ಕೆ ಕುಡಿಯುವ ನೀರು, ರಸ್ತೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕೆಂದು ಸೂಚನೆ ನೀಡಿದರು.

 

ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿಃ
ಬಳಿಕ ಗುಬ್ಬಿ ತಾಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಅವರು ಅನಿರೀಕ್ಷಿತ ಭೇಟಿ ನೀಡಿ ಮಹಿಳಾ ಒಳರೋಗಿ ವಿಭಾಗ, ಶಸ್ತ್ರಚಿಕಿತ್ಸೆ ನಂತರ ಬಾಣಂತಿಯರ ಕೊಠಡಿ, ಔಷಧಿ ವಿತರಣಾ ಕೊಠಡಿ, ಸ್ಕ್ಯಾನಿಂಗ್ ವಿಭಾಗಗಳನ್ನು ಪರಿಶೀಲನೆ ಮಾಡಿದರಲ್ಲದೆ ಆಸ್ಪತ್ರೆಯಲ್ಲಿರುವ ರೋಗಿಗಳ ಆರೋಗ್ಯದ ಬಗ್ಗೆ ವಿಚಾರಿಸಿದರು.

 

ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ, ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಕೆ.ವಿ. ಅಶೋಕ್, ತುಮಕೂರು ಕರ್ನಾಟಕ ಲೋಕಾಯುಕ್ತ ಪೋಲೀಸ್ ಅಧೀಕ್ಷಕ ಎ.ವಿ. ಲಕ್ಷ್ಮೀನಾರಾಯಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಚಂದ್ರಶೇಖರ್, ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ತಹಶೀಲ್ದಾರ್ ಬಿ. ಆರತಿ ಸೇರಿದಂತೆ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *