ತುಮಕೂರು : ಭಾರತೀಯ ಹವಾಮಾನ ಇಲಾಖೆ ವರದಿಯನ್ವಯ ಗುಡುಗು-ಸಿಡಿಲು ಸಹಿತ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಮುಂದಿನ 3 ದಿನಗಳ ಕಾಲ ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
ಮುಂಜಾಗ್ರತೆ ವಹಿಸಲು ಅಧಿಕಾರಿ ಸಿಬ್ಬಂದಿಗೆ ಸೂಚನೆ :-
ಭಾರಿ ಮಳೆಯಿಂದ ಉಂಟಾಗಬಹುದಾದ ಪ್ರವಾಹದಿಂದ ಯಾವುದೇ ಜನ-ಜಾನುವಾರುಗಳ ಜೀವಹಾನಿಯಾಗದಂತೆ ಜಿಲ್ಲಾ/ತಾಲ್ಲೂಕು/ಗ್ರಾಮ ಮಟ್ಟದ ಅಧಿಕಾರಿ/ಸಿಬ್ಬಂದಿಗಳು ಕೇಂದ್ರಸ್ಥಾನದಲ್ಲಿದ್ದುಕೊಂಡು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.
ತುರ್ತು ಚಿಕಿತ್ಸೆಗಾಗಿ ಹತ್ತಿರದ ಆರೋಗ್ಯ ಕೇಂದ್ರಗಳ ಮಾಹಿತಿ ಹೊಂದಿರಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಭಾರಿ ಮಳೆ/ಪ್ರವಾಹದಿಂದ ಯಾವುದೇ ಅಹಿತಕರ ಘಟನೆಯಾಗದಂತೆ ಮಳೆ ಮುನ್ನಚ್ಚರಿಕೆ ಬಗ್ಗೆ ಪ್ರತಿ ಗ್ರಾಮಗಳಲ್ಲಿ ಡಂಗುರ ಸಾರಬೇಕು ಹಾಗೂ ಮೈಕ್ ಮೂಲಕ ಜಾಗೃತಿ ಮೂಡಿಸಬೇಕು. ನಿರಂತರ ಮಳೆಯಿಂದ ಅಪಾಯವಿರುವ ಮನೆ, ಗೋಡೆ ಇತರೆ ಕಟ್ಟಡಗಳು ಕುಸಿಯುವ ಸಂಭವವಿರುತ್ತದೆ. ಇದರಿಂದ ಸಾವು-ನೋವುಗಳು ಉಂಟಾಗಬಹುದಾದ್ದರಿಂದ ಸಾರ್ವಜನಿಕರಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ತಿಳಿ ಹೇಳಬೇಕು ಎಂದು ತಿಳಿಸಿದ್ದಾರೆ.
ರಾಜ್ಯ/ಜಿಲ್ಲಾಡಳಿತ/ತಾಲ್ಲೂಕು ಆಡಳಿತದಿಂದ ನೀಡುವ ಹವಾಮಾನದ ಮುನ್ನೆಚ್ಚರಿಕೆಯನ್ನು ಗ್ರಾಮ ಪಂಚಾಯತಿಯ ವಿಪತ್ತು ನಿರ್ವಹಣಾ ಸಮಿತಿಗಳು ಪ್ರತಿ ಗ್ರಾಮಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.
ಸಾರ್ವಜನಿಕರಲ್ಲಿ ಮನವಿ :-
ನದಿ/ಹಳ್ಳದ/ಕೆರೆ ದಡದಲ್ಲಿ ಬಟ್ಟೆ ತೊಳೆಯುವುದು, ಈಜಾಡುವುದು, ದನ/ಕರುಗಳನ್ನು ಮೇಯಿಸುವುದು, ಅಪಾಯವಿರುವ ಸೇತುವೆಗಳ ಮೇಲೆ ಸಂಚರಿಸುವುದು, ಮತ್ತಿತರೆ ಚಟುವಟಿಕೆಗಳನ್ನು ನಡೆಸಬಾರದು. ನದಿ/ಹಳ್ಳ/ಕೆರೆ ದಡಗಳಲ್ಲಿ ಅಪಾಯವಿರುವ ಸೇತುವೆಗಳಲ್ಲಿ ಪೆÇೀಟೋ/ಸೆಲ್ಫಿಗಳನ್ನು ತೆಗೆಯಬಾರದು. ಮಕ್ಕಳು ಮತ್ತು ವಯೋವೃದ್ಧರನ್ನು ಮನೆಯಿಂದ ಹೊರಗಡೆ ಒಂಟಿಯಾಗಿ ತೆರಳದಂತೆ ಎಚ್ಚರಿಕೆ ವಹಿಸಬೇಕು. ಗುಡುಗು-ಮಿಂಚು, ಸಿಡಿಲು ಬಡಿಯುವ ಸಂದರ್ಭದಲ್ಲಿ ಮನೆಯ ಹೊರಗಡೆ ಇರುವವರು ತುರ್ತಾಗಿ ಸುರಕ್ಷಿತವಾದ ತಗ್ಗು ಪ್ರದೇಶಕ್ಕೆ ತೆರಳಿ ರಕ್ಷಣೆ ಪಡೆದುಕೊಳ್ಳಬೇಕು. ಮರ, ವಿದ್ಯುತ್ ಕಂಬ, ಜಲಾಶಯ ಇತರೆ ಪ್ರತ್ಯೇಕ ವಸ್ತುಗಳಿಂದ ದೂರವಿರಬೇಕು. ಮಿಂಚು ಒಬ್ಬರಿಂದ ಒಬ್ಬರಿಗೆ ಸಂಚರಿಸದಂತೆ ಜನ ಸಂದಣಿಯಾಗದಂತೆ ಅಂತರ ಕಾಪಾಡಿಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕೆರೆ-ಕಟ್ಟೆಗಳ ಏರಿ/ಬಂಡ್/ಕೋಡಿಗಳಲ್ಲಿ ನೀರು ಸೋರಿಕೆ ಕಂಡು ಬಂದಲ್ಲಿ, ರಸ್ತೆಗಳ ಮೇಲೆ ಅಪಾಯಕಾರಿ ಮಟ್ಟದಲ್ಲಿ ನೀರು ಹರಿಯುತ್ತಿದ್ದಲ್ಲಿ/ನಿಂತಿದಲ್ಲಿ, ಮರ ಬಿದ್ದು ವಾಹನ ಸಂಚಾರ ಸ್ಥಗಿತವಾಗಿದ್ದಲ್ಲಿ, ವಿದ್ಯುತ್ ಲೈನ್/ಕಂಬ ಬಿದ್ದಿದ್ದಲ್ಲಿ, ಮನೆಯೊಳಗಡೆ ನೀರು ನುಗ್ಗಿದಲ್ಲಿ, ಮನೆ ಗೋಡೆ/ಮೇಲ್ಛಾವಣಿ ಬಿದ್ದಿದ್ದಲ್ಲಿ, ಬೆಳೆ ನಷ್ಟವಾಗಿದ್ದಲ್ಲಿ, ಇತರೆ ತುರ್ತು ಪರಿಸ್ಥಿತಿಗಳಲ್ಲಿ ಸಾರ್ವಜನಿಕರು ಸಹಾಯವಾಣಿ ಸಂಖ್ಯೆಗಳಾದ 7304975519, 0816-2213400, 155304ಕ್ಕೆ ಕರೆ ಮಾಡಿ ನೆರವು ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.