ತುಮಕೂರು: ರೋಗಿಗಳಿಗೆ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ನೀಡಲು ಎಲ್ಲಾ ಆಸ್ಪತ್ರೆಗಳಲ್ಲಿ 24 ಗಂಟೆಗಳ ಕಾಲವದಿಯಲ್ಲೂ ವೈದ್ಯರು ಲಭ್ಯವಿರಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ ನೀಡಿದರು.
ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಮೂಗನಾಯಕನಕೋಟೆ ಸಮುದಾಯ ಆರೋಗ್ಯ ಕೇಂದ್ರಕ್ಕಿಂದು ಬೆಳ್ಳಂಬೆಳಿಗ್ಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಆರೋಗ್ಯ ಕೇಂದ್ರದಲ್ಲಿ ಯಾವುದೇ ಡ್ಯೂಟಿ ಡಾಕ್ಟರ್ ಇಲ್ಲದಿರುವುದನ್ನು ಕಂಡು ಗರ್ಭಿಣಿಯರ ಹೆರಿಗೆ, ಮತ್ತಿತರ ತುರ್ತು ಸಂದರ್ಭಗಳಲ್ಲಿ ವೈದ್ಯರ ಉಪಸ್ಥಿತಿ ಅಗತ್ಯವಿರುತ್ತದೆ. ಕರ್ತವ್ಯದಲ್ಲಿರದ ಡ್ಯೂಟಿ ಡಾಕ್ಟರ್ ಅವರಿಗೆ ಶೋಕಾಸ್ ನೋಟೀಸ್ ನೀಡಲು ತಹಶೀಲ್ದಾರ್ ಆರತಿ ಅವರಿಗೆ ಸೂಚಿಸಿದರು.
ಆಸ್ಪತ್ರೆ ವಾರ್ಡುಗಳನ್ನು ಪರಿಶೀಲಿಸಿದ ಅವರು ಯಾರೊಬ್ಬರೂ ಒಳ ರೋಗಿಗಳು ಇಲ್ಲದ್ದನ್ನು ಕಂಡು ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇಲ್ಲ. ಇನ್ನು ರೋಗಿಗಳು ಹೇಗೆ ಬರಲು ಸಾಧ್ಯ? ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ಹಾಜರಾತಿ ವಹಿ ಪರಿಶೀಲಿಸುತ್ತಾ 34 ಅಧಿಕಾರಿ/ ಸಿಬ್ಬಂದಿ ವರ್ಗವಿದ್ದರೂ ವೈದ್ಯರೇ ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ ಅವರು ಆರೋಗ್ಯ ಕೇಂದ್ರ, ಆಸ್ಪತ್ರೆಗಳಲ್ಲಿ ಪಾಳಿ ಆಧಾರದ ಮೇಲೆ ದಿನದ 24 ಗಂಟೆಯೂ ವೈದ್ಯರು ಲಭ್ಯವಿರಬೇಕೆಂದು ನಿರ್ದೇಶನ ನೀಡಿದರು.
ನಂತರ ಆರೋಗ್ಯ ಕೇಂದ್ರದ ಎನ್‌ಸಿಡಿ ಕ್ಲಿನಿಕ್, ಹೆರಿಗೆ ವಿಭಾಗ, ಇಸಿಜಿ ಕೊಠಡಿ, ವೈದ್ಯಕೀಯ ಸಲಕರಣೆಗಳನ್ನು ಪರಿಶೀಲಿಸಿದ ಅವರು, ಹೆಸರಿಗೆ ಮಾತ್ರ ಇರುವ ಇಸಿಜಿ ಕೊಠಡಿ ಸ್ಟೋರ್ ರೂಂ ಆಗಿ ಪರಿವರ್ತನೆಯಾಗಿದೆ ಕೇಂದ್ರದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ವಾರ್ಡ್ ಗಳು ಸ್ವಚ್ಛತೆಯಿಲ್ಲದೆ ಅವ್ಯವಸ್ಥೆಯಿಂದ ಕೂಡಿದ್ದವು. ವಾರ್ಡ್ ಗಳಲ್ಲಿರುವ 40 ಬೆಡ್‌ಗಳಲ್ಲಿ ಯಾವ ಹಾಸಿಗೆಯೂ ಸ್ವಚ್ಛವಾಗಿಲ್ಲ. ಬೆಡ್ ಮೇಲೆ ಹೊದಿಕೆಗಳಿಲ್ಲದಿರುವುದನ್ನು ಕಂಡು ಅಸಮಧಾನ ವ್ಯಕ್ತಪಡಿಸಿದರು.
ಆರೋಗ್ಯ ಕೇಂದ್ರಗಳು ಅನಾರೋಗ್ಯ ಕೇಂದ್ರಗಳಾಗಬಾರದು. ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಕೇಂದ್ರವಾಗಬೇಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಉತ್ತಮ ಸೇವೆ ಒದಗಿಸಬೇಕೆಂದು ಆಸ್ಪತ್ರೆ ಸಿಬ್ಬಂದಿ ವರ್ಗಕ್ಕೆ ಸೂಚನೆ ನೀಡಿದರು.
ಈ ಆರೋಗ್ಯ ಕೇಂದ್ರದಲ್ಲಿ ಎಲ್ಲಾ ಅನುಕೂಲಗಳಿದ್ದರೂ, ಅಗತ್ಯ ಸಿಬ್ಬಂದಿಗಳಿದ್ದರೂ ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ರೆಫರ್ ಮಾಡಲಾಗುತ್ತಿದೆ. ಕೇಂದ್ರದಲ್ಲಿ ಒಬ್ಬರೂ ಒಳರೋಗಿಯಾಗಿ ದಾಖಲಾಗಿಲ್ಲ. ಎಲ್ಲಾ ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ರೆಫರ್ ಮಾಡದೆ ಇಲ್ಲಿಯೇ ಚಿಕಿತ್ಸೆ ನೀಡಬೇಕು. ಚಿಕಿತ್ಸೆ ಇಲ್ಲಿ ಸಾಧ್ಯವಿಲ್ಲದಾಗ ಮಾತ್ರ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರೆಫರ್ ಮಾಡಬೇಕೆಂದು ತಾಕೀತು ಮಾಡಿದರು.
ಎಂ.ಎನ್.ಕೋಟೆ ಗ್ರಾಮಸ್ಥರಿಂದ ಮಳೆ-ಬೆಳೆ ಪರಿಸ್ಥಿತಿ, ಪೌತಿ ಖಾತೆ ಆಂದೋಲನದ ಬಗ್ಗೆ ಮಾಹಿತಿ ಪಡೆದರು. ಕಾನೂನು ತೊಡಕು ಇರುವುದನ್ನು ಹೊರತುಪಡಿಸಿ ಉಳಿದೆಲ್ಲಾ ಪೌತಿ ಖಾತೆಗಳನ್ನು ವಿಲೇವಾರಿ ಮಾಡಲು ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಎಂ.ಎನ್.ಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 4೦೦ ಮಂದಿ ವಿವಿಧ ಪಿಂಚಣಿ ಯೋಜನೆಯಡಿ ಸೌಲಭ್ಯ ಪಡೆಯುತ್ತಿದ್ದಾರೆ ಎಂದರಲ್ಲದೆ ಹೊಸದಾಗಿ ಪಿಂಚಣಿ ಅರ್ಜಿ ವಿಲೇವಾರಿ ಮಾಡುವಾಗ ತೆರಿಗೆ ಪಾವತಿ ಮಾಡುವ, ಸರ್ಕಾರಿ ನೌಕರಿಯಲ್ಲಿರುವವರನ್ನು ಪರಿಗಣಿಸದೆ ಎಚ್ಚರಿಕೆಯಿಂದ ವಿಲೇವಾರಿ ಮಾಡಬೇಕೆಂದು ಗ್ರಾಮ ಆಡಳಿತ ಅಧಿಕಾರಿಗೆ ನಿರ್ದೇಶನ ನೀಡಿದರು.
ನಂತರ ಹೂವಿನಕಟ್ಟೆ ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಅಡುಗೆ ಕೋಣೆ, ಪ್ರಯೋಗಾಲಯ, ಪ್ರೊಜೆಕ್ಟರ್ ರೂಂ, ಭೋಜನಾಲಯ, ವಿದ್ಯಾರ್ಥಿಗಳ ತರಗತಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ವಸತಿ ಶಾಲೆ ಕಟ್ಟಡದ ಕಿಟಕಿ ಗಾಜು ಒಡೆದಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ವಿದ್ಯಾರ್ಥಿಗಳು ಓಡಾಡುವ ದಾರಿಯಲ್ಲಿ ಗಾಯಗೊಳಿಸಬಹುದಾದ ಯಾವುದೇ ವಸ್ತುಗಳನ್ನಿಡಬಾರದು. ಒಡೆದ ಕಿಟಕಿ ಗಾಜನ್ನು ಕೂಡಲೇ ಸರಿಪಡಿಸಲು ಪ್ರಾಂಶುಪಾಲರಿಗೆ ಸೂಚನೆ ನೀಡಿದರು.
ಪ್ರಿನ್ಸಿಪಾಲ್ ಸುರೇಶ್ ವಸತಿ ಶಾಲೆಯ ಬಗ್ಗೆ ಮಾಹಿತಿ ನೀಡುತ್ತಾ ಕಳೆದ ವರ್ಷ ಈ ವಸತಿ ಶಾಲೆಯು ಎಸ್.ಎಸ್.ಎಲ್.ಸಿ.ಯಲ್ಲಿ ಶೇ.1೦೦ರಷ್ಟು ಫಲಿತಾಂಶವನ್ನು ಪಡೆದುಕೊಂಡಿದೆ ಎಂದು ತಿಳಿಸಿದರು.
ಎಸ್.ಎಸ್.ಎಲ್.ಸಿ. ಪೂರ್ಣಗೊಳಿಸಿದ ವಿದ್ಯಾರ್ಥಿಗಳ ಮುಂದಿನ ಗುರಿ ಹಾಗೂ ಎಸ್.ಎಸ್.ಎಲ್.ಸಿ.ಯಲ್ಲಿ ಪಡೆಯಬಹುದಾದ ನಿರೀಕ್ಷಿತ ಅಂಕಗಳನ್ನು ಅವರಿಂದಲೇ ಬರೆಸಿದ ಫಲಕಗಳನ್ನು ವೀಕ್ಷಿಸಿದ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪಶುವೈದ್ಯಾಧಿಕಾರಿ, ನೇತ್ರ ತಜ್ಞ, ಸಿಬಿಐ ಅಧಿಕಾರಿ, ವಕೀಲ, ನ್ಯಾಯಾಧೀಶ, ಎಸಿಪಿ, ಐಪಿಎಸ್, ಐಎಎಸ್ ಅಧಿಕಾರಿ, ಉಪವಿಭಾಗಾಧಿಕಾರಿ, ಶಿಕ್ಷಕರಾಗಲು ಬಯಸಿ ಒಬ್ಬೊಬ್ಬ ವಿದ್ಯಾರ್ಥಿಗಳು ಒಂದೊಂದು ಗುರಿಯನ್ನು ಬರೆದಿದ್ದರು.
ವಸತಿ ಶಾಲೆಯ 9 ರಿಂದ 1೦ನೇ ತರಗತಿಗೆ ಭೇಟಿ ನೀಡಿದ ಅವರು ವಿದ್ಯಾರ್ಥಿಗಳಿಗೆ ಗಣಿತ ಹಾಗೂ ವಿಜ್ಞಾನ ವಿಷಯದ ಪ್ರಶ್ನೆಗಳನ್ನು ಕೇಳಿದರು.
ವಿದ್ಯಾರ್ಥಿಗಳಿಂದ ಬೋರ್ಡ್ ಮೇಲೆ ಗಣಿತ ವಿಷಯದಲ್ಲಿ ಭಾಗಾಕಾರ, ಬೀಜಗಣಿತದ ಲೆಕ್ಕ ಮಾಡಿಸಿದರು. ವಿಜ್ಞಾನ ವಿಷಯದಲ್ಲಿ ಕಿಡ್ನಿ ಹಾಗೂ ಜೀರ್ಣಕ್ರಿಯಾ ಚಿತ್ರಗಳನ್ನು ಬಿಡಿಸಿದರು. ಕಿಡ್ನಿ ಚಿತ್ರ ಬಿಡಿಸಿದ ಎನ್. ಲಕ್ಷ್ಮಿ ಹಾಗೂ ಜೀರ್ಣಕ್ರಿಯೆ ಚಿತ್ರ ಬಿಡಿಸಿದ ತಪಸ್ವಿ ಅವರಿಗೆ ವೆರಿಗುಡ್ ಎಂದು ಹೇಳಿ ಹುರಿದುಂಬಿಸಿದರು. ಆಂಗ್ಲ ಭಾಷಾ ವಿಷಯದಲ್ಲಿ ವ್ಯಾಕರಣ ತಪ್ಪು ಹೇಳಿದ ವಿದ್ಯಾರ್ಥಿನಿಗೆ ತರಗತಿಯಲ್ಲಿ ಬೋಧಿಸಿದ ವಿಷಯಗಳನ್ನು ಪ್ರತೀ ದಿನ ಪುನರ್‌ಮನನ ಮಾಡಬೇಕೆಂದು ಕಿವಿ ಮಾತು ಹೇಳಿದರು.