ತುರುವೇಕೆರೆ: ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಕೊಡಗೀಹಳ್ಳಿ ಗ್ರಾಮ ಪಂಚಾಯ್ತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶೋಭಾಸೀನಾಚಾರ್ ಅವರನ್ನು ಸನ್ಮಾನಿಸಲಾಯಿತು.
ಪಟ್ಟಣದ ಬಾವಿಕೇರಿಯ ಶ್ರೀ ಕಾಳಿಕಾಂಬ ವಿಶ್ವಕರ್ಮ ಸಮುದಾಯ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಶೋಭಾ ಸೀನಾಚಾರ್ ಅವರನ್ನು ಶಾಲು ಹೊದಿಸಿ, ಫಲಪುಷ್ಪ ಕಾಣಿಕೆ ನೀಡಿ ಗೌರವಿಸಲಾಯಿತು.
ಸಮಾರಂಭ ಕುರಿತು ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಟಿ.ಎನ್. ಅರುಣ್ ಕುಮಾರ್ ಮಾತನಾಡಿ, ಅಂದು ವಿಶ್ವಕರ್ಮ ಸಮುದಾಯ ಕೇವಲ ದೇವರ ವಿಗ್ರಹ, ಮರಗೆಲಸದಂತಹ ಕುಶಲ ಕೆಲಸಗಳಿಗೆ ಸೀಮಿತವಾಗಿತ್ತು . ಆದರೆ ಇಂದು ಸಮುದಾಯದ ಅನೇಕರು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದಿದ್ದಾರೆ. ಆ ಸಾಲಿನಲ್ಲಿ ಕೊಡಗೀಹಳ್ಳಿ ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಶೋಭಾ ಸೀನಾಚಾರ್ ಆಯ್ಕೆಯಾಗಿರುವುದು ವಿಶ್ವಕರ್ಮ ಸಮುದಾಯಕ್ಕೆ ಬಹಳ ಸಂತೋಷವನ್ನುಂಟು ಮಾಡಿದೆ ಎಂದರು.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಅಧಿಕಾರ ಎಲ್ಲಾ ವರ್ಗಕ್ಕೂ ದೊರೆಯಬೇಕೆಂಬ ಆಶಯದಿಂದ ಜಾರಿಗೊಳಿಸಿದ ರಾಜಕೀಯ ಮೀಸಲಾತಿ ಇಂದು ಹಿಂದುಳಿದ ವರ್ಗಗಳು ರಾಜಕೀಯ ಅಧಿಕಾರವನ್ನು ಪಡೆಯಲು ಸಾಧ್ಯವಾಗಿದೆ ಎಂದ ಅವರು, ಕೊಡಗೀಹಳ್ಳಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಶೋಭಾ ಸೀನಾಚಾರ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಉತ್ತಮ ಜನಪರ ಕೆಲಸಗಳನ್ನು ಮಾಡಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ದೇವರಾಜ್, ಉಪಾಧ್ಯಕ್ಷರಾದ ಪ್ರೇಮ್ ಕುಮಾರ್, ನಾಗರಾಜಾಚಾರ್, ಕಾರ್ಯದರ್ಶಿ ಸತೀಶ್, ಖಜಾಂಚಿ ಸೀನಾಚಾರ್, ಸಂಘಟನಾ ಕಾರ್ಯದರ್ಶಿ ಗೌತಮ್, ಬಸವರಾಜ್, ನಂದೀಶ್, ಚಂದ್ರಶೇಖರ್, ಸದಸ್ಯರಾದ ಯಶವಂತ್, ವಾಸು, ಮಂಜುನಾಥ್, ಬಸವರಾಜು, ರಂಜಿತ್ ಹಾಗೂ ಶ್ರೀನಿವಾಸ ಭಜನಾ ಮಂಡಳಿಯ ಮಹಿಳಾ ಸದಸ್ಯರಯಗಳು ಉಪಸ್ಥಿತರಿದ್ದರು.