ಬೆಂಗಳೂರು:-ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಹೈ ರೆಸ್ಯೂಲೇಷನ್ ಜಾಮರ್‌ಗಳನ್ನು ಅಳವಡಿಸಿದ್ದರಿಂದ ನೆರೆಹೊರೆಯ ನಿವಾಸಿಗಳಿಗೆ ತೊಂದರೆಯಾಗಿದ್ದು, ಇದನ್ನು ನಿವಾರಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದ ರಾಷ್ಟ್ರಪತಿಗಳ ಸುಧರಣಾ ಸೇವೆ ಪದಕ ಹಾಗೂ ಮುಖ್ಯಮಂತ್ರಿಗಳ ಪದಕ ಪ್ರಧಾನ ಮತ್ತು ಸನ್ನಡತೆಯ ಶಿಕ್ಷಾ ಬಂಧಿಗಳ ಅವಧಿಪೂರ್ವ ಬಿಡುಗಡೆ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಈ ಹಿಂದೆ ಜೈಲಿನ ಒಳಗೆ ಫೋನ್ ತಂದುಕೊಡುತ್ತಾರೆ. ಕೈದಿಗಳು ಹೊರಗಿನವರ ಜೊತೆ ಸಂಪರ್ಕ ಮಾಡುತ್ತಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಜೈಲಿನಲ್ಲಿ ಬೇರೆ ರಾಜ್ಯದ ಕೈದಿಗಳು ಇದ್ದಾರೆ. ಇಂತಹ ಸಂದರ್ಭದಲ್ಲಿ ಜಾಮರ್ ಅಳವಡಿಸುವುದರಿಂದ ಅಕ್ರಮಗಳನ್ನು ತಡೆಗಟ್ಟಬಹುದು ಎಂದರು.
ಹೈ ರೆಸ್ಯೂಲ್ಯೂಷನ್ ಜಾಮರ್ ಹಾಕಿರುವುದರಿಂದ ಸುಮಾರು 800 ಮೀಟರ್ ವ್ಯಾಪ್ತಿಯವರೆಗೂ ಕಾರ್ಯನಿರ್ವಹಿಸುತ್ತದೆ. ಸ್ವಾಭಾವಿಕವಾಗಿ ಕಾಂಪೌಂಡ್‌ನಿಂದ ಹೊರಗು ವ್ಯಾಪಿಸಿರುವುದರಿಂದ ಜನರಿಗೆ ತೊಂದರೆಯಾಗಿತ್ತು. ಜಾಮರ್ ಕಾರ್ಯನಿರ್ವಹಣೆಯ ವ್ಯಾಪ್ತಿಯನ್ನು 100 ಮೀಟರ್‌ಗೆ ಇಳಿಸಲಾಗಿದೆ. ಜಾಮರ್‌ಗಳನ್ನು ತೆಗೆಯುವುದಿಲ್ಲ ಎಂದು ತಿಳಿಸಿದರು.
ಇಲಾಖೆಯಲ್ಲಿ ಬದಲಾವಣೆಯನ್ನು ತರಲು ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ಸನ್ನಡತೆಯ ಬಿಡುಗಡೆ ಹೊಂದಿರುವ ಸತೀಶ್ ಎಂಬಾತ ‘ತಾನು ಕಾನೂನು ಡಿಪ್ಲೋಮಾ ಮುಗಿಸಿದ್ದೇನೆ. ಹೊರಗಡೆ ಹೋದಾಗ ಜೀವನಕ್ಕೆ ಉಪಯೋಗವಾಗುತ್ತದೆ’ ಎಂದು ಹೇಳಿದ್ದಾನೆ. ಬಹಳ ಜನ ಪರಿವರ್ತನೆ ಹೊಂದಲು ಇಂತಹ ಅವಕಾಶ ಕಲ್ಪಿಸಿಕೊಡುತ್ತೇವೆ. ಕಾರ್ಪೆಂಟರ್, ಎಲೆಕ್ಟ್ರಿಕ್ ಕೆಲಸ, ಕಂಪ್ಯೂಟರ್ ತರಬೇತಿ ಕಲಿಸಿಕೊಡುತ್ತೇವೆ. ಕೈದಿಗಳು ಬದಲಾವಣೆ ಹೊಂದಲು ಅವಕಾಶವಾಗುತ್ತದೆ ಎಂದು ಹೇಳಿದರು.
ನಟ ದರ್ಶನ್‌ಗೆ ರಾಜಾತೀಥ್ಯ ಸಿಗುತ್ತಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು ಜೈಲಿನ ಒಳಗೆ ನೇರವಾಗಿ ಬರಲು ನನಗೆ ಅವಕಾಶವಿಲ್ಲ. ಊಟ ಉಪಚಾರ ವಿಚಾರದಲ್ಲಿ ಬೇರೆ ರೀತಿ ಅತೀಥ್ಯ ನೀಡಿಲ್ಲ. ಜೈಲಿನಲ್ಲಿರುವ ಎಲ್ಲರಂತೆಯೇ ದರ್ಶನ್‌ಗೆ ವ್ಯವಸ್ಥೆ ಇದೆ. ಬಿರಿಯಾನಿ ಕೊಟ್ಟರು ಎಂದು ಕೆಲವರು ಆರೋಪಿಸಿದ್ದಾರೆ. ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.