ಡಾ.ಲಕ್ಷ್ಮೀ ಸಾಗರ್ ಅವರಿಗೆ ಶ್ರೇಷ್ಠ ವೈದ್ಯ ಪ್ರಶಸ್ತಿ ಸಾರ್ವಜನಿಕರಿಂದ ಅಭಿನಂದನೆ

ಕಡಬ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಲಕ್ಷ್ಮೀ ಸಾಗರ್ ಅವರಿಗೆ ಸರ್ಕಾರ ಶ್ರೇಷ್ಠ ವೈದ್ಯ ಪ್ರಶಸ್ತಿ ನೀಡಿರುವ ಹಿನ್ನೆಲೆಯಲ್ಲಿ ಕಡಬ ಸುತ್ತಮುತ್ತಲ ಸಾರ್ವಜನಿಕರು ಅವರಿಗೆ ಅಭಿನಂದನೆ ಸಲ್ಲಿಸಿದರು

 

ಕಡಬ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರಿಂದ ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲ್ಲೂಕು ಆರೋಗ್ಯಾಧಿಕಾರಿ
ಡಾ ಬಿಂದು ಮಾಧವ್
ಸರ್ಕಾರಿ ಆಸ್ಪತ್ರೆಗಳೆಂದರೆ ಜನರು ಮೂಗು ಮುರಿಯುತ್ತಾರೆ. ಇಂತಹ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲೂ ಸಹ ಉತ್ತಮ ವೈದ್ಯರಿದ್ದು ಗ್ರಾಮೀಣ ಭಾಗದ ಜನತೆಗೆ ಗುಣಮಟ್ಟದ ಚಿಕಿತ್ಸೆಯನ್ನು ನೀಡುತ್ತಿದ್ದು ಅದರಲ್ಲೂ ವಿಶೇಷವಾಗಿ
ಕಡಬ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ.ಲಕ್ಷ್ಮಿ ಸಾಗರ್ ಅವರು ಈ ಭಾಗದ ಜನತೆಗೆ ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ಶ್ರೇಷ್ಠ ವೈದ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಡಾ.ಲಕ್ಷ್ಮಿ ಸಾಗರ್ ಅವರು ತುಮಕೂರು ಜಿಲ್ಲೆಯ ಕುಣಿಗಲ್ ನ ನಿಡಸಾಲೆ, ತುರುವೇಕೆರೆ ತಾಲೂಕಿನ ಸಂಪಿಗೆ ಹಾಗೂ ಇದೇ ತಾಲೂಕಿನ ತ್ಯಾಗಟೂರಿನಲ್ಲಿ ಸೇವೆ ಸಲ್ಲಿಸಿ ಕಳೆದ ಹತ್ತು ವರ್ಷಗಳಿಂದ ಗುಬ್ಬಿ ತಾಲೂಕಿನ ಕಡಬ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಉತ್ತಮ ವೈದ್ಯಕೀಯ ಸೇವೆಯನ್ನು ಪರಿಗಣಿಸಿ, ರಾಜ್ಯ ಸರ್ಕಾರ ಶ್ರೇಷ್ಠ ವೈದ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

 

ವೈದ್ಯೋ ನಾರಾಯಣ ಹರಿ ಎನ್ನುವಂತೆ ವೈದ್ಯರನ್ನು ರೋಗಿಗಳ ಪಾಲಿನ ದೇವರು ಎನ್ನಲಾಗುತ್ತದೆ. ಡಾ.ಲಕ್ಷ್ಮಿ ಸಾಗರ್ ಅವರು ಗ್ರಾಮೀಣ ಭಾಗದ ಜನರಿಗೆ ಉತ್ತಮ ಸರ್ಕಾರಿ ವೈದ್ಯರಾಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡುತ್ತ ಬಂದಿದ್ದಾರೆ. ಕಡಬ ಸುತ್ತಮುತ್ತಲ ಗ್ರಾಮೀಣ ಪ್ರದೇಶದ ಜನರು ಇವರ ಬಳಿಗೆ ಬಂದು ಆರೋಗ್ಯ ಸೇವೆಯನ್ನು ಪಡೆಯುತ್ತಿದ್ದಾರೆ. ಇವರ ಬಳಿ ಚಿಕಿತ್ಸೆ ಪಡೆದ ರೋಗಿಗಳು ಬೇಗ ಗುಣಮುಖರಾಗಿರುವ ನಿದರ್ಶನಗಳು ಸಾಕಷ್ಟಿವೆ ಇಲ್ಲಿಗೆ ಬರುವ ಜನರಿಗೆ ಉತ್ತಮ ವೈದ್ಯಕೀಯ ಸೇವೆಯನ್ನು ನೀಡುವ ಮೂಲಕ ರೋಗಿಗಳ ಪಾಲಿನ ಶ್ರೇಷ್ಠ ವೈದ್ಯ ಎನಿಸಿಕೊಂಡಿರುವುದು ನಮಗೆಲ್ಲಾ ಸಂತಸದ ವಿಷಯವಾಗಿದೆ.

 

ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಿಗೆ ಹೋಗಲು ವೈದ್ಯರು
ಹಿಂಜರಿಯುತ್ತಾರೆ ಇಂತಹ ಕಾಲಘಟ್ಟದಲ್ಲಿ ವೈದ್ಯ ಡಾ.ಲಕ್ಷ್ಮಿ ಸಾಗರ್ ಅವರು ಇಲ್ಲಿಗೆ ಬರುವ ರೋಗಿಗಳ ಆರೋಗ್ಯ ದೃಷ್ಟಿಯಿಂದ ಆಸ್ಪತ್ರೆಯಲ್ಲಿ ಉತ್ತಮ ಸ್ವಚ್ಛತೆ ಕಾಪಾಡಿದ್ದು, ಆಸ್ಪತ್ರೆಯ ಆವರಣದಲ್ಲಿ ಸಣ್ಣ ಪ್ರಮಾಣದಲ್ಲಿ ಪಾರ್ಕ್ ನಿರ್ಮಾಣ ಮಾಡುವ ಮೂಲಕ ವೈದ್ಯ ಲೋಕದಲ್ಲಿ ವಿಶೇಷ ಗಮನ ಸೆಳೆದಿದ್ದಾರೆ.

 

ಕಡಬ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹೊರ ರೋಗಿಗಳ ವಿಭಾಗದಲ್ಲಿ 150 ರಿಂದ 200 ಜನರು ಚಿಕಿತ್ಸೆ ಪಡೆದರೆ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಒಂದು ವರ್ಷದಲ್ಲಿ 3862 ಜನರಿಗೆ ಚಿಕಿತ್ಸೆ ನೀಡಲಾಗಿದೆ. ಇನ್ನೂ ಎನ್ ಕ್ಯೂ ಎ ಎಸ್ ನಿಂದ ಉತ್ತಮ ಆಸ್ಪತ್ರೆ ಮತ್ತು ಗುಣಮಟ್ಟ ಚಿಕಿತ್ಸೆ ನೀಡಿ ಮೇಲಾಧಿಕಾರಿಗಳ ಮನ್ನಣೆ ಪಡೆಯುವುದಲ್ಲದೆ ಜನಸಮುದಾಯದಿಂದಲೂ ಉತ್ತಮ ಹೆಸರು ಪಡೆದುಕೊಂಡಿದ್ದಾರೆ ಡಾ.ಲಕ್ಷ್ಮೀ ಸಾಗರ್ ಅವರ ವೈದ್ಯಕೀಯ ಸೇವೆ ಇತರೆ ವೈದ್ಯರಿಗೂ ಸ್ಪೂರ್ತಿಯಾಗಲಿ ಎಂದು ತಿಳಿಸಿದರು.

 

ಶ್ರೇಷ್ಠ ವೈದ್ಯ ಪ್ರಶಸ್ತಿ ಪಡೆದ ಡಾ.ಲಕ್ಷ್ಮೀ ಸಾಗರ್ ಮಾತನಾಡಿ
ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ವೈದ್ಯ ವೃತ್ತಿ ನನಗೆ ತೃಪ್ತಿ ನೀಡಿದೆ. ಈ ಪ್ರಶಸ್ತಿ ಬಂದಿರುವುದು ನನಗೆ ಖುಷಿಯಾಗಿದೆ. ಹಾಗೂ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಮುಂದಿನ ದಿನಗಳಲ್ಲೂ ನಾನು ಪ್ರಾಮಾಣಿಕವಾಗಿ ಗ್ರಾಮೀಣ ಭಾಗದ ಜನರ ಸೇವೆ ಮಾಡಲು ಉತ್ಸುಕನಾಗಿದ್ದೇನೆ ಗ್ರಾಮೀಣ ಭಾಗದ ಜನತೆ ಯಾವುದೇ ಸಂಕೋಚವಿಲ್ಲದೆ ಸರ್ಕಾರಿ ಆಸ್ಪತ್ರೆಯ ಸೇವೆ ಪಡೆಯಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಅಭಿನಂದನಾ ಕಾರ್ಯಕ್ರಮದಲ್ಲಿ ಕಡಬ ಹೋಬಳಿಯ ಹಲವಾರು ಮುಖಂಡರು, ಸಾರ್ವಜನಿಕರು, ಕಡಬ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು, ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!