ಉದ್ಯೋಗ, ಅಧಿಕಾರ ಯಾವತ್ತೂ ಅಳತೆಗೋಲಾಗಬಾರದು. ಎಲ್ಲರನ್ನೂ ಸಮಾನವಾಗಿ ಕಾಣಬೇಕು ಶ್ರೀ ಸಿದ್ದಲಿಂಗ ಸ್ವಾಮೀಜಿ

ತುಮಕೂರು- ಉದ್ಯೋಗ, ಅಧಿಕಾರ ಯಾವತ್ತೂ ಕೂಡ ಅಳತೆಗೋಲಾಗಬಾರದು. ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಕರೆ ನೀಡಿದರು.

 

 

ನಾವು ಮಾಡುವ ಉದ್ಯೋಗದಲ್ಲಿ ದಿವಾನ ಆದರೂ ಸರಿ, ಜವಾನ ಆದರೂ ಸರಿ ಎಲ್ಲರಿಗೂ ಸಮಾನವಾದಂತಹ ಅವಕಾಶ ಕಲ್ಪಿಸಿಕೊಟ್ಟಾಗ ಮಾತ್ರ ಬಸವಣ್ಣನ ಸಮಾನತೆ ಸಂದೇಶ ಸಾರ್ಥಕತೆ ಪಡೆಯುತ್ತದೆ ಎಂದು ಅವರು ಹೇಳಿದರು.

ನಗರದ ಎಸ್ಐ ಟಿ ಯ ಬಿರ್ಲಾ ಆಡಿಟೋರಿಯಂನಲ್ಲಿ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ಬೋಧಕೇತರ ಸಂಘದ ವತಿಯಿಂದ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

12ನೇ ಶತಮಾನದ ಬಸವಣ್ಣನವರ ತತ್ವಾದರ್ಶ ಇಂದಿಗೂ ಹೆಚ್ಚು ಪ್ರಸ್ತುತ. ಅವರು ಸಾರಿದ ಸಮಾನತೆ, ಕಾಯಕವೇ ಕೈಲಾಸ ಸಂದೇಶವನ್ನು ನಾವೆಲ್ಲೂ ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ಸಮಾಜದಲ್ಲಿ ಸಮಾನತೆಯನ್ನು ಕಾಣಲು ಸಾಧ್ಯವಾಗುತ್ತದೆ ಎಂದರು.

ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ಬೋಧಕೇತರ ಸಂಘ ಬಸವ ಜಯಂತಿ ಆಚರಣೆ ಮಾಡುತ್ತಿರುವುದು ಬಹಳ ಸಂತಸದ ಸಂಗತಿ ಎಂದು ಹೇಳಿದರು.

ಸಮಾರಂಭ ಉದ್ಘಾಟಿಸಿದ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಈಗಿನ ಸಂಸತ್ ಮಾದರಿಯಲ್ಲಿ ಅನುಭವ ಮಂಟಪವನ್ನು ನಿರ್ಮಾಣ ಮಾಡಿದರು. ಅಲ್ಲಿ ಎಲ್ಲರಿಗೂ ಸಮಾನವಾದ ಅವಕಾಶ ಕಲ್ಪಿಸಿಕೊಟ್ಟರು. ಅದೇ ಮಾದರಿಯಲ್ಲಿ ಪರಮಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ ಬದುಕಿ ಎಲ್ಲರಿಗೂ ಸಮಾನ ಅವಕಾಶದ ವಾತಾವರಣ ಸೃಷ್ಠಿಸಿಕೊಟ್ಟರು ಎಂದರು.

ಶಿವಕುಮಾರ ಶ್ರೀಗಳ ತತ್ವಾದರ್ಶ, ನೀತಿ ನಿಯಮಗಳನ್ನು ಯಥಾವತ್ತಾಗಿ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲಾ ನಡೆಯುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಟಿ.ಕೆ. ನಂಜುಡಪ್ಪ, ಎಸ್ಐಟಿ ನಿರ್ದೇಶಕ ಡಾ. ಎಂ.ಎನ್. ಚನ್ನಬಸಪ್ಪ, ಸಿಇಓ ಡಾ. ಶಿವಕುಮಾರಯ್ಯ, ಪ್ರಾಂಶುಪಾಲರಾದ ಪ್ರೊ. ಡಾ. ದಿನೇಶ್, ಕೋ.ರ೦. ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.

ನಂತರ ನಡೆದ ಜಗಜ್ಯೋತಿ ಬಸವೇಶ್ವರ ನಾಟಕ ಪ್ರದರ್ಶನದ ಸಂದರ್ಭದಲ್ಲಿ ಆಗಮಿಸಿದ ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್. ಮಂಜುನಾಥ್ ಅವರನ್ನು ಸಂಘದ ವತಿಯಿಂದ ಶ್ರೀಗಳು ಗೌರವಿಸಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಎಸ್ಐಟಿ ಬೋಧಕೇತರ ಸಂಘದ ಅಧ್ಯಕ್ಷ ರೇಣುಕಯ್ಯ, ಕಾರ್ಯದರ್ಶಿ ಎಂ.ಪಿ. ಉಮಾಶಂಕರ್, ಖಚಾಂಜಿ ಗುರುಚನ್ನಬಸಪ್ಪ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *