ತುಮಕೂರು: ಕಾರ್ಗಿಲ್ ೨೫ನೇ ವಿಜಯೋತ್ಸವ ಆಚರಣೆ ಸಂಬಂಧಪಟ್ಟಂತೆ ನಗರದ ಅಮಾನಿಕೆರೆಯಲ್ಲಿ ಹಾಲಪ್ಪ ಪ್ರತಿಷ್ಠಾನದ ವತಿಯಿಂದ ಆಯೋಜಿಸುವ ಕಾರ್ಯಕ್ರಮದ ಸಂಬಂಧ ಇಂದು ಮುರುಳೀಧರ ಹಾಲಪ್ಪ ಮತ್ತು ಟೂಡಾ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.
ತುಮಕೂರು ಅಮಾನಿಕೆರೆಯ ಧ್ವಜ ಸ್ತಂಭ ಮತ್ತು ಹುತಾತ್ಮರ ಸ್ಮಾರಕದ ಬಳಿ ಜುಲೈ ೨೫ ರಂದು ವಿವಿಧ ಕಾರ್ಯಕ್ರಮಗಳನ್ನು ಎನ್.ಸಿ.ಸಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದು, ಸದರಿ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ದಪಡಿಸುವ ಸಲುವಾಗಿ ಟೂಡಾ ಆಯುಕ್ತರಾದ ಡಾ.ಬಸಂತಿ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಮುರುಳೀಧರ ಹಾಲಪ್ಪ ಸ್ಥಳ ವೀಕ್ಷಿಸಿದರು.
ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಎನ್.ಸಿ.ಸಿ.ಸಹಯೋಗದಲ್ಲಿ ಹಾಲಪ್ಪ ಪ್ರತಿಷ್ಠಾನದ ವತಿಯಿಂದ ಕಾರ್ಗಿಲ್ ಯುದ್ದದ ೨೫ನೇ ವಿಜಯೋತ್ಸವವನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರ ಹಿಂದಿನ ಉದ್ದೇಶ ತುಮಕೂರು ಜಿಲ್ಲೆಯ ಯುವಜನರನ್ನು ಸೇನೆಗೆ ಸೇರಲು ಪ್ರೋತ್ಸಾಹಿಸುವುದು, ನ್ಯಾಷನಲ್ ಡಿಫೇನ್ಸ್ ಅಕಾಡೆಮಿ ಕುರಿತು ಮಾಹಿತಿ ನೀಡುವುದು, ಆ ಮೂಲಕ ಯುವಜನರನ್ನು ಸೇನೆಯತ್ತ ಸೆಳೆಯುವುದಾಗಿದೆ. ಮುಂದಿನ ಒಂದು ವರ್ಷದಲ್ಲಿ ಕನಿಷ್ಠ ತುಮಕೂರು ಜಿಲ್ಲೆಯ ೧ ಸಾವಿರ ಮಂದಿ ಸೇನೆ ಸೇರುವಂತೆ ಮಾಡಬೇಕೆಂಬ ಬಯಕೆ ನಮ್ಮದು, ಯುವಜನರಿಗೆ ಸ್ಪೂರ್ತಿ ನೀಡುವ ಉದ್ದೇಶದಿಂದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಜುಲೈ ೨೫ರಂದು ಎನ್.ಸಿ.ಸಿ.ಯ ಕೆಡೆಟ್‌ಗಳು ಗಣರಾಜೋತ್ಸವ ಪೆರೇಡ್‌ನಲ್ಲಿ ಪ್ರದರ್ಶಿಸಿದ ಕಾರ್ಗಿಲ್ ಯುದ್ದದ ಅಣುಕು ಪ್ರದರ್ಶನವನ್ನು ಪ್ರದರ್ಶಿಸಲಿದ್ದಾರೆ. ಅದು ಹುತ್ಮಾತ್ಮರ ಸ್ಮಾರಕದ ಬಳಿ ನಡೆಯುವುದರಿಂದ ಈ ಭಾಗದಲ್ಲಿ ಬೆಳೆದಿರುವ ಕಳೆ ಗಿಡಗಳನ್ನು ತೆಗೆಸಿ ಸ್ವಚ್ಚವಾಗಿರಿಸಲು ಟೂಡಾ ಅಧಿಕಾರಿಗಳಿಗೆ ಕೋರಿದ್ದೇವೆ. ಅವರು ಸಹ ನಮ್ಮೊಂದಿಗೆ ಆಗಮಿಸಿ, ವೀಕ್ಷಿಸಿದ್ದು, ಸ್ವಚ್ಚಗೊಳಿಸುವ ಭರವಸೆ ನೀಡಿದ್ದಾರೆ. ಇದೊಂದು ಯುವಜನರ ಮನಸ್ಸಿನಲ್ಲಿ ಉಳಿಯುವಂತಹ ಕಾರ್ಯಕ್ರಮವಾಗ ಬೇಕೆಂಬುದು ನಮ್ಮ ಮನದಾಳದ ಇಚ್ಚೆಯಾಗಿದೆ ಎಂದರು.
ಟೂಡಾ ಆಯುಕ್ತರಾದ ಡಾ.ಬಸಂತಿ ಮಾತನಾಡಿ, ಎನ್.ಸಿ.ಸಿ.ಅಧಿಕಾರಿಗಳು ಮತ್ತು ಹಾಲಪ್ಪ ಪ್ರತಿಷ್ಠಾನದ ಕೋರಿಕೆಯಂತೆ ಈ ಜಾಗದಲ್ಲಿ ೬೦೦-೭೦೦ ಜನರು ಕುಳಿತು ಕಾರ್ಯಕ್ರಮ ವೀಕ್ಷಿಸಲು ಅನುಕೂಲವಾಗುವಂತೆ ಎಲ್ಲಾ ಸಿದ್ದತೆಗಳನ್ನು ಟೂಡಾ ಮಾಡಿಕೊಡಲಿದೆ ಎಂದರು.