ಸರ್ಕಾರದ ರೈತ ವಿರೋಧಿ ನೀತಿಗೆ ಬಿಜೆಪಿ ರೈತ ಮೋರ್ಚಾ ಖಂಡನೆ
ತುಮಕೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಸುಗಳನ್ನು ತಂದು ಕಟ್ಟಿ, ಹಾಲು ಕರೆದು ಜಿಲ್ಲಾಧಿಕಾರಿಗಳಿಗೆ ಹಾಲು ನೀಡಿ ವಿನೂತನ ಪ್ರತಿಭಟನೆ ನಡೆಸಿದರು.
ಹಾಲು ಉತ್ಪಾದಕರಿಗೆ ನೀಡಬೇಕಾಗಿರುವ 900 ಕೋಟಿ ರೂ. ಹಾಲಿನ ಪ್ರೋತ್ಸಾಹಧನ ಬಿಡುಗಡೆ ಸೇರಿದಂತೆ, ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಬಿಜೆಪಿ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಗೆ ರಾಸುಗಳನ್ನು ತರುವುದಕ್ಕೆ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದಾಗ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಹೋರಾಟಗಾರರಿಗೆ ಮಣಿದ ಪೊಲೀಸರು ಹಸುಗಳನ್ನು ತರಲು ಅವಕಾಶ ಮಾಡಿಕೊಟ್ಟರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಜಿ.ಅರಿವೇಸಂದ್ರ ಸಿದ್ದರಾಮಯ್ಯ ಮೊದಲಾದವರು ಹಸುಗಳಿಂದ ಹಾಲು ಕರೆದು, ಜಿಲ್ಲಾಧಿಕಾರಿಗಳಿಗೆ ಹಾಲು ಹಾಗೂ ಮನವಿಪತ್ರ ನೀಡಿ ರೈತರ ಸಂಕಷ್ಟವನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜನವಿರೋಧಿ ನೀತಿಗಳನ್ನೇ ಅನುಸರಿಸಿಕೊಂಡು ಬರುತ್ತಿದೆ, ಅದರ ವಿರುದ್ಧ ಬಿಜೆಪಿ ಬೀದಿಗಿಳಿದು ನಿರಂತರ ಹೋರಾಟ ಮಾಡಿಕೊಂಡೇ ಬರುತ್ತಿದೆ. ಹಿಂದಿನ ಬಿಜೆಪಿ ಸರ್ಕಾರ ರೈತರಿಗೆ ಜಾರಿಗೆ ತಂದಿದ್ದ ಅನೇಕ ಯೋಜನೆಗಳನ್ನು ಈ ಸರ್ಕಾರ ಸ್ಥಗಿತಗೊಳಿಸಿದೆ. ಯಾವುದೇ ಯೋಜನೆ ಅನುಷ್ಠಾನ ಮಾಡದೆ ರೈತರಿಗೆ ವಿಷವುಣಿಸಿ ಬದುಕಲಾರದ ಸ್ಥಿತಿಗೆ ತಂದು ನಿಲ್ಲಿಸಿದೆ ಎಂದು ಹೇಳಿದರು.
ಹಾಲು ಉತ್ಪಾದಕರಿಗೆ ಕೊಡಬೇಕಾಗಿರುವ 900 ಕೋಟಿ ರೂ. ಪ್ರೋತ್ಸಾಹಧನ ನೀಡಿಲ್ಲ, ಚುನಾವಣೆ ಸಂದರ್ಭದಲ್ಲಿ ಎರಡು ಕಂತಿನ ಗೃಹಲಕ್ಷಿ ಹಣ ಹಾಕಲು ಸರ್ಕಾರದ ಬಳಿ ದುಡ್ಡು ಇತ್ತು, ಹಾಲಿನ ಪ್ರೋತ್ಸಾಹ ಧನ ನೀಡಲು ಇರಲಿಲ್ಲವೆ? ರೈತರಿಗೆ ನೀಡಬೇಕಾದ ಹಾಲಿನ ಬೆಲೆಯನ್ನು ಕಮ್ಮಿ ಮಾಡಿದೆ, ಗ್ರಾಹಕರ ಖರೀದಿ ಬೆಲೆಯನ್ನು ಹೆಚ್ಚು ಮಾಡಿ ಎರಡೂ ವರ್ಗಕ್ಕೆ ಸರ್ಕಾರ ಅನ್ಯಾಯ ಮಾಡಿದೆ. ಈ ಸರ್ಕಾರಕ್ಕೆ ಯಾರ ಹಿತವೂ ಬೇಕಾಗಿಲ್ಲ, ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ.ಗಳನ್ನು ಬೇನಾಮಿ ಅಕೌಂಟ್‍ಗಳಿಗೆ ವರ್ಗಾವಣೆ ಮಾಡಿಕೊಂಡು ಚುನಾವಣೆಗೆ ಬಳಿಸಿಕೊಂಡು ಪರಿಶಿಷ್ಟ ವರ್ಗಕ್ಕೆ ಮೋಸ ಮಾಡಿದೆ. ಜನರ ತೆರಿಗೆ ಹಣವನ್ನು ಲೂಟಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದರು.
ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ ಮಾತನಾಡಿ, ರಾಜ್ಯ ಸರ್ಕಾರ ರೈತರಿಗೆ ನಿರಂತರವಾಗಿ ಅನ್ಯಾಯ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರ ರೈತರಿಗೆ ನೀಡುವ 6 ಸಾವಿರ ರೂ. ಜೊತೆಗೆ ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ಕೊಡುತ್ತಿದ್ದ 4 ಸಾವಿರ ರೂ. ಗಳನ್ನು ಈ ಸರ್ಕಾರ ನಿಲ್ಲಿಸಿದೆ. 900 ಕೋಟಿ ರೂ. ಹಾಲಿನ ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡಿದೆ. ಗ್ರಾಹಕರಿಗೆ ಹಾಲಿನ ದರ ಹೆಚ್ಚಳ ಮಾಡಿದೆ, ಹಾಲು ಉತ್ಪಾದಕರಿಗೆ ಲೀಟರ್ ಹಾಲಿಗೆ 1.40 ರೂ. ದರ ಕಡಿಮೆ ಮಾಡಿದೆ. ಬಿತ್ತನೆ ಬೀಜದ ಬೆಲೆ ಏಕೆ 70ರಷ್ಟು ಹೆಚ್ಚಾಗಿದೆ. ರೈತರ ಮಕ್ಕಳಿಗೆ ಅನುಕೂಲವಾಗುತ್ತಿದ್ದ ರೈತ ವಿದ್ಯಾನಿಧಿ ಯೋಜನೆ ನಿಲ್ಲಿಸಲಾಗಿದೆ. ಟ್ರಾನ್ಸ್‍ಫಾರ್ಮಾರ್‍ಗೆ ದುಪ್ಪಟ್ಟು ಹಣ ನೀಡಬೇಕಾಗಿದೆ ಎಂದು ಹೇಳಿದರು.
ಪೆಟ್ರೋಲ್, ಡೀಸೆಲ್ ಬೆಲೆ, ಮುದ್ರಾಂಕ ಶುಲ್ಕ ದರ, ಆಸ್ತಿ ನೋಂದಣಿ ಶುಲ್ಕ ಶೇಕಡ 30ರಷ್ಟು ಹೆಚ್ಚಾಗಿದೆ. ಎಲ್ಲಾ ಪದಾರ್ಥಗಳ ಬೆಲೆ ಏರಿಸಿ, ರೈತರ ಯೋಜನೆಗಳನ್ನು ಸ್ಥಗಿತಗೊಳಿಸಿ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ. ರಾಜ್ಯದಲ್ಲಿ 824 ರೈತರು ಆತ್ಮಹತ್ಯ ಮಾಡಿಕೊಂಡಿದ್ದಾರೆ. ಈ ಸರ್ಕಾರದಲ್ಲಿ ರೈತರಿಗೆ ಉಳಿಗಾಲವಿಲ್ಲದಂತಾಗಿದೆ. ಸರ್ಕಾರ ಇದೇ ಧೋರಣೆ ಮುಂದುವರೆಸಿದರೆ ಬಿಜೆಪಿ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಿದೆ ಎಂದು ಬ್ಯಾಟರಂಗೇಗೌಡ ಎಚ್ಚರಿಕೆ ನೀಡಿದರು.
ರೈತ ಮೋರ್ಚಾ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್ ಮಾತನಾಡಿ, ಕಿವಿ, ಮೂಗು, ಕಣ್ಣು ಇಲ್ಲದ ನಿರ್ಲಜ್ಜ ಸರ್ಕಾರ ರಾಜ್ಯದಲ್ಲಿದೆ. ಸಿದ್ದರಾಮಯ್ಯ ಸರ್ಕಾರದ ಕಾಂಗ್ರೆಸ್ ನಾಯಕರಿಗೆ ಅಧಿಕಾರ ಉಳಿಸಿಕೊಳ್ಳುವುದರ ಹೊರತು ಜನರ ಸಂಕಷ್ಟ ಬೇಕಾಗಿಲ್ಲ, ರೈತರ ಎಲ್ಲಾ ಯೋಜನೆಗಳಿಗೆ ಕತ್ತರಿ ಹಾಕಿರುವ ಸರ್ಕಾರ ರೈತರ ಮೇಲೆ ಗದಾಪ್ರಹಾರ ಮಾಡುತ್ತಿದೆ. ಮಾನವೀಯತೆ ಇಲ್ಲದ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಮಾಡುವುದು, ಸಾರ್ವಜನಿಕರ ಹಣ ಕೊಳ್ಳೆ ಹೊಡೆಯುವುದನ್ನೇ ಕಾಯಕ ಮಾಡಿಕೊಂಡಿದೆ ಎಂದು ಟೀಸಿದದರು.