ಕರ್ನಾಟಕದಲ್ಲಿ ಕನ್ನಡ ಅನಾಥವಾಗಬಾರದು : ಕನ್ನಡಿಗರು ಜಾಗೃತರಾಗಬೇಕು’

ಕರ್ನಾಟಕದಲ್ಲಿ ಕನ್ನಡ ಅನಾಥವಾಗಬಾರದು, ಕನ್ನಡಿಗರು ಜಾಗೃತರಾಗಬೇಕು. ಬಸವಾದಿ ಶರಣರು, ದಾಸರು, ದಾರ್ಶನಿಕರು ಕಟ್ಟಿ ಬೆಳೆಸಿದ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ನಮ್ಮೆಲ್ಲರದಾಗಬೇಕು. ಈ ಕಾರ್ಯದಲ್ಲಿ ವಿದ್ಯಾರ್ಥಿಗಳು, ಪೋಷಕರು ಪ್ರಧಾನ ಪಾತ್ರ ವಹಿಸಬೇಕೆಂದು ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ್ ಬಿಳಿಮಲೆ ತಿಳಿಸಿದರು.

 

 

ಅವರಿಂದು ತುಮಕೂರು ನಗರದ ಕನ್ನಡ ಭವನದಲ್ಲಿ ನಡೆದ “ವೀರ ಸೌಧಾ ಮಿನಿ ಚಿತ್ರಸಂಪುಟ” ಬಿಡುಗಡೆಗೊಳಿಸಿ, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡುತ್ತಿದ್ದರು. ಸ್ಥಳೀಯ ಮಟ್ಟದಲ್ಲಿ ಕನ್ನಡವನ್ನು ಉಳಿಸುವ ಕೆಲಸಗಳು ಆಗಬೇಕಾಗಿದೆ. ಕನಿಷ್ಠ ಐದನೆಯ ತರಗತಿವರೆಗಾದರೂ ಕನ್ನಡ ಭಾಷೆ ಮಾಧ್ಯಮದ ಭಾಷೆಯಾಗಬೇಕು.

 

 

  ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಿ, ಆದರೆ ಮಾಧ್ಯಮ ಕನ್ನಡವೇ ಆಗಿರಲಿ. ಕನ್ನಡ ಭಾಷೆಯ ಕಲಿಕೆಗೆ ಹಾಗೂ ಉಳಿಯುವಿಕೆಗೆ ಪೋಷಕರ ಪಾತ್ರವೇ ಬಹಳ ಮುಖ್ಯವಾಗಿದೆ. ನಮ್ಮ ಸ್ಥಳೀಯ ನೆಲೆಗಳಲ್ಲಿ ಸ್ಥಳನಾಮಗಳನ್ನು ಮೂಲ ರೂಪದಲ್ಲಿಯೇ ಉಳಿಸಿಕೊಳ್ಳಬೇಕು. ಇದನ್ನು ಗ್ರಾಮ ಮಟ್ಟದಿಂದ ರಾಜ್ಯಮಟ್ಟದವರೆಗೂ ಆಂದೋಲನದ ರೀತಿಯಲ್ಲಿ ರೂಪಿಸಬೇಕು. ಅದಕ್ಕೆ ಸ್ಥಳೀಯರು ಕೈಜೋಡಿಸಬೇಕು ಎಂದು ತಿಳಿಸಿದರು.

 

 

 

 

ಸಮಾರಂಭವನ್ನು ಉದ್ಘಾಟಿಸಿದ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಶ್ರೀ ಸಿದ್ಧಲಿಂಗಸ್ವಾಮಿಗಳು ಮಾತನಾಡಿ ಕರ್ನಾಟಕದ ಇತಿಹಾಸದಲ್ಲಿ ಕಿತ್ತೂರು ಸಂಸ್ಥಾನಕ್ಕೆ ತನ್ನದೇ ಆದ ಇತಿಹಾಸವಿದೆ. ರಾಣಿ ಚನ್ನಮ್ಮ ಕನ್ನಡ ನಾಡಿನ ವೀರಮಹಿಳೆ. ಬ್ರಿಟೀಷರ ವಿರುದ್ಧ ಹೋರಾಡುವುದರ ಮೂಲಕ ಹೆಣ್ಣುಮಕ್ಕಳಿಗೆ ಆದರ್ಶ ಪ್ರಿಯರಾಗಿದ್ದು ಇಂತಹ ವೀರಮಹಿಳೆಯ ಜೀವನ ಸಾಧನೆಗಳನ್ನು ಚಿತ್ರಸಂಪುಟದಲ್ಲಿ ಹಿಡಿದಿಟ್ಟಿರುವ ಸಂತೋಷ ಹಾನಗಲ್‍ ರವರ ಪ್ರಯತ್ನ ಸಾರ್ಥಕವಾಗಿದೆ ಎಂದು ತಿಳಿಸಿದರು. ಜೊತೆಗೆ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.

 

 

 

 

ಕನ್ನಡ ಭಾಷೆಯ ಬೆಳವಣಿಗೆಯ ಉದ್ದೇಶದಿಂದಲೇ ನಮ್ಮ ಹಿರಿಯ ಶ್ರೀಗಳು ಕನ್ನಡ ಪಂಡಿತ್ ಕಾಲೇಜು ತೆರೆದರು. ಗ್ರಾಮೀಣ ಹೆಣ್ಣುಮಕ್ಕಳು ಹೆಚ್ಚು ಹೆಚ್ಚು ವಿದ್ಯಾವಂತರಾಗಬೇಕೆಂಬ ದೂರದೃಷ್ಟಿಯಿಂದ ನಮ್ಮ ಸಂಸ್ಥೆಯ ಬಹುತೇಕ ಶಾಲೆಗಳನ್ನು ಗ್ರಾಮಾಂತರ ಪ್ರದೇಶದಲ್ಲಿಯೇ ಪ್ರಾರಂಭಿಸಿದರು ಎಂದು ತಿಳಿಸಿದರು. ಈ ಎಲ್ಲಾ ಶಾಲೆಗಳೂ ಕನ್ನಡ ಮಾಧ್ಯಮ ಶಾಲೆಗಳಾಗಿದ್ದು ಶ್ರೀಗಳವರ ಕನ್ನಡ ಭಾಷೆಯ ಅಭಿಮಾನದ ದ್ಯೋತಕಗಳಾಗಿವೆ ಎಂದು ತಿಳಿಸಿದರು.

 

 

 

ವೀರ ಸೌಧಾಮಿನಿ ಕೃತಿ ಕುರಿತು ಲೇಖಕಿ ಹಾಗೂ ಪತ್ರಕರ್ತೆ ಶ್ರೀಮತಿ ಭಾರತಿ ಹೆಗಡೆ ಮಾತನಾಡಿ ಚಿತ್ರಸಂಪುಟ ಗತಕಾಲದ ಘಟನೆಗಳನ್ನು ನೆನಪಿಗೆ ತರುವುದರ ಜೊತೆಗೆ ಯುದ್ಧದಲ್ಲಿ ಭಾಗಿಯಾಗಿದ್ದ ಚನ್ನಮ್ಮನವರ ಶೌರ್ಯ-ಸಾಹಸಗಳು ಮಕ್ಕಳಿಗೆ ಆದರ್ಶವಾಗಬೇಕೆಂದು ತಿಳಿಸಿದರು.

 

 

 

ಸಮಾರಂಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕಾದರೆ ಕನ್ನಡ ಶಾಲೆಗಳು ಉಳಿದು ಕನ್ನಡ ಮಾಧ್ಯಮದಲ್ಲಿ ವಿದ್ಯಾರ್ಥಿಗಳು ಕಲಿಯಬೇಕು. ರಾಜ್ಯದಲ್ಲಿರುವ ಕನ್ನಡ ಶಿಕ್ಷಕರ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಬೇಕು. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಶಿಷ್ಯವೇತನ ನೀಡಬೇಕೆಂದು ಆಗ್ರಹಿಸಿ. ಜಿಲ್ಲೆಯಲ್ಲಿ ಈ ವರ್ಷ 1000 ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆಯಾಯ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಸನ್ಮಾನಿಸಲಾಗುತ್ತದೆ ಎಂದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ.ಪ್ರದೀಪ್‍ ಕುಮಾರ್, ಅನನ್ಯ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಉಮೇಶ್‍ ರವರು ಮಾತನಾಡಿದರು. ಎಸ್.ಎಸ್.ಎಲ್.ಸಿ.ಯಲ್ಲಿ ನೂರು ಫಲಿತಾಂಶ ಬಂದ ಶಾಲೆಗಳಿಗೆ ಹಾಗೂ ಕನ್ನಡ ವಿಷಯದಲ್ಲಿ ಶೇ. 100 ಅಂಕ ಪಡೆದ ಮಕ್ಕಳನ್ನು ಸನ್ಮಾನಿಸಲಾಯಿತು.

 

 

ಕಾರ್ಯದರ್ಶಿ ಡಾ. ಡಿ.ಎನ್.ಯೋಗೀಶ್ವರಪ್ಪ ಸ್ವಾಗತಿಸಿದರು. ತಾಲ್ಲೂಕು ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್ ವಂದಿಸಿದರು. ಸಂಚಾಲಕ ಕೆ.ಎಸ್.ಉಮಾಮಹೇಶ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *