ಸ್ಥಳೀಯವಾಗಿ ಸಮಸ್ಯೆಗಳನ್ನು ಪರಿಹರಿಸಿದಲ್ಲಿ ಜನರು ಸರ್ಕಾರವನ್ನು ದೂರುವುದು ತಪ್ಪುತ್ತದೆ ಜಿಲ್ಲಾಧಿಕಾರಿ ಶುಭಕಲ್ಯಾಣ

ತುಮಕೂರು: ಗ್ರಾಮ ಮಟ್ಟದಲ್ಲಿ ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರುಗಳು ತಮ್ಮ ವ್ಯಾಪ್ತಿಯ ಸಮಸ್ಯೆಗಳನ್ನು ಸ್ಥಳೀಯವಾಗಿ ಪರಿಹರಿಸಿದಲ್ಲಿ ಜನರು ಸರ್ಕಾರವನ್ನು ದೂರುವುದು ತಪ್ಪುತ್ತದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹೇಳಿದರು.

 

 

15 ದಿನದೊಳಗೆ ಅರ್ಜಿ ವಿಲೇವಾರಿಗೆ ಸೂಚನೆಃ
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ತುರುವೇಕೆರೆ ಪಟ್ಟಣದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿಂದು ಆಯೋಜಿಸಿದ್ದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆ ಸೇರಿದಂತೆ ಪಂಚಾಯಿತಿ ಮಟ್ಟದ ಅಧಿಕಾರಿ, ಸಿಬ್ಬಂದಿಗಳು ಜನರಿಂದ ವಿವಿಧ ಸೌಲಭ್ಯ ಕೋರಿ ಸ್ವೀಕೃತವಾದ ಅರ್ಜಿಗಳು ಅರ್ಹವೇ? ಅನರ್ಹವೇ? ಎಂದು ಪರಿಶೀಲಿಸಿ 15 ದಿನಗಳೊಳಗಾಗಿ ವಿಲೇವಾರಿ ಮಾಡಬೇಕು. ಸ್ಥಳೀಯ ಅಧಿಕಾರಿಗಳು ನಿಗಧಿತ ಸಮಯದೊಳಗೆ ವಿಲೇವಾರಿ ಮಾಡದೇ ಹೋದರೆ ಜನರು ಜಿಲ್ಲಾ ಕೇಂದ್ರಕ್ಕೆ ಬರುತ್ತಾರೆ. ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಬಿಟ್ಟು ದೂರದ ಜಿಲ್ಲಾ ಕೇಂದ್ರಕ್ಕೆ ಬರುವುದನ್ನು ತಪ್ಪಿಸಬೇಕು ಎಂದು ತಿಳಿಸಿದರು.

 

 

ಪಿಂಚಣಿ ಸೌಲಭ್ಯ ಮನೆ ಬಾಗಿಲಿಗೆ ತಲುಪಿಸಿಃ
ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುವ ವಿಧವಾ ವೇತನ, ವೃದ್ಧಾಪ್ಯ ವೇತನ ಸೇರಿದಂತೆ ಪಿಂಚಣಿ ಮಂಜೂರಾತಿ ಆದೇಶವನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಬೇಕು.

 

ಅರ್ಹ ಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸಲು ಅಸಡ್ಡೆ ತೋರುವ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದೆಂದರಲ್ಲದೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ವಾರದಲ್ಲಿ 3 ದಿನ ಬೆಳಿಗ್ಗೆ 7 ರಿಂದ 10 ಗಂಟೆಯವರೆಗೂ ತಮ್ಮ ವ್ಯಾಪ್ತಿಯ ರೈತರ ಮನೆಗೆ ಹೋಗಿ ಆಂದೋಲನ ರೀತಿಯಲ್ಲಿ ಬಾಕಿಯಿರುವ ಪೌತಿ ಖಾತೆ, ಆರ್‍ಟಿಸಿ ಇಂಧೀಕರಣ, ಪಹಣಿ, ನಿವೇಶನ ಸೌಲಭ್ಯ ಸೇರಿದಂತೆ ಕಂದಾಯ ವಿಷಯಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ನಿಗಧಿತ ಅವಧಿಯೊಳಗೆ ವಿಲೇವಾರಿ ಮಾಡಬೇಕು ಎಂದು ನಿರ್ದೇಶನ ನೀಡಿದರು.

 

 

ಶುದ್ಧ ಕುಡಿಯುವ ನೀರು ಪೂರೈಸಿಃ
ನಗರ ಪ್ರದೇಶ ಸೇರಿ ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು. ಓವರ್ ಹೆಡ್ ಟ್ಯಾಂಕುಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸುವುದರೊಂದಿಗೆ ಕುಡಿಯಲು ಯೋಗ್ಯವೇ ಎಂದು ಪರೀಕ್ಷೆಗೊಳಪಡಿಸಬೇಕು. ಜನರಿಗೆ ಕುಡಿಯಲು ಯೋಗ್ಯವಾದ ನೀರನ್ನೇ ಸರಬರಾಜು ಮಾಡಬೇಕು. ಈ ನಿಟ್ಟಿನಲ್ಲಿ ಪಂಚಾಯತಿ ಪ್ರತಿನಿಧಿಗಳು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕ್ರಮವಹಿಸಬೇಕು. ಪಂಚಾಯತಿ ಅಧಿಕಾರಿಗಳಿಗೆ ನೀರಿನ ಪರೀಕ್ಷೆ ಕಾರ್ಯವಿಧಾನದ ಬಗ್ಗೆ ಈಗಾಗಲೇ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.

 

 

ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಾಗ ಮಾತ್ರ ಜನ ಸ್ಪಂದನ ಯಶಸ್ವಿ : ಎಂ.ಟಿ.ಕೃಷ್ಣಪ್ಪ
ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಸರ್ಕಾರ ನೇರವಾಗಿ ಜನರ ಬಳಿಗೆ ಬಂದು ಅವರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವುದೇ ಈ ಕಾರ್ಯಕ್ರಮದ ಉದ್ದೇಶವಾಗಿರುವುದರಿಂದ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಾಗ ಮಾತ್ರ ಜನ ಸ್ಪಂದನ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

 

 

ಸಮಸ್ಯೆಗಳನ್ನು ತಳಮಟ್ಟದಲ್ಲಿಯೇ ಬಗೆಹರಿಸಿಃ
ಸಾರ್ವಜನಿಕರ ಸಮಸ್ಯೆಗಳನ್ನು ತಳಮಟ್ಟದಲ್ಲೇ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಮಹತ್ವದ ಕಾರ್ಯಕ್ರಮ ಇದಾಗಿದ್ದು, ಸಾರ್ವಜನಿಕರು ತಮ್ಮ ಕುಂದು ಕೊರತೆಗಳನ್ನು ತಿಳಿಸುವ ಮೂಲಕ ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಮನವಿ ಮಾಡಿದರು.

 

 

ತಾಲ್ಲೂಕಿನಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಪವತಿ ಖಾತೆ, ಪಹಣಿ, ನಕಾಶೆ ರಸ್ತೆ, ವಾಡಿಕೆ ರಸ್ತೆ, ಜಮೀನು ಒತ್ತುವರಿಯಂತಹ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಅವುಗಳನ್ನು ಶೀಘ್ರವಾಗಿ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ತಾಲ್ಲೂಕಿನಲ್ಲಿ ಜೂಜು ಆಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಪೋಲೀಸ್ ಇಲಾಖೆ ಈ ಬಗ್ಗೆ ಸೂಕ್ತ ಕ್ರಮವಹಿಸಬೇಕು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ಅಬ್ದುಲ್ ಖಾದರ್ ಅವರಿಗೆ ನಿರ್ದೇಶಿಸಿದರು.

 

ಜನರು ಆರೋಗ್ಯದ ಕಡೆಗೆ ಹೆಚ್ಚು ಗಮನ ವಹಿಸಬೇಕು. ಮಳೆಯಿಂದಾಗಿ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂ ಜ್ವರ ಹೆಚ್ಚುವ ಭೀತಿಯಿರುವುದರಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿಂದ ಜನರು ಚಿಕಿತ್ಸೆಗಾಗಿ ಪರದಾಡುತ್ತಿದ್ದು, ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

 

 

 

ಸ್ಥಳದಲ್ಲಿಯೇ ಗ್ರಾಮ ನಕ್ಷೆ ವಿತರಣೆಃ
ಸುಮಾರು 56 ಮನೆಗಳುಳ್ಳ ಹೊಸದಾಗಿ ಸೃಜನೆಯಾಗಿರುವ ಕಂದಾಯ ಗ್ರಾಮವಾದ ಲಕ್ಕಿ ರಾಮನಪಾಳ್ಯದ ನಿವಾಸಿಗಳು ಇ-ಖಾತೆ ಮಾಡಿಸಿಕೊಳ್ಳಲು ಗ್ರಾಮನಕ್ಷೆ ಒದಗಿಸುವಂತೆ ಮಾಡಿದ್ದ ಮನವಿಗೆ ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿ ಸ್ಥಳದಲ್ಲಿಯೇ ಶಾಸಕರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮಸ್ಥರಿಗೆ ಗ್ರಾಮ ನಕ್ಷೆಯನ್ನು ವಿತರಣೆ ಮಾಡಿದರು.

 

 

 

ಜನಸ್ಪಂದನದಲ್ಲಿ ವಸತಿ ಸೌಲಭ್ಯ ಕೋರಿ ಬುಗುಡನಹಳ್ಳಿಯ ಲಲಿತಮ್ಮ ಹಾಗೂ ಕೆಂಪ ದೇವಮ್ಮ; ನರೇಗಾ ಯೋಜನೆಯಡಿ ಸಾಮಗ್ರಿ ವೆಚ್ಚ ಬಿಡುಗಡೆ ಮಾಡುವಂತೆ ಕೋರಿ ರಾಮಸಾಗರದ ಶಿವಲಿಂಗಯ್ಯ, ನಿವೇಶನ ನೀಡುವಂತೆ ಕೋರಿ ತುರುವೇಕೆರೆ ಪಟ್ಟಣದ ವನಜಾ, ಒತ್ತುವರಿ ರಸ್ತೆ ಬಿಡಿಸಿಕೊಡುವಂತೆ ಸೀಗೆಹಳ್ಳಿ ಗ್ರಾಮದ ರೈತ ರಂಗಣ್ಣ, ನಳ ಸಂಪರ್ಕ ಕೋರಿ ಕಲ್ಕೆರೆ ಆಸಿಯಾ ಭಾನು ಸೇರಿದಂತೆ ಮತ್ತಿತರರು ಜಿಲ್ಲಾಧಿಕಾರಿಗಳಿಗೆ ತಮ್ಮ ಅಹವಾಲುಗಳನ್ನು ಸಲ್ಲಿಸಿದರು.

 

 

256 ಅರ್ಜಿ ಸ್ವೀಕಾರಃ
ಈ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ 172, ತಾಲ್ಲೂಕು ಪಂಚಾಯತಿ-48, ಪಟ್ಟಣ ಪಂಚಾಯತಿ-17, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ-1, ಸಮಾಜ ಕಲ್ಯಾಣ ಇಲಾಖೆ-1, ಆರೋಗ್ಯ-1, ಸಾರಿಗೆ ಇಲಾಖೆ-1, ಲೋಕೋಪಯೋಗಿ ಇಲಾಖೆ-3, ಭೂ ಮಾಪನ ಇಲಾಖೆ-4, ಬೆಸ್ಕಾಂ-5, ಹೇಮಾವತಿ-1, ಅರಣ್ಯ ಇಲಾಖೆ-1, ಭೂಸ್ವಾಧೀನ ಇಲಾಖೆ-1 ಸೇರಿದಂತೆ ಒಟ್ಟು 256 ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ಈ ಸಂದರ್ಭದಲ್ಲಿ ತಹಶೀಲ್ದಾರ್ ವೈ.ಎಂ.ರೇಣುಕುಮಾರ್, ಭೂದಾಖಲೆಗಳ ಇಲಾಖೆ ಉಪನಿರ್ದೇಶಕ ನಿರಂಜನ್, ರೇಷ್ಮೆ ಉಪ ನಿರ್ದೇಶಕ ಬಾಲಕೃಷ್ಣಪ್ಪ, ಕೃಷಿ ಉಪನಿರ್ದೇಶಕ ಅಶೋಕ್, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕಾಧಿಕಾರಿ ಶಿವರಾಜಯ್ಯ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಪಟ್ಟಣ ಪಂಚಾಯ್ತಿ ಸದಸ್ಯರಾದ ಚಿದಾನಂದ್, ಮಧು ಕುಮಾರ್, ಸುರೇಶ್, ಮಹೇಶ್, ಅಂಜನ್ ಕುಮಾರ್, ಮತ್ತಿತರ ಅಧಿಕಾರಿ-ಸಿಬ್ಬಂದಿಗಳು ಹಾಜರಿದ್ದರು.

Leave a Reply

Your email address will not be published. Required fields are marked *