ನಾಡಹಬ್ಬದಂತೆ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ: ಧನಪಾಲ್

ತುರುವೇಕೆರೆ: ತಾಲ್ಲೂಕು ಒಕ್ಕಲಿಗರ ಸಂಘದ ವತಿಯಿಂದ ಜೂನ್ 27ರಂದು ನಾಡಪ್ರಭು ಕೆಂಪೇಗೌಡರ 515ನೇ ಜಯಂತ್ಯೋತ್ಸವವನ್ನು ಅದ್ದೂರಿಯಾಗಿ ನಡೆಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಪಿ.ಹೆಚ್.ಧನಪಾಲ್ ತಿಳಿಸಿದರು.

 

 

 

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಜಾತ್ಯಾತೀತ ವ್ಯಕ್ತಿತ್ವದ ಎಲ್ಲಾ ಸಮುದಾಯದ ಪ್ರಗತಿಗೆ ಶ್ರಮಿಸಿದ ನಾಡಪ್ರಭು ಕೆಂಪೇಗೌಡರು. ಅಂತಹ ಮಹಾನ್ ಚೇತನರ ಜಯಂತ್ಯೋತ್ಸವವನ್ನು ಜಾತಿ, ಧರ್ಮದ ಭೇಧವಿಲ್ಲದೆ ಜಾತ್ಯಾತೀತ ಮನೋಭಾವದಲ್ಲಿ ಎಲ್ಲರೊಡಗೂಡಿ ನಾಡಹಬ್ಬದ ರೀತಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಬೇಕೆಂಬ ನಿಲುವನ್ನು ಸಂಘ ಕೈಗೊಂಡಿದೆ.

 

 

ಇದಲ್ಲದೆ ನಶಿಸುತ್ತಿರುವ ಪಾರಂಪರಿಕ ಗ್ರಾಮೀಣ ಕಲೆಗಳ ಉತ್ತೇಜನಕ್ಕೂ ಜಯಂತ್ಯೋತ್ಸವ ವೇದಿಕೆಯಾಗಬೇಕೆನ್ನುವ ಉದ್ದೇಶವನ್ನು ಹೊಂದಲಾಗಿದೆ. ಯಾವುದೇ ಜಾತಿ ಭೇದವಿಲ್ಲದೆ ನಮ್ಮ ತಾಲ್ಲೂಕಿನ ವಿವಿಧ ಕ್ಷೇತ್ರಗಳ ಸಾಧಕರನ್ನು ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ ಎಂದರು.

 

 

 

 

ಜೂನ್ 27ರಂದು ಪಟ್ಟಣದ ಪ್ರವಾಸಿ ಮಂದಿರದ ಬಳಿಯಿಂದ ವಿವಿಧ ಜಾನಪದ ಕಲಾತಂಡಗಳ ವೈಭವದೊಂದಿಗೆ ಎತ್ತಿನಗಾಡಿಯಲ್ಲಿ ಕೆಂಪೇಗೌಡರ ಭಾವಚಿತ್ರವನ್ನು ಅದ್ದೂರಿಯಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಹಸ್ರಾರು ನಾಗರೀಕರೊಂದಿಗೆ ಮೆರವಣಿಗೆ ನಡೆಸಲಾಗುವುದು. ಇದಕ್ಕೂ ಮುನ್ನ ಯುವಕರು ಪಟ್ಟಣದಾದ್ಯಂತ ಬೈಕ್ ಜಾಥಾ ನಡೆಸಲಿದ್ದು ಶಾಸಕ ಎಂ.ಟಿ.ಕೃಷ್ಣಪ್ಪ ಜಾಥಾಗೆ ಚಾಲನೆ ನೀಡಲಿದ್ದಾರೆ.

 

ಬೆಳಿಗ್ಗೆ 10.30ಕ್ಕೆ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮವನ್ನು ಸಹ ಶಾಸಕ ಎಂ.ಟಿ.ಕೃಷ್ಣಪ್ಪ ಉದ್ಘಾಟಿಸಲಿದ್ದು, ಮಾಜಿ ಶಾಸಕರಾದ ಮಸಾಲಾ ಜಯರಾಮ್, ಎಂ.ಡಿ.ಲಕ್ಷ್ಮೀನಾರಾಯಣ್, ಹೆಚ್.ಬಿ.ನಂಜೇಗೌಡ, ಎಸ್.ರುದ್ರಪ್ಪ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.

 

 

 

ಮೈಸೂರಿನ ಡಾ.ಮಂಜುನಾಥ್ ಕೆಂಪೇಗೌಡರ ಜೀವನ ಚರಿತ್ರೆಯ ಬಗ್ಗೆ ಇತಿಹಾಸದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಸಮಾರಂಭದಲ್ಲಿ ತಾಲ್ಲೂಕಿನ ವಿವಿಧ ಕ್ಷೇತ್ರಗಳ ಸಾಧಕರನ್ನು ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಜಾತ್ಯಾತೀತವಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ಎಲ್ಲಾ ಸಮಾಜದ ಗಣ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿದರು.

 

 

 

 

ಗೋಷ್ಟಿಯಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷ ಎಂ.ಎನ್.ಚಂದ್ರೇಗೌಡ, ಪದಾಧಿಕಾರಿಗಳಾದ ರಾಜಣ್ಣ, ಡಿ.ಪಿ.ರಾಜು, ಶಂಕರಪ್ಪ, ಪುಟ್ಟರಂಗಪ್ಪ ಮುಂತಾದವರಿದ್ದರು.

 

 

ವರದಿ: ಗಿರೀಶ್ ಕೆ ಭಟ್, ತುರುವೇಕೆರೆ

 

Leave a Reply

Your email address will not be published. Required fields are marked *