ತುಮಕೂರು: ಜಿಲ್ಲೆಯಲ್ಲಿ ಜೂನ್ 24 ರಿಂದ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ-3ನ್ನು ವ್ಯವಸ್ಥಿತವಾಗಿ ನಡೆಸುವ ದೃಷ್ಟಿಯಿಂದ ಪರೀಕ್ಷಾ ಕಾರ್ಯ ಮತ್ತು ತಾಂತ್ರಿಕ ಕಾರ್ಯಗಳ ನಿರ್ವಹಣೆಗೆ ತ್ರಿಸದಸ್ಯ ಸಮಿತಿಯನ್ನು ರಚಿಸಬೇಕೆಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಪರೀಕ್ಷೆಗೆ ನೋಂದಣಿಯಾದ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕೇಂದ್ರಗಳ ಮಾಹಿತಿಯನ್ನು ಪಡೆದು ಪ್ರತಿ ಪರೀಕ್ಷಾ ಕೇಂದ್ರಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್, ಆರೋಗ್ಯ ಕಾರ್ಯಕರ್ತರ ನೇಮಕ, ಸಿಸಿ ಟಿವಿ ಅಳವಡಿಕೆ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದರು.
ಪರೀಕ್ಷಾ ಕೇಂದ್ರದ ಪ್ರತಿ ಕೊಠಡಿಗೆ 24 ವಿದ್ಯಾರ್ಥಿಗಳಿಗೆ ಮಾತ್ರ ಆಸನ ವ್ಯವಸ್ಥೆ ಕಲ್ಪಿಸಬೇಕು. ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಪ್ರತಿ ಡೆಸ್ಕ್ ನಡುವೆ ಅಂತರವನ್ನು ಕಾಯ್ದುಕೊಳ್ಳಬೇಕು. ಪರೀಕ್ಷಾ ಕೊಠಡಿಗಳಲ್ಲಿ ಗಾಳಿ-ಬೆಳಕಿನ ವ್ಯವಸ್ಥೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಪರೀಕ್ಷಾ ದಿನಗಳಂದು ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಉಪನಿರ್ದೇಶಕ ಗಂಗಾಧರ್ ಮಾತನಾಡಿ, ಜಿಲ್ಲೆಯ 13 ಕೇಂದ್ರಗಳಲ್ಲಿ ಜೂನ್ 24 ರಿಂದ ಜುಲೈ 5ರವರೆಗೆ ಪಿಯುಸಿ ಪರೀಕ್ಷೆ ನಡೆಯಲಿದ್ದು, 93 ಖಾಸಗಿ ವಿದ್ಯಾರ್ಥಿಗಳು, 751 ಪುನರಾವರ್ತಿತ, ಮೊದಲ ಪ್ರಯತ್ನದಲ್ಲಿ 2153 ಸೇರಿ ಒಟ್ಟು 2997 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದಾರೆ. ಪ್ರಶ್ನೆ ಪತ್ರಿಕೆ ವಿತರಣೆಗಾಗಿ ಮಾರ್ಗಾಧಿಕಾರಿಗಳು, ಪ್ರತಿ ಪರೀಕ್ಷಾ ಕೇಂದ್ರಕ್ಕೆ ವಿಶೇಷ ಜಾಗೃತ ದಳ ಸದಸ್ಯರು ಹಾಗೂ ಮುಖ್ಯ ಅಧೀಕ್ಷಕರ ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಬ್ದುಲ್ ಖಾದರ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಹಾಲಸಿದ್ಧಪ್ಪ ಪೂಜೇರಿ ಸೇರಿದಂತೆ ವಿವಿಧ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ಭಾಗವಹಿಸಿದ್ದರು.